ರಾಯಚೂರು: ಜಿಲ್ಲೆಯನ್ನು ಬಾ ಧಿಸುತ್ತಿರುವ ಶಾಶ್ವತ ಸಮಸ್ಯೆಗಳಲ್ಲಿ ಉಭಯ ನದಿಗಳಿಗೆ ಎದುರಾಗುವ ನೆರೆಯೂ ಒಂದು. ಆದರೆ, ಈ ಶಾಶ್ವತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾತ್ರ ಇಂದಿಗೂ ಕಲ್ಪಿಸಲಾಗಿಲ್ಲ. ಅದರಲ್ಲೂ ಮುಖ್ಯವಾಗಿ ತಾಲೂಕಿನ ಗುರ್ಜಾಪುರ ಗ್ರಾಮಸ್ಥರಿಗೆ ಈ ಬಾರಿಯೂ ಮಳೆ ಹೆಚ್ಚಾದರೆ ಜಲಕಂಟಕ ತಪ್ಪದು. ಕೃಷ್ಣಾ ಮತ್ತು ಭೀಮಾ ನದಿ ಸಂಗಮದ ಸಮೀಪ ಇರುವ ಈ ಗ್ರಾಮಕ್ಕೆ ನದಿಗೆ ನೀರು ಹೆಚ್ಚು ಬಿಟ್ಟರೆ ಪ್ರವಾಹ ಭೀತಿ ಖಚಿತ.
ಈ ಸಮಸ್ಯೆ ಇಂದು ನಿನ್ನೆಯದಲ್ಲ. 2009ರಲ್ಲಿಯೇ ಈ ಗ್ರಾಮವನ್ನು ಸ್ಥಳಾಂತರಿಸಬೇಕು ಎಂಬ ಸರ್ಕಾರದ ಆಶಯವನ್ನು ಕಳಪೆ ಕಾಮಗಾರಿ ನುಂಗಿ ಹಾಕಿದೆ. ಪುನರ್ವಸತಿ ಸ್ಥಳದಲ್ಲಿ ನಿರ್ಮಿಸಿದ ಸುಮಾರು 98 ಮನೆಗಳು ಅವೈಜ್ಞಾನಿಕ ಎಂಬ ಕಾರಣಕ್ಕೆ ಗ್ರಾಮಸ್ಥರು ಆ ಕಡೆ ತಿರುಗಿಯೂ ನೋಡಿಲ್ಲ. ಹೀಗಾಗಿ ಆ ಮನೆಗಳೆಲ್ಲ ಅವಸಾನ ಸ್ಥಿತಿಗೆ ತಲುಪಿವೆ. ಈಗ ಮತ್ತೆ ಜಿಲ್ಲಾಡಳಿತ ಗ್ರಾಮಸ್ಥರ ಮುಂದೆ ಹೊಸ ಪ್ರಸ್ತಾವನೆ ಇಟ್ಟಿದ್ದು; ಅದಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿದ್ದರಿಂದ ಒಂದು ಆಶಾವಾದ ಮೂಡಿದೆ. ಹಾಗಂತ ಸಮಸ್ಯೆ ಇತ್ಯರ್ಥವಾಗಿಲ್ಲ. ಈ ಕ್ಷಣಕ್ಕೆ ಪ್ರವಾಹ ಎದುರಾದರೆ ಮಾತ್ರ ಈ ಗ್ರಾಮಸ್ಥರು ಜೀವ ರಕ್ಷಣೆಗೆ ಮತ್ತದೆ ಗಂಜಿ ಕೇಂದ್ರಗಳು, ನಿರಾಶ್ರಿತ ತಾಣಗಳಿಗೆ ಹೋಗಬೇಕಿದೆ. 2009ರಲ್ಲಿ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದ ವೇಳೆ ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿ ಪಾತ್ರದ ಅನೇಕ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಅದರಲ್ಲಿ ಈ ಗುರ್ಜಾಪುರ ಕೂಡ ಒಂದು. ಆಗ ಸರ್ಕಾರ ಗ್ರಾಮದಿಂದ ಸುಮಾರು 7-8 ಕಿ.ಮೀ. ದೂರದಲ್ಲಿ 29 ಎಕರೆ ಜಮೀನು ಸ್ವಾ ಧೀನಪಡಿಸಿಕೊಂಡು ಪುನರ್ವಸತಿಗೆ ಮುಂದಾಯಿತು. 30ಗಿ40 ಸ್ಥಳದಲ್ಲಿ ಒಂದರಂತೆ 98 ಮನೆಗಳನ್ನು ನಿರ್ಮಿಸಲಾಯಿತು. ಇನ್ನೇನು ಹಕ್ಕು ಪತ್ರ ನೀಡಬೇಕು ಎಂದಾಗ ಗ್ರಾಮಸ್ಥರು ಸುತಾರಾಂ ಆ ಮನೆಗಳಿಗೆ ಹೋಗಲು ಒಪ್ಪಲಿಲ್ಲ. ಮುಖ್ಯವಾಗಿ ಮನೆಗಳು ತೀರ ಚಿಕ್ಕದಾಗಿವೆ. ಜನ ಜಾನುವಾರು ಕಟ್ಟಲು ಸ್ಥಳ ಇಲ್ಲ. ಅಲ್ಲದೇ ವಾಸ್ತು ಪ್ರಕಾರವೇ ಮನೆ ಕಟ್ಟಿಲ್ಲ ಎಂದು ದೂರಿದ ಜನ ನಮಗೆ ಆ ಮನೆಗಳೇ ಬೇಡ ಎಂದು ತಿರಸ್ಕರಿಸಿದರು. ಅಲ್ಲಿಂದ ಪ್ರತಿ ಬಾರಿ ಪ್ರವಾಹ ಎದುರಾದಾಗ ಅ ಧಿಕಾರಿಗಳು ಗ್ರಾಮಕ್ಕೆ ಹೋಗುವುದು, ಮನವೊಲಿಸುವುದು ಮರಳಿ ಬರುವುದೇ ಆಗಿತ್ತು.
