ಮಣಿಪಾಲ್ : 10ನೇ ತರಗತಿಗೆ ಶಾಲೆ ಬಿಟ್ಟ ಹುಡುಗನೋರ್ವ ಮುಂದೊಂದು ದಿನ ಸಾಫ್ಟ್ ವೇರ್ ಎಂಜನೀಯರ್ ಆಗಿ, ಸ್ವತಃ ಆ್ಯಪ್‍ವೊಂದನ್ನ ಅಭಿವೃದ್ಧಿ ಪಡಿಸಿರುವ ರೋಚಕ ಕಥೆ ಇದು. ಈ ಸಾಹಸಗಾಥೆ ಯಾವುದೋ ವಿದೇಶಿಯವನದಲ್ಲ, ಬದಲಾಗಿ ಭಾರತೀಯ ಪುತ್ರನದು.
ಹೌದು, ವಿದ್ಯಾರ್ಹತೆ ಇಲ್ಲದಿದ್ದರೂ ಜಗಮೆಚ್ಚುವ ಸಾಧನೆ ಮಾಡಿದ ಸಾಧಕರ ಸಂಖ್ಯೆ ಬೆರಳೆಣಕೆಯಷ್ಟು. ಸೃಜನಶೀಲತೆ, ಪ್ರತಿಭೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇದೀಗ ಅಬ್ದುಲ್ ಅಲಿಮ್ ಹೆಸರಿನ ಯುವಕ ಎಲ್ಲರಿಗೂ ಮಾದರಿಯಾಗಿದ್ದಾನೆ.
10 ನೇ ಕ್ಲಾಸ್ ಪಾಸ್ ಮಾಡಿ ಶಿಕ್ಷಣಕ್ಕೆ ಅಂತ್ಯ ಹೇಳಿ ಮನೆ ಬಿಟ್ಟು ಹೊರಡುವ ವೇಳೆ ಅಬ್ದುಲ್ ಜೇಬಿನಲ್ಲಿ ಇದ್ದದ್ದು ಕೇವಲ 1000 ರೂಪಾಯಿ ಮಾತ್ರ. ಎರಡು ತಿಂಗಳ ಕಾಲ ಬೀದಿಗಳಲ್ಲಿ ಅಲೆದಾಟ, ಪುಟ್‍ಪಾತ್ ಮೇಲೆ ನಿದ್ದೆ. ಹೀಗೆ ಬೀದಿಗೆ ಬಿದ್ದು ಅಲೆಮಾರಿಯಾಗಿದ್ದ ಅಬ್ದುಲ್ , ಚೆನ್ನೈ ಮೂಲದ ಜೊಹೊ ಸ್ಟಾರ್ಟಪ್ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರುತ್ತಾನೆ.
ಒಂದು ದಿನ ಆ ಸಂಸ್ಥೆಯ ಹಿರಿಯ ಉದ್ಯೋಗಿ ಅಬ್ದುಲ್ ನ ಶಿಕ್ಷಣ ಹಾಗೂ ಆತನಿಗಿರುವ ಕಂಪ್ಯೂಟರ್ ಜ್ಞಾನದ ಬಗ್ಗೆ ತಿಳಿದುಕೊಂಡು, ‘ನಿನ್ನ ಕಣ್ಣಲ್ಲಿ ಸಾಧನೆಯ ಮಿಂಚು’ ಕಾಣಿಸುತ್ತಿದೆ ಎಂದು ಹೇಳುತ್ತಾನೆ. ಆತ ಬಯಸಿದರೆ ಹೆಚ್ಚಿನ ತರಬೇತಿ ನೀಡುವುದಾಗಿ ಭರವಸೆ ನೀಡುತ್ತಾರೆ.
ಎಸ್‍ಎಸ್‍ಎಲ್‍ಸಿ ವೇಳೆ ಎಚ್‍ಟಿಎಮ್‍ಎಲ್ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದ ಅಬ್ದುಲ್, ನಿತ್ಯ 12 ಗಂಟೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮುಗಿಸಿ ಸೀನಿಯರ್ ಬಳಿ ಕಂಪ್ಯೂಟರ್ ತರಬೇತಿ ಪಡೆದುಕೊಳ್ಳುತ್ತಾನೆ. ಎಂಟು ತಿಂಗಳ ನಂತರ ತಾನೇ ಒಂದು ಆ್ಯಪ್ ಅಭಿವೃದ್ಧಿ ಪಡಿಸುತ್ತಾನೆ. ಆತನ ಸೀನಿಯರ್ ಈ ಆ್ಯಪ್ ಬಗ್ಗೆ ಮ್ಯಾನೇಜರ್ ಗಮನಕ್ಕೆ ತರುತ್ತಾನೆ. ಸಾಧ್ಯವಾದರೆ ಆತನನ್ನು (ಅಬ್ದುಲ್) ಸಂದರ್ಶನ ಮಾಡುವಂತೆ ಮ್ಯಾನೇಜರ್ ಅವರಲ್ಲಿ ಮನವಿ ಮಾಡುತ್ತಾರೆ..
ತನ್ನ ಈ ಸಾಧನೆಯ ಪಯಣದ ಬಗ್ಗೆ ಮಾತನಾಡುವ ಅಬ್ದುಲ್, 10 ನೇ ತರಗತಿ ಪಾಸು ಮಾಡಿದ ನಾನು ಸಂದರ್ಶನಕ್ಕೆ ಹಾಜರಾಗುತ್ತೇನೆ ಎಂದು ಕನಸು-ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಇದನ್ನು ಸೀನಿಯರ್ ಎದುರು ಹೇಳಿಕೊಂಡಾಗ ಅವರಿಂದ ಸಿಕ್ಕ ಉತ್ತರ ನನ್ನಲ್ಲಿ ಆತ್ಮವಿಶ್ವಾಸದ ಕಿಚ್ಚು ಹೊತ್ತಿಸಿತು.ಇಲ್ಲಿ ಬೇಕಾಗಿರುವುದು ವಿದ್ಯಾರ್ಹತೆಯಲ್ಲ ನಿನ್ನಲ್ಲಿರುವ ಪ್ರತಿಭೆ ಮಾತ್ರ ಎನ್ನುವ ನುಡಿಗಳಿಂದ ಸ್ಫೂರ್ತಿಗೊಂಡು ಸಂದರ್ಶನಕ್ಕೆ ಹಾಜರಾದೆ, ಅದರಲ್ಲಿ ಆಯ್ಕೆಯೂ ಆದೆ ಎನ್ನುತ್ತಾರೆ.
ಅಬ್ದುಲ್ ಜೊಹೊ ಕಂಪನಿಯ ಟೆಕ್ನಿಕಲ್ ತಂಡ ಸೇರಿಕೊಂಡು ಇಂದಿಗೆ 8 ವರ್ಷಗಳು ತುಂಬಿವೆ. ಈ ಸಂತಸವನ್ನು ಲಿಂಕ್‍ಡಿನ್‍ನಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಸಾಹಸ ಕಥೆಯ ಹೆಜ್ಜೆಗಳನ್ನು ಮೆಲುಕು ಹಾಕಿದ್ದಾರೆ.