Advertisement

“ಆಟೋ ನಿಲ್ದಾಣಗಳ ಅವ್ಯವಸ್ಥೆ ಬೈಕ್‌ಟ್ಯಾಕ್ಸಿ ಹಾವಳಿ ತಡೆಯಿರಿ’

11:17 PM Feb 27, 2020 | mahesh |

ಮಹಾನಗರ: ನಗರದಲ್ಲಿ ಆಟೋರಿಕ್ಷಾ ನಿಲ್ದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಆಟೋಗಳ ನಿಲುಗಡೆಗೆ ಸೂಕ್ತ, ಸುರಕ್ಷಿತ ಸ್ಥಳ ಒದಗಿಸಿಕೊಡಬೇಕು. ನಗರದಲ್ಲಿ ಬೈಕ್‌, ಟ್ಯಾಕ್ಸಿಯನ್ನು ನಿರ್ಬಂಧಿಸಬೇಕು ಸಹಿತ ವಿವಿಧ ಅಹವಾಲುಗಳನ್ನು ಆಟೋರಿಕ್ಷಾ ಚಾಲಕ-ಮಾ ಲಕರು ಜಿಲ್ಲಾ ಸಾರಿಗೆ ಪ್ರಾಧಿಕಾರದ ಮುಂದಿಟ್ಟಿದ್ದಾರೆ.

Advertisement

ಗುರುವಾರ ಆಟೋರಿಕ್ಷಾ ಪ್ರಯಾಣ ದರ ಏರಿಕೆ ಕುರಿತಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಚಾಲಕರು ಹಲವಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು. ನಗರದಲ್ಲಿ ಬೈಕ್‌ಟ್ಯಾಕ್ಸಿಗಳಿಗೆ ಪರವಾನಿಗೆ ನೀಡಿರುವುದರಿಂದ ಆಟೋ ಚಾಲಕರು ತೊಂದರೆಗೀಡಾಗಿದ್ದಾರೆ. ಆಟೋ ರಿಕ್ಷಾಗಳನ್ನು ರಸ್ತೆ ಬದಿ ಪಾರ್ಕಿಂಗ್‌ ಮಾಡಲು ಬಿಡುತ್ತಿಲ್ಲ. ಆದರೆ ಬೈಕ್‌ಟ್ಯಾಕ್ಸಿಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ ಎಂದರು.

ಪಾಲಿಕೆ ನಿರ್ಧಾರ
ಉಡುಪಿಯಲ್ಲಿ ಬೈಕ್‌ ಟ್ಯಾಕ್ಸಿಯನ್ನು ನಿಷೇಧ ಮಾಡ ಲಾಗಿದೆ. ಆದರೆ ಮಂಗಳೂರಿನಲ್ಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆಟೋ ಚಾಲಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಟಿಒ “ಬೈಕ್‌ ಟ್ಯಾಕ್ಸಿಗೆ ಸರಕಾರ ದಿಂದ ಪರವಾನಿಗೆ ಪಡೆಯಲಾಗುತ್ತದೆ. ಇದನ್ನು ಒಂದು ಉದ್ಯಮವಾಗಿ ಪರಿಗಣಿಸಲಾಗುತ್ತದೆ. ಉಡುಪಿ ಯಲ್ಲಿ ಸ್ಥಳೀಯ ನಗರಸಭೆ ನಿರ್ಧಾರ ಕೈಗೊಂಡು ಅಲ್ಲಿ ಬೈಕ್‌ ಟ್ಯಾಕ್ಸಿಯನ್ನು ನಿಷೇಧಿಸಿದೆ. ಮಂಗಳೂರಿನಲ್ಲಿಯೂ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬಹುದಾಗಿದೆಯೇ ಹೊರತು ಸಾರಿಗೆ ಇಲಾಖೆ ಇದನ್ನು ನಿಷೇಧಿಸಲು ಸಾಧ್ಯವಿಲ್ಲ’ ಎಂದರು. ಈ ಬಗ್ಗೆ ಪಾಲಿಕೆಗೆ ಮನವಿ ಸಲ್ಲಿಸಲು ರಿಕ್ಷಾ ಚಾಲಕರು ತೀರ್ಮಾನಿಸಿದರು.

