ಕಾಸರಗೋಡು: ರಾಜ್ಯದ ಕರಾವಳಿಯಲ್ಲಿ ಕೆಲ ದಿನ ರಾತ್ರಿ ಕಾಲದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಹವಾಮಾನ ನಿಗಾ ಕೇಂದ್ರ ಸಲಹೆ ಮಾಡಿದೆ. ಮೀನುಗಾರಿಕೆಗೆ ಸಮುದ್ರಕ್ಕಿಳಿಯಬಾರದೆಂದೂ ಈಗಾ ಗಲೇ ಸಮುದ್ರಕ್ಕೆ ತೆರಳಿದ ಮಂದಿ ತತ್‌ಕ್ಷಣ ಮರಳುವಂತೆ ಮೀನುಗಾರಿಕೆ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮುನ್ಸೂಚನೆ ನೀಡಿದ್ದಾರೆ.
ಮೀನುಗಾರಿಕೆ ವಲಯಗಳ ಆರಾಧನಾಲಯಗಳಲ್ಲಿ, ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಈ ಸಂಬಂಧ ಎಚ್ಚರಿಕೆ ಘೋಷಣೆ ಮಾಡುವಂತೆ ತಿಳಿಸಲಾಗಿದೆ. ಇತರರು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ತೆರಳದಂತೆ ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಅವರು ಆದೇಶ ನೀಡಿದರು.
1.5 ಮೀಟರ್‌ನಿಂದ 2.2. ಮೀಟರ್ ವರೆಗಿನ ಎತ್ತರದಲ್ಲಿ ತೆರೆ ಅಪ್ಪಳಿಸುವ ಭೀತಿ ಸಹಿತ ಕಡಲ್ಕೊರೆತ ತಲೆದೋರುವ ಭೀತಿಯಿದೆ ಎಂದು ಸಂಸ್ಥೆ ತಿಳಿಸಿದೆ.
ಹಿಂದೂ ಮಹಾಸಾಗರದಲ್ಲಿ ಭೂಮಧ್ಯೆ ರೇಖೆ ಪ್ರದೇಶದಲ್ಲಿ ಪೂರ್ವ, ಪಶ್ಚಿಮ ಬಂಗಾಲ ಒಳಸಮುದ್ರ, ಶ್ರೀಲಂಕಾದ ತೆಂಕಣ ಮತ್ತು ಪೂರ್ವದಲ್ಲಿ 25 ರಷ್ಟು ಶೂನ್ಯ ಒತ್ತಡ ರಚನೆಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಸಂಸ್ಥೆ ತಿಳಿಸಿದೆ.
ಈ ಅವಧಿಯಲ್ಲಿ ಗಾಳಿಯ ಬೀಸುವಿಕೆ ತೀವ್ರವಾಗಿದ್ದು, ಗಂಟೆಗೆ 30ರಿಂದ 40 ಕಿ.ಮೀ. ವರೆಗಿರುವುದು. ಎ.26ರಂದು ಗಾಳಿಯ ವೇಗ ಗಂಟೆಗೆ 40ರಿಂದ 50 ಕಿ.ಮೀ. ವರೆಗೆ ಹೆಚ್ಚಳಗೊಳ್ಳುವ ಸಾಧ್ಯತೆಯಿದೆ. ಎ.27 ರಂದು ಗಾಳಿಯ ವೇಗದ ತೀವ್ರತೆ ಗಂಟೆಗೆ 60ರಿಂದ 70 ಕಿ.ಮೀ. ಆಗಿ ತಲೆದೋರುವ ಸಾಧ್ಯತೆಯಿದೆ. ಎ.28ರಂದು ರಾಜ್ಯ ಕರಾವಳಿಯಲ್ಲಿ ಗಂಟೆಗೆ 80 ರಿಂದ 90 ಕಿ.ಮೀ., ತಮಿಳುನಾಡು ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವರೆಗೆ ವೇಗವಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಮೀನುಗಾರರು ಎ.27ರಿಂದ ಹಿಂದೂ ಮಹಾಸಾಗರ ಮಹಾಸಮುದ್ರದ ಭೂಮಧ್ಯ ರೇಖೆ ಪ್ರದೇಶ, ಅದರ ಬಳಿ ಪೂರ್ವ-ಪಶ್ಚಿಮ ಬಂಗಾಲ ಒಳಕಡಲು, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಮುನ್ಸೂಚನೆ ನೀಡಲಾಗಿದೆ. ಕಡಲ್ಕೊರೆತ ತೀವ್ರಗೊಳ್ಳುವ ಭೀತಿಯಿರುವುದರಿಂದ, ಆಳಸಮುದ್ರಕ್ಕೆ ಈಗಾಗಲೇ ತೆರಳಿದವರು ಎ.27ರಂದು ಮಧ್ಯರಾತ್ರಿ 12 ಗಂಟೆಗೆ ಸಮೀಪದ ಯಾವುದಾದರೂ ದಡ ಸೇರುವಂತೆ ಸಲಹೆ ಮಾಡಲಾಗಿದೆ.