ರಾಯಚೂರು: ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ಸಾಧ್ಯವಾದಷ್ಟು ಅದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ತಿಳಿಸಿದರು. ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾಗೃಹದಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಸುಜಲಾ-ಜಲಾನಯನ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಾನಾ ರೀತಿಯ ಹುದ್ದೆಗಳಿವೆ. ಅವುಗಳಲ್ಲಿ ಕೃಷಿ ಶ್ರೇಷ್ಠ. ಒಂದು ಇಂಚು ಮಣ್ಣು ಉತ್ಪತ್ತಿಯಾಗಬೇಕಾದರೆ ಸಾವಿರಾರು ವರ್ಷಗಳೇ
ಬೇಕು. ಅಂಥ ಮಣ್ಣನ್ನು ಹಾಳು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಕಲ ಜೀವರಾಶಿ ಈ ಮಣ್ಣಿನ ಮೇಲೆ ಅವಲಂಬಿತಗೊಂಡಿದೆ. ಮಣ್ಣು ಮತ್ತು ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಆದರೆ, ಇಂದು ಮನುಷ್ಯನ ದುರಾಸೆಗೆ ಇವೆರಡೂ ಕಲುಷಿತಗೊಳ್ಳುತ್ತಿವೆ. ಇಂದು ಭೂಮಿ ಮೇಲೆ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಹೀಗಾಗಿ ಗಿಡ ಮರಗಳನ್ನು ಬೆಳೆಸುವ ಮೂಲಕ ಮಣ್ಣನ್ನು ಸಂರಕ್ಷಿಸಬೇಕು. ಅಂದಾಗ ನೀರು ಕೂಡ ಉಳಿಯುತ್ತದೆ ಎಂದರು.
ವಿವಿ ಕುಲಪತಿ ಡಾ| ಕೆ.ಎನ್.ಕಟ್ಟಿಮನಿ ಮಾತನಾಡಿ, ರೈತರು ದೇವರ ಗುಡಿಗೆ ಹೋಗದಿದ್ದರೂ ಪರವಾಗಿಲ್ಲ ಕೃಷಿ ವಿವಿಯ ವಿಜ್ಞಾನಿಗಳನ್ನು ಭೇಟಿ ಮಾಡಬೇಕು. ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಅವರು ಸಂಶೋಧನೆ ಕೈಗೊಳ್ಳುವರು. ಇಲ್ಲದಿದ್ದರೆ ವಿಜ್ಞಾನಿಗಳು ಉತ್ತಮ ಸಂಶೋಧನೆ ಮಾಡಲು ಸಾಧ್ಯವಿಲ್ಲ. ಇದರಿಂದ ಸಮಸ್ಯೆಗಳಿಗೆ ಪರಿಹಾರವೇ ಸಿಗುವುದಿಲ್ಲ. ಭೂಮಿ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದು ಸರ್ವನಾಶವಾಗಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಮಣ್ಣಿನ ಆರೋಗ್ಯ ಪರೀಕ್ಷಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜಿಪಂ ಸಿಇಒ ನಲಿನ್ ಅತುಲ್, ಮಣ್ಣು ವಿಭಾಗದ ಮುಖ್ಯಸ್ಥ ಡಾ| ಕೆ.ನಾರಾಯಣರಾವ್, ನಿವೃತ್ತ ಶಿಕ್ಷಣ ನಿರ್ದೇಶಕ ಡಾ| ಸಿ.ವಿ.ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ವಿಸ್ತರಣಾ ನಿರ್ದೇಶಕ ಡಾ| ಬಿ.ಎಂ. ಚಿತ್ತಾಪುರ, ಸಂಶೋಧನಾ ನಿರ್ದೇಶಕ ಡಾ|ಬಿ.ಕೆ.ದೇಸಾಯಿ, ಮಣ್ಣು ಮತ್ತು ನೀರು ಸಂರಕ್ಷಣಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ಸತೀಶಕುಮಾರ, ಪ್ರಗತಿಪರ ರೈತ ಮಲ್ಲಣ್ಣ ನಾಗರಾಳ ಉಪಸ್ಥಿತರಿದ್ದರು.