ಯಾವುದೇ ಒಂದು ವಸ್ತುವನ್ನು ಆಧಾರವಿಲ್ಲದೆ ಗಾಳಿಯಲ್ಲಿ ಓರೆಯಾಗಿ ನಿಲ್ಲಿಸಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಬಾಟಲಿಯನ್ನು ಓರೆಕೋರೆಯಾಗಿ ನಿಲ್ಲಿಸಬಲ್ಲಿರಾ? ಗೊತ್ತಿಲ್ಲದಿದ್ದರೆ ಈ ಮ್ಯಾಜಿಕ್ ನಿಮಗದನ್ನು ತಿಳಿಸಿಕೊಡುತ್ತೆ.
ಬೇಕಾದ ವಸ್ತುಗಳು: ಖಾಲಿಯಾದ ಸೋಡಾ ಅಥವಾ ಕೊಕೊ ಕೋಲಾ ಕ್ಯಾನ್
ಪ್ರದರ್ಶನ: ಜಾದೂಗಾರ ಕೈಯಲ್ಲಿ ಕೊಕೊ ಕೋಲಾ ಕ್ಯಾನ್ ಹಿಡಿದುಕೊಳ್ಳುತ್ತಾನೆ. ಎಲ್ಲರ ಎದುರು ಅದನ್ನು ತೆರೆದು, ಕುಡಿದು ಮುಗಿಸುತ್ತಾನೆ. ನಂತರ ನಿಧಾನಕ್ಕೆ ಅದನ್ನು ಟೇಬಲ್ ಮೇಲೆ ಓರೆಯಾಗಿ ನಿಲ್ಲಿಸುತ್ತಾನೆ. ಕ್ಯಾನ್ ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ವಾಲಿ ನಿಂತುಕೊಳ್ಳುತ್ತದೆ.
ತಯಾರಿ: ಇದು ಯಾವ ಮ್ಯಾಜಿಕಲ್ ಅಂಶಗಳನ್ನು ಹೊಂದಿರದ ಜಾದೂ. ಈ ಮ್ಯಾಜಿಕ್ ಮಾಡಲು ಹಲವಾರು ಬಾರಿ ಅಭ್ಯಾಸ ಮಾಡಿರಬೇಕು. ನೀವು ಮಾಡಬೇಕಾದ್ದೇನೆಂದರೆ, ಕ್ಯಾನ್‌ನಲ್ಲಿ ಅರ್ಧ ಅಥವಾ ಕಾಲು ಭಾಗ ಕೋಲಾ ಉಳಿಸಿಕೊಳ್ಳಬೇಕು. ಪೂರ್ತಿಯಾಗಿ ಖಾಲಿ ಮಾಡಿದರೆ ಕ್ಯಾನ್‌ಅನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಿಲ್ಲ. ಅರ್ಧ ಖಾಲಿಯಾದ ಕ್ಯಾನ್ ಅನ್ನು 45 ಡಿಗ್ರಿ ಓರೆಯಾಗಿ ಟೇಬಲ್ ಮೇಲೆ ನಿಲ್ಲಿಸಬೇಕು. ಗೆಳೆಯರ ಮುಂದೆ ಈ ಜಾದೂ ಪ್ರದರ್ಶಿಸುವ ಮುನ್ನ, ಮನೆಯಲ್ಲಿ ಹಲವಾರು ಬಾರಿ ಇದನ್ನು ಟ್ರೈ ಮಾಡಿ. ಏಕಾಏಕಿ ಬ್ಯಾಲೆನ್ಸ್ ಮಾಡಲು ಆಗುವುದಿಲ್ಲ. ಸತತ ಪ್ರಯತ್ನದ ನಂತರವಷ್ಟೇ ಕ್ಯಾನ್ ಗಾಳಿಯಲ್ಲಿ ನಿಲ್ಲುತ್ತದೆ.
ವಿನ್ಸೆಂಟ್ ಲೋಬೋ