“ಅಮ್ಮ ಅಮ್ಮ ಒಂದು ಕಥೆ ಹೇಳಮ್ಮಾ…’ ಎಂದು ಸುಮಿತ್ ಹಠ ಮಾಡತೊಡಗಿದ. ಅಮ್ಮ “ಯಾವ ಕಥೆ ಬೇಕು?’ ಎಂದು ಕೇಳಲು ಸುಮಿತ್ “ಸಂವತ್ಸರಗಳ ಕಥೆ ಹೇಳು’ ಎಂದು ಒಂದೇ ಉಸಿರಿಗೆ ಹೇಳಿದ. ವಾರಗಳ ಹಿಂದೆ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿದ್ದಾಗಿನಿಂದ ಅವನಿಗೆ ಸಂವತ್ಸರಗಳ ಹಿನ್ನೆಲೆಯನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಮೂಡಿತ್ತು. ಅಮ್ಮ ಯುಗಾದಿಯ ಕಥೆ ಹೇಳಲು ಶುರುಮಾಡಿದರು:
“ಒಂದು ಸಂವತ್ಸರದಲ್ಲಿ ಆರು ಋತುಗಳು. ಋತುಗಳ ರಾಜ ವಸಂತ. ವಸಂತ ರಾಜನಿಗೆ ಚೈತ್ರ, ವೈಶಾಖ ಎಂಬ ಇಬ್ಬರು ಹೆಂಡತಿಯರು. ವಸಂತನಿಗೆ ವರ್ಷ, ಗ್ರೀಷ್ಮ, ಹೇಮಂತ, ಶರದ್, ಶಿಶಿರ ಎಂಬ ತಮ್ಮಂದಿರಿದ್ದರು. ಅವರಿಗೂ ವಸಂತನಂತೆ ಇಬ್ಬರು ಪತ್ನಿಯರು. ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಿಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಇವರೆಲ್ಲಾ ತಮ್ಮಂದಿರ ಪತ್ನಿಯರಾಗಿದ್ದರು. ಅವರಿಗೆ ಹದಿನೈದು ಮಂದಿ ಮಕ್ಕಳು. ಪಾಡ್ಯ, ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ, ದಶಮಿ, ಏಕಾದಶಿ,ದ್ವಾದಶಿ, ತ್ರಯೋದಶಿ, ಚತುರ್ದಶಿ, ಪೂರ್ಣಿಮಾ ಎಂಬುದು ಅವರ ಹೆಸರು.
ಬೇಸಿಗೆಯಲ್ಲಿ ರಜೆಯ ಮಜ ಸವಿಯಲು ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ ಇವರು ತಮ್ಮ ಹದಿನೈದು ಮಕ್ಕಳೊಂದಿಗೆ ತವರಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ಮಳೆಯಲ್ಲಿ ಆಟವಾಡಲು ಆಷಾಢ, ಶ್ರಾವಣ, ಭಾದ್ರಪದ, ಆಶ್ವಿಜ- ಇವರು ತವರಿಗೆ ಹೋಗುತ್ತಾರೆ. ಚಳಿಗಾಲದಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗಿರಲು ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘಂದಿರು ತವರಿಗೆ ಹೋಗುತ್ತಾರೆ.
ಋತುಗಳ ಮಕ್ಕಳೂ, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ಇತ್ಯಾದಿ ಇಪ್ಪತ್ತೇಳು ನಕ್ಷತ್ರಿಕ ಮಕ್ಕಳೂ ಪ್ರತಿನಿತ್ಯ ಸೂರ್ಯನ ಶಾಲೆಗೆ ಹೋಗುತ್ತಾರೆ. ಅಲ್ಲಿ ಚಂದಮಾಮ ಅವರ ಗುರು. ಪ್ರತಿ ಪೂರ್ಣಿಮೆಗೆ ಅವನ ಎಕ್ಸ್‌ಟ್ರಾ ಕ್ಲಾಸ್ ಇರುತ್ತದೆ.ಅಮಾವಾಸ್ಯೆಯಂದು ತಿಂಗಳಿಗೊಮ್ಮೆ ರಜ. ರವಿವಾರದಿಂದ ಶನಿವಾರದ ಏಳು ದಿನವೂ ಅವನ ತರಗತಿ ನಡೆಯುತ್ತದೆ. ಸೂರ್ಯ ಅವರ ಶಾಲೆಯ ಪ್ರಾಂಶುಪಾಲ.
ಹೀಗೆ ಹನ್ನೆರಡು ಮಾಸ (ಚೈತ್ರ, ವೈಶಾಖ… ಇತ್ಯಾದಿ), ಹನ್ನೆರಡು ರಾಶಿಗಳ(ಮೇಷ,ವೃಷಭ…) ಕಾಲ ಕಳೆದು ಮಕರ ಸಂಕ್ರಮಣದಿಂದ ಕರ್ಕ ಸಂಕ್ರಮಣದವರೆಗೆ ಉತ್ತರಾಯಣ, ಕರ್ಕದಿಂದ ಮಕರ ಸಂಕ್ರಮಣದವರೆಗೆ ದಕ್ಷಿಣಾಯನವನ್ನು ಪೂರೈಸಿ ಹೊಸ ಸಂವತ್ಸರದಲ್ಲಿ ಮತ್ತೆ ಹೊಸ ತರಗತಿಗಳು ಆರಂಭ. ಮತ್ತೆ ವಸಂತ ರಾಜನ ಆಳ್ವಿಕೆ ಶುರುವಾಗುವ ಕಾಲವೇ ಯುಗಾದಿಯ ದಿನ.
ಪ್ರಭವ, ವಿಭವ, ಶುಕ್ಲ ಇತ್ಯಾದಿ 60 ಸಂವತ್ಸರಗಳು. ಹೀಗೆ 60 ಸಂವತ್ಸರಗಳನ್ನು ಕಂಡ ಮನುಷ್ಯ 60 ವಸಂತ ರಾಜನ ಆಳ್ವಿಕೆಯೊಂದಿಗೆ 6 ಋತುಗಳ ರಾಜಾಡಳಿತವನ್ನು ಆರವತ್ತು ಬಾರಿಯೂ, ಸೂರ್ಯ, ಚಂದ್ರಾದಿಗಳ ಶಾಲಾ ವಾರ್ಷಿಕೋತ್ಸವವನ್ನು 60ಬಾರಿಯೂ ಕಂಡ ಶುಭ ಸಂದರ್ಭದಲ್ಲಿ ಷಷ್ಯಬ್ದಿಯನ್ನು ಆಚರಿಸುತ್ತಾರೆ.’
– ಎಂದು ಸಂವತ್ಸರ ಪುರಾಣದೊಂದಿಗೆ ಯುಗಾದಿ ಕಥೆಯನ್ನು ಸುಮಿತನ ಅಮ್ಮ ಹೇಳಿ ಮುಗಿಸಿದರು.
— ಸಾವಿತ್ರಿ ಶ್ಯಾನಭಾಗ