ಆಟೋದರ ಇಳಿಸಲಾಗಿತ್ತು
ಹಿಂದೆ ಎಂ.ಬಿ. ಇಬ್ರಾಹಿಂ ಜಿಲ್ಲಾಧಿಕಾರಿಯಾಗಿದ್ದಾಗ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಜಿಲ್ಲೆಯಲ್ಲಿ ಆಟೋರಿಕ್ಷಾ ದರವನ್ನು ಕಡಿಮೆ ಮಾಡಿದ್ದರಿಂದ ಆಟೋರಿಕ್ಷಾ ಚಾಲಕರು ತೊಂದರೆಗೀಡಾಗಿದ್ದಾರೆ. ಪ್ರಸ್ತುತ ಪೆಟ್ರೋಲ್‌, ಗ್ಯಾಸ್‌ದರ, ವಿಮೆ ಮೊತ್ತಗಳಲ್ಲಿ ಏರಿಕೆಯಾಗಿದೆ. ಹಾಗಾಗಿ ಕನಿಷ್ಠ ದರವನ್ನು 30 ರೂ.ಗಳಿಗೆ, ಅನಂತರ ಪ್ರತಿ
ಕಿ.ಮೀ.ಗೆ 16 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದರು. ಜಿಲ್ಲಾಧಿಕಾರಿಯವರು ಇದಕ್ಕೆ ಒಪ್ಪಲಿಲ್ಲ. ಅಂತಿಮವಾಗಿ ಕನಿಷ್ಠ ದರವನ್ನು 30 ರೂ.ಗಳಿಗೆ, ಅನಂತರದ ಪ್ರತಿ ಕಿ.ಮೀ. ದರವನ್ನು 15 ರೂ.ಗಳಿಗೆ ಹೆಚ್ಚಿಸಲು ಒಪ್ಪಿಕೊಂಡರು.

ಹಿಂದೆ 3 ತಿಂಗಳಿಗೊಮ್ಮೆ ಆರ್‌ಟಿಎ ಸಭೆ ನಡೆಸಿ ರಿಕ್ಷಾ ಚಾಲಕರ ಅಹವಾಲುಗಳನ್ನು ಕೂಡ ಕೇಳಲಾಗುತ್ತಿತ್ತು. ಆದರೆ ಒಂದೂವರೆ ವರ್ಷಗಳಿಂದ ಆರ್‌ಟಿಎ ಸಭೆ ಆಗರಲಿಲ್ಲ ಎಂದು ಚಾಲಕರು ಹೇಳಿದಾಗ, “ಮುಂದೆ ನಿಗದಿತ ಸಮಯಕ್ಕೆ ಸಭೆ ನಡೆಯಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಕಲರ್‌ಕೋಡ್‌ ಕಟ್ಟುನಿಟ್ಟುಗೊಳಿಸಿ
ಗ್ರಾಮೀಣ ಭಾಗದ ಆಟೋರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ನಗರದೊಳಕ್ಕೆ ಪ್ರಯಾಣಿಕರನ್ನು ಕರೆತರುವುದಕ್ಕೆ ಆಕ್ಷೇಪವಿಲ್ಲ. ಆದರೆ ಕೆಲವು ಮಂದಿ ಇಲ್ಲಿಯೇ ನಿಂತು ಬಾಡಿಗೆ ಮಾಡುವುದರಿಂದ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು, ಇಂತಹ ಆಟೋಗಳನ್ನು ಸುಲಭವಾಗಿ ಗುರುತಿಸಲು ಈ ಹಿಂದೆ ನಗರದಿಂದ ಹೊರಭಾಗದ ಆಟೋರಿಕ್ಷಾಗಳಿಗೆ ಹಸುರು ಬಣ್ಣ ಕಡ್ಡಾಯ ಮಾಡಲಾಗಿತ್ತು. ಆದರೆ ಅದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂದು ಆಟೋಚಾಲಕರು ದೂರಿದರು.

ನಗರದಲ್ಲಿ ಎಲ್ಲಿಯೂ ವ್ಯವಸ್ಥಿತವಾದ ಆಟೋನಿಲ್ದಾಣಗಳಿಲ್ಲ. ಕೆಲವು ಆಟೋ ನಿಲ್ದಾಣಗಳ ಜಾಗವನ್ನು ಪದೇ ಪದೇ ಬದಲಾಯಿಸಲಾಗುತ್ತಿದೆ. ಇರುವ ