Advertisement
ನಮ್ಮ ಪ್ರವಾಸ ಲಡಾಖ್‌ಗೆಂದು ನಿರ್ಧರಿಸಿ ಲೇಹ್ ವಿಮಾನ ನಿಲ್ದಾಣ ತಲುಪಿ ಮೊದಲ ದಿನ ವಾತಾವರಣಕ್ಕೆ ಒಗ್ಗಲು ಹೋಟೆಲಿನ ಕೊಠಡಿಯಲ್ಲೆ ಉಳಿದೆವು. ಉಳಿಯಲೇಬೇಕು ಕೂಡಾ. ಮರುದಿನದಿಂದ ಹಕ್ಕಿ ಅರಸುವ ಅಲೆದಾಟ ಆರಂಭವಾಯಿತು. ಗೈಡ್ ಸೇರಿ ಒಂಬತ್ತು ಜನರಿದ್ದ ನಮ್ಮ ತಂಡ ಎರಡು ವಾಹನಗಳಲ್ಲಿ ಲೇಹ್ ನಿಂದ 50 ಕಿ.ಮೀ ದೂರದಲ್ಲಿದ್ದ 230 ಚ.ಮೈಲಿ ವಿಸ್ತೀರ್ಣದ ಹೆಮಿಸ್ ನ್ಯಾಷನಲ್ ಪಾರ್ಕಿನತ್ತ ಪಯಣಿಸಿತು. ಹಿಮಚಿರತೆ ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವಾರು ಜಾತಿಯ ಸಸ್ತನಿಗಳಿಗೆ, ಎಪ್ಪತ್ತಕ್ಕೂ ಹೆಚ್ಚು ವೈವಿಧ್ಯಮಯ ಹಕ್ಕಿಗಳ ನೆಲೆಯಾದ ಹೆಮಿಸ್‌ನ ಉತ್ತರಕ್ಕೆ ಸಿಂಧೂ ನದಿಯಿದ್ದರೆ ಉಳಿದ ಕಡೆ ಪರ್ವತಶ್ರೇಣಿಗಳಿವೆ. ಹೆಮಿಸ್ ತಲುಪುವ ಹೊತ್ತಿಗೆ ಟೆಂಪೋಗಳಲ್ಲಿ ಜನ ಬಂದರು. ಅಲ್ಲಿಯೇ ಇದ್ದ ಕೆಲವರು ಬಂದ ಪ್ರವಾಸಿಗಳನ್ನು ಸ್ವಾಗತಿಸಿ ಟ್ರೆಕ್ಕಿಂಗಿಗೆ ಕರೆದೊಯ್ಯಲು ಸಿದ್ಧರಾದರು.
ಗಾಡಿ ನಿಲ್ಲಿಸಿ ಇಳಿದೆವು. ಕ್ಯಾಮೆರಾ ಟ್ರೈಪಾಡುಧಾರಿಗಳಾದ ನಾವೂ ಒಂದು ರೀತಿಯ ಟ್ರೆಕ್ಕಿಂಗ್ ಮಾಡುತ್ತಾ ಪಾಡು ಪಡುತ್ತಾ ಏರುಮುಖದ ದಾರಿ ಹಿಡಿದೆವು. ಹೆಮಿಸ್ ಉದ್ಯಾನವನ ಎಂದರೂ, ಇತ್ತ ವನವೂ ಅತ್ತ ಉದ್ಯಾನವನವೂ ಆಗಿರದ ಎತ್ತೆತ್ತ ತಿರುಗಿದರತ್ತತ್ತ ಕಣಿವೆ-ಇಳಿಜಾರುಗಳ ಮರುಳ ಬಣ್ಣದ ಮರುಳು ಮಾಡುವ ಪರ್ವತಗಳ ಸಾಲುಗಳು. ಎತ್ತರದ ಮರಗಳು ಬಹುತೇಕ ನಾಪತ್ತೆ. ಇದ್ದವು ಕೇವಲ ಆಳೆತ್ತರದ ಕುರುಚಲು ಪೊದೆಗಳು. ಕಣಿವೆಯಂಚಿನಲ್ಲಿ ಹರಿಯುತ್ತಿದ್ದ ನದಿ. ಅಲ್ಲಲ್ಲಿ ಕಾರುಗಳು ನಿಂತಿದ್ದವು. ಇದ್ಯಾಕೆಂದು ಮುಂದೆ ನೋಡಿದರೆ ರಸ್ತೆಯೇ ಇರಲಿಲ್ಲ. ಇಳಿದು ನಡೆದು ಹೋಗಬಹುದಾದ ಕಿರುದಾರಿ. ಕಣಿವೆಯ ಕೆಳಗಿನ ಜನ ಹತ್ತಿ ಮೇಲೇರಿ ಬಂದು ಕಾರೇರಿ ಹೋಗಬೇಕಿತ್ತು. ಲಗೇಜ್ ಇದ್ದರೆ ಹೇಸರಗತ್ತೆಗಳ ಮೇಲೆ ಹೊರಿಸಿ ಸಾಗಿಸುತ್ತಿದ್ದರು. ಹಕ್ಕಿಗಳೆ, ಎಲ್ಲಿರುವಿರಿ?
