Advertisement
ಬೆಳಗಾವಿ: ಭಾರೀ ಮಳೆ ಬಂತೆಂದರೆ ಇಕ್ಕಟ್ಟಾದ ಬಳ್ಳಾರಿ ನಾಲೆಗೆ ಗ್ರಹಣ ಹಿಡಿಯುವುದಂತೂ ನಿಶ್ಚಿತ. ಇಕ್ಕಟ್ಟಾಗಿದ್ದರಿಂದ ನೀರು ಮುಂದೆ ಸರಾಗವಾಗಿ ಹರಿಯದೇ ಸುತ್ತಲಿನ ಹೊಲಗಳಿಗೆ ನೀರು ನುಗ್ಗಿ ಪ್ರತಿ ವರ್ಷ ರೈತರು ಕಷ್ಟ ಅನುಭವಿಸುವುದಂತೂ ತಪ್ಪಿಲ್ಲ. ಬೆಳಗಾವಿಯಿಂದ ಹಿಡಿದು ಹುದಲಿವರೆಗಿನ ನಾಲೆಯ ಪಕ್ಕದ ರೈತರ ನೋವು ಹೇಳತೀರದಾಗಿದೆ. ಬಳ್ಳಾರಿ ನಾಲೆ ಪ್ರತಿ ವರ್ಷ ರೈತರ ಪಾಲಿಗೆ ವರವಾಗದೇ ಶಾಪವಾಗಿದೆ.
Related Articles
Advertisement
ಬಳ್ಳಾರಿ ನಾಲೆ ಸುತ್ತಲೂ ಇರುವ ಅನಗೋಳ, ಶಹಾಪುರ, ವಡಗಾಂವ, ಜುನೆ ಬೆಳಗಾವಿ, ಹಲಗಾ, ಬೆಳಗಾವಿ, ಮುಚ್ಚಂಡಿ, ಖನಗಾಂವ, ಹುದಲಿವರೆಗೆ ಸಿದ್ದನಹಳ್ಳಿ, ಕಬಲಾಪುರ, ಚಂದೂರ, ಮಾಸ್ತಿಹೊಳಿ, ಹುದಲಿ ಸೇರಿದಂತೆ ಅನೇಕ ಹಳ್ಳಿಗಳ ರೈತರ ಗೋಳು ಕೇಳುವವರು ಇಲ್ಲವಾಗಿದ್ದಾರೆ. 2019ರಲ್ಲಿ ಅಪ್ಪಳಿಸಿದ ನೆರೆಯಿಂದಾಗಿ ಸಂಪೂರ್ಣ ಹೊಲಗಳೇ ಕೊಚ್ಚಿ ಹೋಗಿವೆ.
ಕೊಚ್ಚಿ ಹೋದ ಹೊಲಗಳು: ಕಲ್ಯಾಳ ಫುಲ್‌ದಿಂದ ಬಂದ ಬಳ್ಳಾರಿ ನಾಲೆಯ ನೀರಿನಿಂದ ಸಿದ್ದನಹಳ್ಳಿಯ ರೈತರ ಹೊಲಗಳೇ ಕೊಚ್ಚಿ ಹೋಗಿವೆ. ಹೊಲ ಎಲ್ಲಿದೆ ಎಂಬುದನ್ನು ಜನ ಇನ್ನೂ ಹುಡುಕಾಡುತ್ತಿದ್ದಾರೆ. 2ರಿಂದ3 ಅಡಿವರೆಗೂ ಕಲ್ಲುಗಳು ಬಿದ್ದು ಹೊಲಗಳೆಲ್ಲ ಮುಚ್ಚಿ ಹೋಗಿವೆ. ಇದನ್ನು ತೆರವುಗೊಳಿಸಿ ಹೊಲ ಮಾಡಿಕೊಡಬೇಕು ಎಂಬುದನ್ನು ಜಿಲ್ಲಾಡಳಿತಕ್ಕೆ ಅಲ್ಲಿಯ ರೈತರು ಮನವಿ ಮಾಡಿದರೂ ಇನ್ನೂ ಯಾರೂ ಇತ್ತ ತಿರುಗಿ ನೋಡುತ್ತಿಲ್ಲ. ಪ್ರವಾಹದಿಂದಾಗಿ ಬೆಳೆಹಾನಿ ಆಗಿ ರೈತರು ಬದುಕುವುದು ಕಷ್ಟಕರವಾಗಿದೆ. 2019ರಲ್ಲಿ ಬಂದಿದ್ದ ಪ್ರವಾಹದಂತೆಯೇ 2021ರಲ್ಲಿಯೂ ಪುನರಾವರ್ತನೆ ಆಗಿದೆ. ಹಿಂಗಾರು ಮತ್ತು ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಬಳ್ಳಾರಿ ನಾಲೆ ಅಗಲಿಗರಣ ಹಾಗೂ ಹೂಳು ತೆಗೆಯಲು ಅನುದಾಣ ನೀಡುವುದಾಗಿ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಬಳ್ಳಾರಿ ನಾಲಾ ಇನ್ನೂ ಸುಧಾರಣೆ ಕಂಡಿಲ್ಲ. ರೈತರ ಕಷ್ಟವಂತೂ ಇನ್ನೂ ಮುಗಿದಿಲ್ಲ. ಆದರೆ ಕಾರಜೋಳರು ಇದನ್ನು ನೋಡಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.