Advertisement

ತಂಬಾಕು ಉತ್ಪನ್ನ ಬಳಕೆ ನಿಲ್ಲಿಸಲಿ

01:09 PM Jun 01, 2017 | Team Udayavani |

ದಾವಣಗೆರೆ: ಸರ್ಕಾರ ಹಾಗೂ ಸಾರ್ವಜನಿಕರು ತಂಬಾಕು ಉತ್ಪನ್ನಗಳ ಬಳಕೆ ಸಂಪೂರ್ಣ ನಿಲ್ಲಿಸುವ ಬಗ್ಗೆ ಯೋಚಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ ಹೇಳಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾನವ ಹಕ್ಕುಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.

Advertisement

ಸರ್ಕಾರ ತಂಬಾಕು ಉತ್ಪನ್ನಗಳಿಂದ ಬರುವ ತೆರಿಗೆಗಿಂತ ಮೂರು ಪಟ್ಟು ಹಣವನ್ನು ತಂಬಾಕು ಉತ್ಪನ್ನ ಬಳಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆ ವೆಚ್ಚ ಮಾಡಬೇಕಿದೆ. ಹಾಗಾಗಿ ತಂಬಾಕು ಉತ್ಪನ್ನಗಳ ಸಂಪೂರ್ಣ ನಿಷೇಧಕ್ಕೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು. ತಂಬಾಕು ಉತ್ಪನ್ನಗಳ ಬಳಕೆಯಿಂದ ಜಗತ್ತಿನಾದ್ಯಂತ ಪ್ರತಿ ವರ್ಷ 6 ಕೋಟಿ ಜನರು ಸಾವನ್ನಪ್ಪುತ್ತಿದ್ದಾರೆ.

6 ಲಕ್ಷದಷ್ಟು ಜನರು ಸಿಗರೇಟು, ಬೀಡಿ ಸೇದದೇ ಇದ್ದರೂ ಎರಡನೇ ಧೂಮಪಾನಿಯಾಗಿ ಇನ್ನಿಲ್ಲದ ಆರೋಗ್ಯ ಸಮಸ್ಯೆ ಅನುಭವಿಸುವಂತಾಗಿದೆ. ತಂಬಾಕು ಇತರೆ ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿ ಸಮೂಹ ಜಾಗೃತಿ ಮೂಡಿಸಬೇಕು.

ಪ್ರಶಿಕ್ಷಣಾರ್ಥಿಗಳು ದಾವಣಗೆರೆ ತಾಲೂಕಿನ 100 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿಸುವ ಮಹಾನ್‌ ಕಾರ್ಯಕ್ಕೆ ಕಾನೂನು ಸೇವಾ ಪ್ರಾಧಿಕಾರದ ಜತೆ ಕೈಜೋಡಿಸಬೇಕು ಎಂದು ತಿಳಿಸಿದರು. ತಂಬಾಕು ಉತ್ಪನ್ನ ಬಾಯಿ, ಗಂಟಲು, ಅನ್ನನಾಳ, ಜಠರ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆಡೆ ಮಾಡಿಕೊಡಲಿವೆ ಎಂಬುದುಗೊತ್ತಿದ್ದರೂ ಅವುಗಳ ಬಳಕೆ ಮಾಡುವರ ಸಂಖ್ಯೆ ಜಾಸ್ತಿ ಇದೆ.

ಮೊದಲ ವಿಶ್ವಯುದ್ಧಕ್ಕಿಂತಲೂ ಮುನ್ನ ತಂಬಾಕು ಉತ್ಪನ್ನಗಳ ಬಳಕೆಯಿಂದ ಬರುವ ಕ್ಯಾನ್ಸರ್‌ನಿಂದ ಸಾಯುವವರ ಪ್ರಮಾಣ ಕಡಿಮೆ ಇತ್ತು. 1987ರಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಮೂಲಕ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ಬಳಕೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಒಂದು ಸಿಗರೇಟು ಸೇವನೆಯಿಂದ ವ್ಯಕ್ತಿಯ ಆಯುಷ್ಯ 11 ನಿಮಿಷ ಕಡಿಮೆ ಆಗುತ್ತದೆ. 40-50 ವರ್ಷಕ್ಕೆ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ತಂಬಾಕು ಉತ್ಪನ್ನಗಳ ಬಳಕೆ ಮಾಡುವರು ಅನಾರೋಗ್ಯಕ್ಕೆ ತುತ್ತಾದರೆ ಅದು ಅವರ ಮೇಲೆ ಮಾತ್ರವಲ್ಲ ಕುಟುಂಬ, ಸಮಾಜದ ಮೇಲೆ ಭಾರೀ ಪರಿಣಾಮ ಬೀರುತ್ತದೆ.