ಹಕ್ಕಿಗಳೆ ನೀವೆಲ್ಲಾ ಎಲ್ಲಿರುವಿರಿ, ಏಕೆ ಕಾಣದೆ ಇರುವಿರಿ? ಎಂದರಸುತ್ತಾ ನಡೆಯುತ್ತಿದ್ದಂತೆ ನಮ್ಮ ಗೈಡ್ ನಾಮ್ಯಾಲ್, ಚುಕಾರ್ ಚುಕಾರ್ ಎಂದು ಪಿಸುಗುಟ್ಟಿ ಎಲ್ಲರನ್ನೂ ಗಪ್‌ಚುಪ್ಪಾಗಿಸಿದ. ರಸ್ತೆ ಬದಿಯಿಂದ ಉರುಳುರುಳುತ್ತಾ ಮರಳ ಬಣ್ಣದ ಗುಂಡುಗುಂಡಾದ ಚುಕಾರ್ ಪಾರ್ಟರಿಡ್ಜ್ ರಸ್ತೆ ದಾಟುವ ಸನ್ನಾಹದಲ್ಲಿತ್ತು. ಅದನ್ನು ಕಂಡಾಕ್ಷಣ ನಮ್ಮ ನಡಿಗೆ ನಿಂತುಹೋಯಿತು. ಕ್ಯಾಮೆರಾ ಸಜ್ಜಾಯಿತು. ಟ್ರೈಪಾಡನ್ನು ಚುಕಾರ್‌ನ ಲೆವಲ್ಲಿಗೆ ಇಳಿಸುತ್ತಿದ್ದೆವು. ನಮ್ಮ ತಂಡದಲ್ಲಿದ್ದ ರಾಹುಲ…, ಅಂಕುರ್ ನೆಲದಲ್ಲಿ ಕುಳಿತರೆ, ಮೋಹನ್ ಮೋನೋಪಾಡ್ ಹಿಡಿದು ನಿಂತರು. ಧೈರ್ಯ ನೆಲದ ಮೇಲೆ ಅಡ್ಡಾದರೆ, ಅವರ ಅಪ್ಪ ಅಮ್ಮ ಪುಟ್ಟ ಕ್ಯಾಮೆರಾದೊಡನೆ ನಿಂತರು. ಡ್ರೈವರುಗಳಿಬ್ಬರೂ ಕಾರಿಗಂಟಿ ನಿಂತಿದ್ದರು. ನೆಲದ ಮೇಲೆ ಕೂರಲಾರದ ನಾನು ಸ್ಟೂಲಿನಲ್ಲಿದ್ದೆ. ಚುಕಾರ್ ಪಕ್ಷಿಗೆ ಗೈಡ್ ನಾಮ್ಯಾಲ್ ಸ್ಪಾಟಿಂಗ್ ಸ್ಕೋಪ್ ಅಡ್ಜಸ್ಟ್ ಮಾಡುತ್ತಿದ್ದರೆ, ಖುಷ್ಬೂ ಮುಂದೆ ಹೋಗಿ ನಮ್ಮ ಹಾಗೂ ಚುಕಾರ್ ಪಕ್ಷಿಯ ಪಟ ತೆಗೆಯುವ ಸಿದ್ಧತೆಯಲ್ಲಿದ್ದರು.
