ಮಳೆಗಾಲ ಆರಂಭವಾದ್ರೆ ಸಾಕು ಜಲಪಾತಗಳತ್ತ ಪ್ರವಾಸಿಗರು ಮುಖ ಮಾಡತ್ತಾರೆ. ಅದರಲ್ಲೂ ಮೂರು ರಾಜ್ಯಗಳ ಗಡಿಯಲ್ಲಿ ಇರುವ ಆ ಚಲುವೆಯನ್ನ ಕಣ್ಣತ್ತುಂಬಿ ನೋಡಲು ಜನಸಾಗರವೇ ಹರಿದು ಬರುತ್ತದೆ. ಅವಳ ಸೌಂದರ್ಯದ ಸೊಬಗಿನಲ್ಲಿ ಪ್ರತಿಯೊಬ್ಬರು ಮೈಮರೆತು ಹೋಗುತ್ತಾರೆ. ಅದುವೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅಂಬೋಲಿ ಜಲಪಾತ.
ಹೌದು, ಈ ಜಲಪಾತದ ಸೌಂದರ್ಯವೇ ಅಂತಹದು. ಅಂಬೋಲಿ ಜಲಪಾತ ತುಂಬಾ ವಿಶೇಷವಾಗಿದೆ. ಅಂಬೋಲಿಯ ವೈಯಾರವನ್ನ, ಅವಳ ಸೌಂದರ್ಯವನ್ನು. ಬೆಟ್ಟದಿಂದ ಕೆಳಕ್ಕೆ ಧುಮ್ಮುಕ್ಕು ನರ್ತನವನ್ನ ನಾವು ಸ್ವಂಯ ಸ್ಪರ್ಶಿಸಿ ಆನಂದಿಸಬಹುದು.
ಅಂಬೋಲಿ ಫಾಲ್ಸ್ ವರ್ಷವಿಡೀ ಇದು ಬಹುತೇಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಮಳೆಗಾಲದಲ್ಲಂತೂ ಹಾಲಿನ ನೊರೆಯಂತೆ ಧುಮುಕುವ ಜಲಪಾತ ಹಾಗೂ ಸುತ್ತಲಿನ ಸುಂದರವಾದ ಹಚ್ಚ ಹಸಿರು ಎಂಥವರ ಕಣ್ಮನಗಳನ್ನೂ ಸೆಳೆಯುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಪ್ರದೇಶವೆಲ್ಲ ಮಂಜು ಕವಿದಂತಿದ್ದು ನೋಡಲು ಅತ್ಯಂತ ರಮಣೀಯವಾಗಿರುತ್ತದೆ.
ಈ ಜಲಪಾತವೂ ಮಹಾರಾಷ್ಟ್ರ ರಾಜ್ಯದ ಸಿಂದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಗ್ರಾಮದಲ್ಲಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಈ ಮೋಹಕ ಚಲುವೆ ಇದ್ದಾಳೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿನ ನೂರಾರು ಚಿಕ್ಕು-ಪುಟ್ಟ ಜಲಪಾತಗಳು ನಮಗೆ ನೋಡಲು ಸಿಗುತ್ತವೆ.. ಆದ್ರೆ ಈ ಅಂಬೋಲಿ ಜಲಪಾತ ವಿಶೇಷವೆಂದ್ರೆ ಅದು ರಸ್ತೆಗೆ ಹತ್ತಿಕೊಂಡಿದೆ. ಸುಮಾರು 40 ಅಡಿ ಎತ್ತರ ಬೆಟ್ಟದಿಂದ ಜಲದಾರೆ ಭೂಮಿಯನ್ನ ಸ್ಪರ್ಶಿಸುವ ದೃಶ್ಯವೇ ಇಲ್ಲಿ ಮನಮೋಹಕ. ಎತ್ತರದ ಬೆಟ್ಟದಿಂದ ಶುದ್ಧ ಹಾಲು ಬೀಳುತಿರುವಂತೆ ಭಾಸವಾಗುತ್ತದೆ.
