Advertisement
ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಅದರ ನಿರ್ವಹಣೆ ಹಾಗೂ ಪರಿಹಾರೋಪಾಯ ಮಾರ್ಗಗಳ ಕುರಿತ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಲ್ಲಿ ಶಾಶ್ವತ ಪರಿಹಾರದ ಬಗ್ಗೆ ಯೋಜನೆ ರೂಪಿಸಬೇಕು. ಸದ್ಯದ ಪರಿಸ್ಥಿತಿ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಿಂಗಳಲ್ಲಿ ಮೂರ್‍ನಾಲ್ಕು ಬಾರಿ ಆಯಾ ತಾಲೂಕಿನ ತಹಶೀಲ್ದಾರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ನಡೆಸಿ, ಅನುಪಾಲನಾ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸುವಂತೆ ತಿಳಿಸಿದರು.
Related Articles
Advertisement
ತಾಲೂಕಿನಲ್ಲಿ 153 ಬೋರ್‌ವೆಲ್ ಕೊರೆಸಲಾಗಿದೆ. ಆದರೆ, ಬಹುತೇಕ ಬೋರವೆಲ್ಗಳಲ್ಲಿ ನೀರು ಸಿಕ್ಕಿಲ್ಲ. ಸಿಕ್ಕ ಅಲ್ಪ ಪ್ರಮಾನದ ನೀರನ್ನು ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನ ಗುರುಸಿದ್ದಾಪುರ ಮತ್ತು ಕಲ್ಲದೇವಪುರದಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಸೂಚನೆ ಪಾಲಿಸದಕ್ಕೆ ಬೇಸರ: ಈ ಹಿಂದೆ ಕೆಡಿಪಿ ಸಭೆ ಸಂದರ್ಭದಲ್ಲೇ ಜಗಳೂರು ತಾಲೂಕಿನಲ್ಲಿನ ನೀರಿನ ಸಮಸ್ಯೆ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಸೂಚನೆ ನೀಡಿದ್ದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಜನರ ಬೇಡಿಕೆಯಂತೆ ಜಗಳೂರು ಅರಣ್ಯ ಪ್ರದೇಶದಲ್ಲಿ ಒಂದು ಬೋರ್‌ವೆಲ್ ಕೊಯಿರೆಸಿ ಅಲ್ಲಿನ ಪ್ರಾಣಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡುವಂತೆ ಹೇಳಿ, ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದ್ದರೂ ಈ ಕುರಿತಂತೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕೂಡಲೇ ನೀರಿನ ಸಮಸ್ಯೆ ಇರುವ ಪ್ರತಿ ಗ್ರಾಮದಲ್ಲಿ ಒಂದೊಂದು ಬೋರ್‌ವೆಲ್ ಕೊರೆಸಬೇಕು. 1000-1200 ಅಡಿ ಕೊರೆಯಿಸಿದರೂ ಅಡ್ಡಿಇಲ್ಲ. ಒಟ್ಟಿನಲ್ಲಿ ನೀರು ಒದಗಿಲು ಎಲ್ಲಾ ಪ್ರಯತ್ನ ಮಾಡಬೇಕು. ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ. ಜಿಲ್ಲಾಧಿಕಾರಿ ಖಾತೆಯಲ್ಲೂ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಹಣ ಇದೆ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು ಎಂದು ಸಚಿವರು ಖಡಕ್ ಆಗಿ ತಿಳಿಸಿದರು.
ಚನ್ನಗಿರಿಯಲ್ಲಿ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿತ್ತು. ಅದನ್ನು ಖಾಸಗಿ ಬೋರ್‌ವೆಲ್ನಿಂದ ನೀರು ಕೊಡುವ ಮೂಲಕ ಬಗೆಹರಿಸಲಾಗಿದೆ. ಹೊನ್ನಾಳಿಯ 5 ಗ್ರಾಮಗಳಲ್ಲಿದ್ದ ನೀರಿನ ಸಮಸ್ಯೆಯನ್ನೂ ಸಹ ಬಗೆಹರಿಸಲಾಗಿದೆ. ನ್ಯಾಮತಿ ಹಾಗೂ ಹರಿಹರ ತಾಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ. ಸಮಸ್ಯೆ ಎದುರಾದರೆ ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ದಾವಣಗೆರೆ ನಗರದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಮಾತನಾಡಿ, 41 ವಾರ್ಡ್‌ಗಳಿಗೆ ವಾರಕೊಮ್ಮೆ 3 ತಾಸುಗಳ ಕಾಲ ನೀರು ಬಿಡಲಾಗುತ್ತಿದೆ. ನಗರದಲ್ಲಿನ 162 ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಸದ್ಯಕ್ಕೆ ನೀರಿನ ಸಮಸ್ಯೆಯಂತೂ ಇಲ್ಲ. ಟಿವಿ ಸ್ಟೇಷನ್ ಕೆರೆಯಲ್ಲಿ 70 ದಿನಗಳಿಗೆ ಆಗುವಷ್ಟು ನೀರಿದೆ. ಈಗ ಕುಂದವಾಡ ಕೆರೆಗೆ ನೀರು ತುಂಬಿಸಿಕೊಂಡಲ್ಲಿ 2 ರಿಂದ 3 ತಿಂಗಳು ನೀರಿನ ಸಮಸ್ಯೆ ಎದುರಾಗದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಯಲ್ಲಿ ಮೊದಲು ಕುಡಿಯುವ ನೀರಿನ ಸಂಗ್ರಹಣಾ ಕೇಂದ್ರಗಳು ಎಲ್ಲೆಲ್ಲಿ ಇವೆಯೋ ಅಲ್ಲಲ್ಲಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಹರಿಹರ ತಾಲೂಕಿನಲ್ಲಿ ನೀರಿನ ಸಮಸ್ಯೆಯಿಲ್ಲ. ತಾಲೂಕಿನಲ್ಲಿ 340 ಬೋರ್‌ವೆಲ್ಗಳಿವೆ. ಅದರಲ್ಲಿ 60 ಬೋರ್‌ವೆಲ್ ಅಂತರ್ಜಲ ಬತ್ತಿದ್ದು, ಉಳಿದ ಬೋರವೆಲ್ಗಳಲ್ಲಿ ನೀರಿದೆ. ಚನ್ನಗಿರಿ ಪಟ್ಟಣದ 23 ವಾರ್ಡ್‌ಗಳಿಗೆ ಶಾಂತಿ ಸಾಗರದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ ಅಧಿಕಾರಿಗಳು ಮಾಹಿತಿ ನೀಡಿದರು.
