ಹೊಸದಿಲ್ಲಿ: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಜೆ.ಬಿ. ಪರ್ದಿವಾಲಾ, ನ್ಯಾ| ಮನೋಜ್ ಮಿಶ್ರಾ ಅವರನ್ನೊಳ ಗೊಂಡ ನ್ಯಾಯಪೀಠ ಆದೇಶ ನೀಡಿದೆ.
11 ರಾಜ್ಯಗಳ ಜೈಲು ಕೈಪಿಡಿಯಲ್ಲಿ ಜಾತಿ ತಾರತಮ್ಯ ಮಾಡುವ ನಿಯಮ ಗಳಿರುವುದರ ಬಗ್ಗೆಯೂ ತರಾಟೆಗೆ ತೆಗೆದುಕೊಂಡಿದೆ.
ಜೈಲುಗಳಲ್ಲಿ ಕೆಲಸ ಹಂಚುವಾಗ, ಕೈದಿಗಳನ್ನು ವಿಂಗಡಿಸುವಾಗ ಜಾತಿಯನ್ನು ನೋಡಲಾಗುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇನ್ನು ಮೂರೇ ತಿಂಗಳಲ್ಲಿ ಸಂಬಂಧಪಟ್ಟ ರಾಜ್ಯಗಳು ತಮ್ಮ ಜೈಲುಗಳಲ್ಲಿನ ಕೈಪಿಡಿಯನ್ನು ಬದಲಿಸಿ, ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಸೂಚಿಸಿದೆ.
ಯಾವುದೇ ರಾಜ್ಯಗಳ ಕೈಪಿಡಿಯಲ್ಲಿ ಇಂತಹ ಎಲ್ಲ ನಿಯಮಗಳು ಸಂವಿಧಾನಬಾಹಿರ. ಸದಾ ಅಪರಾಧ ಎಸಗುವವರನ್ನು ಅದೇ ರೀತಿಯ ಕಾನೂನಿನಡಿ ನಡೆಸಿಕೊಳ್ಳಬೇಕು. ಒಂದು ವೇಳೆ ಅಂತಹವರನ್ನು ಜಾತಿ ಆಧಾರಿತವಾಗಿ ನಡೆಸಿಕೊಂಡಿದ್ದರೆ ಅದು ಅಸಾಂವಿಧಾನಿಕ ಎಂದು ನ್ಯಾಯಪೀಠ ಹೇಳಿದೆ. ಮಾತ್ರವಲ್ಲ ಸರ್ವೋಚ್ಚ ಪೀಠ ಜೈಲುಗಳಲ್ಲಿ ಜಾತಿ ಆಧಾರಿತವಾಗಿ ನಡೆಯುತ್ತಿರುವ ಘಟನೆಗಳನ್ನು ಸ್ವಪ್ರೇರಿತವಾಗಿ ಗುರುತಿಸಲು ನಿರ್ಧರಿಸಿದೆ.
ಈ ಬಗ್ಗೆ ಒಂದು ನೋಂದಣಿ ಪುಸ್ತಕವನ್ನೇ ತೆರೆಯುವಂತೆ ಸೂಚಿಸಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಗಳ ಜೈಲು ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕೆಲವು ರಾಜ್ಯಗಳ ಬಂದೀಖಾನೆಗಳಲ್ಲಿ ಕಾರ್ಮಿಕರಿಗೆ ಅವರ ಗುರುತಿನ ಆಧಾರದಲ್ಲಿ ಪ್ರತ್ಯೇಕ ಬ್ಯಾರಕ್‌ಗಳಿವೆ. ವಸಾಹತುಶಾಹಿ ಕಾಲದ ಕಾನೂನುಗಳು, ಈಗಲೂ ಪರಿಣಾಮ ಬೀರುತ್ತಿವೆ. ಸಂವಿಧಾನದ ನಿಯಮಗಳು ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಯಾಕೆ ಈ ತೀರ್ಪು?
ಜೈಲುಗಳಲ್ಲಿ ಜಾತಿ ನೋಡಿ ಹಲವು ಕೆಲಸ ನೀಡಲಾಗುತ್ತದೆ. ಜತೆಗೆ ಜಾತಿಯ ಆಧಾರದಲ್ಲಿ ಕೊಠಡಿಗಳನ್ನು ನೀಡಲಾಗುತ್ತದೆ ಎಂದು ಆರೋಪಿಸಲಾಗಿತ್ತು. ಬಂಗಾಲದ ಜೈಲುಗಳಲ್ಲಿ ಅಡುಗೆ ಸೇರಿದಂತೆ ಆಯ್ದ ಕೆಲಸಗಳನ್ನು ಮೇಲು ಜಾತಿಯವರೇ ಮಾಡು ತ್ತಾರೆ ಎಂದು ಆರೋಪಿಸಲಾಗಿತ್ತು.