ಅಂಬೋಲಿಯಲ್ಲಿರುವ ಈ ಜಲಪಾತಗಳ ಸ್ವರ್ಗವಷ್ಟೇ ಅಲ್ಲ ಬೆಟ್ಟದ ಮೇಲೆ ಆವರಿಸುವ ದಟ್ಟ ಮಂಜು ಸಹ ನೋಡುಗರ ಕಣ್ಮನ ಸೆಳೆಯುತ್ತದೆ. ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಈ ಅಂಬೋಲಿ ಕಣಿವೆಯಲ್ಲಿ ಸಾಗುತ್ತಿದ್ದರೆ ಆ ಮಂಜಿನ ಚಿತ್ತಾರ, ಬೆಟ್ಟಗಳ ಸಾಲಿನಲ್ಲಿ ಜಲಪಾತದ ಹರ್ಷೋದ್ಘಾರ ಈ ಸುಂದರ ದೃಶ್ಯಕಾವ್ಯವನ್ನು ಬಣ್ಣಿಸಲು ಪದಗಳೇ ಸಾಲದು.
ತಲುಪುದು ಹೇಗೆ..?
ಅಂಬೋಲಿ ಫಾಲ್ಸ್ ಎಂಜಾಯ್ ಮಾಡಬೇಕು ಅಂದ್ರೆ ರಸ್ತೆ ಮೂಲಕವೇ ಸಾಗಬೇಕು. ಬೆಳಗಾವಿಯಿಂದ ಸರಿ ಸುಮಾರು 72 ಕಿಲೋಮೀಟರ್ ಇದೆ. ಅಂದಾಜು 2 ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ 576 ಕಿಲೋಮೀಟರ್ ದೂರ. ಸುಮಾರು 10 ಗಂಟೆಗಳ ಜರ್ನಿ. ಬೆಂಗಳೂರಿನಿಂದ ಬೆಳಗಾವಿಗೆ ಸಾಕಷ್ಟು ವಾಹನಗಳ ವ್ಯವಸ್ಥೆ ಇದೆ. ಬೆಳಗಾವಿಯಿಂದಲೂ ಅಂಬೋಲಿ ತಲುಪಲು ಸುಲಭಕ್ಕೆ ಸಿಗುವ ವ್ಯವಸ್ಥೆ ಇದೆ. ಪ್ರವಾಸಿಗರು ಬೆಳಗಾವಿ ರಸ್ತೆ ಮಾರ್ಗ, ರೈಲು ಮಾರ್ಗ ಮತ್ತು ವಿಮಾನದ ಮೂಲಕ ಆಗಮಿಸಿ, ಬೆಳಗಾವಿಯಿಂದ 65 ಕೀ.ಮೀಟರ್ ರಸ್ತೆ ಮಾರ್ಗವಾಗಿ ಅಂಬೋಲಿ ತಲುಪಬಹುದು.
ಇನ್ನು ಬೇರೆ ರಾಜ್ಯದ ಪ್ರವಾಸಿಗರು ಗೋವಾ ಮತ್ತು ಸಾವಂತವಾಡಿ ಮೂಲಕ ಬಸ್, ವಿಮಾನ ಮತ್ತು ರೈಲಿನಲ್ಲಿ ಅಂಬೋಲಿಯನ್ನು ತಲುಪಬಹುದು. ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಅಲ್ಲಿಂದ ಅಂಬೋಲಿ ಸುಮಾರು 70 ಕಿಮೀ.ದೂರದಲ್ಲಿದೆ. ಸಾವಂತವಾಡಿ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ ಟ್ಯಾಕ್ಸಿ, ಕ್ಯಾಬ್ ಮೂಲಕ ಅಂಬೋಲಿ ತಲುಪಬಹುದು.