ಜಗಳೂರಿನಲ್ಲಿ ಮೊದಲು 17 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈಗ ಶಾಂತಿ ಸಾಗರದಿಂದ ನೀರು ಸರಬರಾಜು ಆರಂಭವಾದ ನಂತರ 6 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಅಗತ್ಯ ಇರುವೆಡೆ ಗೋಶಾಲೆ: ಜಿಲ್ಲೆಯಲ್ಲಿ 26 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆಯಿದ್ದು, ಜಗಳೂರು ತಾಲೂಕಿನಲ್ಲಿ ಮಾತ್ರ ಕೇವಲ ಹತ್ತು ವಾರಗಳಿಗೆ ಆಗುವಷ್ಟು ಮೇವು ಇರುವ ಕಾರಣ ಅಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಕಡೆ ಗೋಶಾಲೆ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹೇಳಿದಾಗ, ಸಚಿವ ಶ್ರೀನಿವಾಸ್, ಗೋಶಾಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕ ಹಾಗೂ ಕ್ರಮಬದ್ಧವಾಗಿ ಮೇವು ಒದಗಿಸಬೇಕು. ಮೇವಿನ ಲೆಕ್ಕ ಸರಿಯಾಗಿ ಇಡಬೇಕು. ಅವಶ್ಯವಿದ್ದರೆ ಇತರೆ ಕಡೆಗಳಲ್ಲಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಅದರಲ್ಲೂ ಜಗಳೂರು ತಾಲೂಕಿನಲ್ಲಿ ಜನರು ಯಾವುದೇ ಕಾರಣಕ್ಕೂ ಕೆಲಸ ಅರಸಿ ಬೇರೆಡೆ ಗುಳೆ ಹೋಗದಂತೆ ತಡೆಯಲು ಅವರಿಗೆ ಸೂಕ್ತ ಕೆಲಸ ಹಾಗೂ ಸಕಾಲಕ್ಕೆ ಕೂಲಿ ಹಣ ನೀಡಬೇಕು ಎಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಚ್. ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿ.ಪಂ. ಉಪಕಾರ್ಯದರ್ಶಿ ಎಲ್. ಭೀಮಾನಾಯ್ಕ, ಉಪವಿಭಾಗಾಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಕಾರಿ ನಜ್ಮಾ, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮಣ್ಣನವರ್, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಜಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ನೀನು ಕೇಂದ್ರ ಸ್ಥಾನದಲ್ಲೇ ಇರುವುದಿಲ್ಲ. ಮಧ್ಯಾಹ್ನವೇ ಚಿತ್ರದುರ್ಗಕ್ಕೆ ಹೋಗುತ್ತಿದ್ದೀಯ. ನಾನೇ ಪೋನ್ ಮಾಡಿದರೂ ಲಿಫ್ಟ್ ಮಾಡಿಲ್ಲ. ನಿನ್ನ ಬಗ್ಗೆ ಸಾರ್ವಜನಿಕರಿಂದ ನನಗೆ ಸಾಕಷ್ಟು ದೂರು ಬಂದಿವೆ. ನಿನ್ನಂತಹ ಬೇಜವಾಬ್ದಾರಿ ಅಧಿಕಾರಿ ಬೇಡ. ನೀನೇ ಟ್ರಾನ್ಸ್‌ಫರ್ ಮಾಡಿಸಿಕೊಂಡು ಬೇರೆಡೆ ಹೋಗು. ಇಲ್ಲದಿದ್ದರೆ ನಿನ್ನನ್ನು ಸಸ್ಪೆಂಡ್ ಮಾಡಿಸುವೆ. ಯಾವುದು ಬೇಕೋ ಅದನ್ನ ಆಯ್ಕೆ ಮಾಡಿಕೊ ಎಂದು ಎಚ್ಚರಿಸಿದರಲ್ಲದೆ, ಇತನಿಗೆ ನೋಟೀಸ್ ಕೊಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.