ಆದರೆ, 2019ರಲ್ಲಿ ಮತ್ತೆ ಉಂಟಾದ ಭೀಕರ ಪ್ರವಾಹದಿಂದಾಗಿ ಗುರ್ಜಾಪುರ ಗ್ರಾಮದ ಸ್ಥಿತಿ ಶೋಚನೀಯವಾಗಿತ್ತು. ಈ ಹಿಂದೆ ಕಟ್ಟಿದ ಮನೆಗಳ ಸ್ಥಿತಿಗತಿ ಪರಿಶೀಲಿಸಿದಾಗ ಈ ಮನೆಗಳು ವಾಸಯೋಗ್ಯವಾಗಿಲ್ಲದ ಕಾರಣ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಈ ಸ್ಥಳದಲ್ಲಿ ಜಾಲಿ ಕಂಟಿಗಳು ಬೆಳೆದಿತ್ತು. ವಿದ್ಯುತ್ ಕಂಬಗಳು ನೆಲಕ್ಕೆ ಒರಗಿದ್ದವು. ರಸ್ತೆಗಳು, ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ. ಈಗ ಅಲ್ಲಿ ಬೆಳೆದ ಜಾಲಿ ಕಂಟಿ ತೆರವು ಮಾಡುತ್ತಿದ್ದು, ತೀರ ಹಾಳಾದ ಮನೆಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನಿವೇಶನ ನೀಡಲು ಸಮ್ಮತಿ: ಪುನರ್ವಸತಿ ಕೇಂದ್ರಕ್ಕೆ ಗುರ್ಜಾಪುರ ಗ್ರಾಮಸ್ಥರು ಹೋಗುವುದಿಲ್ಲ ಎಂದು ತಿಳಿಸಿರುವ ಕಾರಣ ಈಗ ಆ ಸ್ಥಳ ನಿರುಪಯುಕ್ತವಾಗಿದೆ.
ಕಳೆದ ವರ್ಷ ಗ್ರಾಮಸ್ಥರ ಸಭೆ ನಡೆಸಿದ ಜಿಲ್ಲಾಧಿಕಾರಿ ಎದುರು ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಮಂಡಿಸಿದ್ದರು. ಅದರಲ್ಲಿ ಮುಖ್ಯವಾಗಿ ನಮಗೆ ಜಾನುವಾರು ಕಟ್ಟಿಕೊಳ್ಳಲು ಕೂಡ ಸ್ಥಳ ಬೇಕು. ಮನೆಗಳು ವಾಸ್ತು ಪ್ರಕಾರ ಇರಬೇಕು ಎಂದರು. ಇದಕ್ಕೆ ಒಪ್ಪಿದ ಜಿಲ್ಲಾಡಳಿತ ಈಗಿರುವ ಮನೆಗಳನ್ನು ತೆರವುಗೊಳಿಸಿ 30ಗಿ50 ಅಳತೆಯ ನಿವೇಶನಗಳನ್ನೇ ನೀಡಲು ನಿರ್ಧರಿಸಿದೆ. ಫಲಾನುಭವಿಗಳೇ ತಮಗೆ ಬೇಕಾದ ರೀತಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ. ಸುಮಾರು 290 ಕುಟುಂಬಗಳಿದ್ದು, ಒಟ್ಟಾರೆ 29 ಎಕರೆ ಪ್ರದೇಶದಲ್ಲಿ ನಿವೇಶನ ನೀಡಲು ಮುಂದಾಗಿದೆ. ಈಗ ನಿವೇಶನದ ಹಕ್ಕು ಪತ್ರಗಳನ್ನು ಮಾತ್ರ ನೀಡುತ್ತಿದ್ದು, ಪಂಚಾಯಿತಿಯಲ್ಲಿ ನಿವೇಶನ ಮುಟೇಶನ್ ಆದ ಬಳಿಕ ಯಾವುದಾದರೂ ವಸತಿ ಯೋಜನೆಯಡಿ ಹಣ ಮಂಜೂರು ಮಾಡಲು ಜಿಲ್ಲಾಡಳಿತ ನಿ ರ್ಧರಿಸಿದೆ. ಹಂತ-ಹಂತವಾಗಿ ಒಟ್ಟು ಐದು ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರಿಂದ ಇದಕ್ಕೆ ಗ್ರಾಮಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.