Related Articles
ಇಷ್ಟು ಜನರ ಸಮ್ಮುಖದಲ್ಲಿ ಚುಕಾರ್ ಮಹಾಸ್ವಾಮಿಗಳ ಸವಾರಿ ಚಿತ್ತೈಸಿತು. ಎಂಟು ಕ್ಯಾಮೆರಾ ಹಿಡಿದ ನಮ್ಮ ಸೈನ್ಯ ಕ್ಯಾಮೆರಾ ಕ್ಲಿಕ್ಕಿಸಿ ನಜರು ಒಪ್ಪಿಸುತ್ತಿತ್ತು. ಚುಕಾರ್ ಅಂಜದೆ ಅಳುಕದೆ ರಾಜಗಾಂಭೀರ್ಯದಿಂದ ನಜರನ್ನು ಒಪ್ಪಿಸಿಕೊಳ್ಳುತ್ತಾ ಹೆಜ್ಜೆಯಿಡುತ್ತಿತ್ತು. ಇನ್ನೇನು ರಸ್ತೆಯಂಚಿಗೆ ತಲುಪಿ ಮರೆಯಾಗಬಹುದು ಎಂದುಕೊಳ್ಳುವಷ್ಟರಲ್ಲಿ ಹಿಂದೆ ತಿರುಗಿ ಮುನ್ನಡೆದು ಮುಂದಿದ್ದ ಮರಳಗುಡ್ಡೆಯತ್ತ ಸಾಗಿತು. ಜಂಬೂಸವಾರಿ ಮುಗಿಸಿ ಸಿಂಹಾಸನವನ್ನೇರಿ ದರ್ಬಾರ್ ಮಾಡಿ ನಮ್ಮ ಕಣ್ಮನಗಳಿಗೆ ಸಂತೋಷ ನೀಡಲು ನಿಶ್ಚಯಿಸಿತ್ತೇನೋ! ನಾವು ಮೆಲ್ಲಮೆಲ್ಲನೆ ತೆವಳುತ್ತಾ ಹಿಂದೆ ಸಾಗಿದೆವು. ಅದು ಮರಳುದಿಬ್ಬವನ್ನೇರಿ ಕ್ಷಣಕಾಲ ತಿರುಗಿ “ಚಿತ್ರಪ್ರಜೆಗಳೆ, ಎಲ್ಲರೂ ಕ್ಷೇಮವೇ, ನಿಮಗೆ ಬೇಕಾದಂತೆ ಚಿತ್ರ ಸೆರೆಗೈದಿರಿ ಅಲ್ಲವೆ, ನಾವಿನ್ನು ದಯಮಾಡಿಸುವೆವು’ ಎನ್ನುವಂತೆ ನೋಡಿತು. ನಾವೂ ಮನದಲ್ಲೇ ಜೈ ಚುಕಾರ್ ಜೈಜೈ ಚುಕಾರ್ ಎನ್ನುತ್ತಾ ಕ್ಯಾಮೆರಾದಲ್ಲಿದ್ದ ಕಣ್ಣನ್ನು ಕೀಳದೆ ಕ್ಲಿಕ್ಕಿಸುತ್ತಿದ್ದೆವು. ಚುಕಾರ್ ಮಹಾರಾಜರು ಮಹಾನವಮಿ ಅಲ್ಲಲ್ಲ, ಮರಳಿನ ದಿಬ್ಬವಿಳಿದು ಇಳಿಜಾರಿನಲ್ಲಿದ್ದ ಪೊದೆಯೊಳಗೆ ಮರೆಯಾದರು! ನಮ್ಮೆಲ್ಲರ ಮುಖದ ಮೇಲೆ ಮಂದಹಾಸ ಮಿನುಗುತ್ತಿತ್ತು.
Advertisement
ಚಿತ್ರ- ಲೇಖನ: ಡಾ. ಲೀಲಾ ಅಪ್ಪಾಜಿ