ಜಾಗೃತಿ, ತಿಳವಳಿಕೆಯ ಮೂಲಕ ತಂಬಾಕು ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು  ತಿಳಿಸಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಅವರವರ ಮನೆಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಬಳಕೆ ಮಾಡುವುದನ್ನು ನಿಲ್ಲಿಸುವ ಮೂಲಕ ಸಮಾಜದಲ್ಲೂ ಅಂತಹ ಕೆಲಸಕ್ಕೆ ಮುಂದಾಗಬೇಕು.

ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ದಾವಣಗೆರೆ ತಾಲೂಕಿನ ಒಂದು ಗ್ರಾಮವನ್ನ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ತಿಳಿಸಿದರು. ತಂಬಾಕು- ಅಭಿವೃದ್ಧಿಗೆ ಮಾರಕ… ವಿಷಯ ಕುರಿತು ಉಪನ್ಯಾಸ ನೀಡಿದ ಮಾನವ  ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ಕುಮಾರ್‌, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ 8 ಕೋಟಿ ಜನರು ತಂಬಾಕು ಉತ್ಪನ್ನಗಳ ಬಳಕೆಯಿಂದ ಸಾವನ್ನಪ್ಪುತ್ತಾರೆ.

ಶೇ. 39.8 ರಷ್ಟು ಪುರುಷರು, ಶೇ. 16.3 ರಷ್ಟು ಮಹಿಳೆಯರು ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಾರೆ. ದೇಶದ ಅಭಿವೃದ್ಧಿಗೆ ಅತ್ಯಮೂಲ್ಯವಾಗಿರುವ ಮಾನವ ಸಂಪನ್ಮೂಲವನ್ನೇ ಸರ್ವನಾಶ ಮಾಡುವಂತಹ ತಂಬಾಕು, ಮದ್ಯ, ಮಾದಕ ವಸ್ತುಗಳಿಂದ ಯುವ ಜನಾಂಗ ದೂರ ಉಳಿಯಬೇಕು ಎಂದು ಮನವಿ ಮಾಡಿದರು.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಚ್‌. ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 8 ಲಕ್ಷ ಜನರು ತಂಬಾಕು ಉತ್ಪನ್ನಗಳ ಬಳಕೆಯಿಂದಲೇ ಸಾಯುತ್ತಿದ್ದಾರೆ. 40 ಲಕ್ಷ ಎಕರೆಯಲ್ಲಿ ತಂಬಾಕು ಬೆಳೆಯಲು ಅನುಮತಿ ನೀಡಲಾಗುತ್ತಿದೆ.

ಒಂದು ಕಡೆ ಬೇಡ, ಇನ್ನೊಂದು ಕಡೆ ಬಳಕೆಗೆ ಉತ್ತೇಜನ ನೀಡುವ ವಾತಾವರಣ ಇದೆ. ಏನೇ ಇದ್ದರೂ ಬಳಸಬಾರದು ಎಂಬ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರು. ಕಾಲೇಜು ಪ್ರಾಚಾರ್ಯ ಡಾ| ಎಚ್‌.ವಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿ. ಶಿವಜ್ಯೋತಿ ಸ್ವಾಗತಿಸಿದರು. ಕೆ.ಎ. ವಂದನ ನಿರೂಪಿಸಿದರು. ನಿರ್ಮಲಾ ರಾಥೋಡ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next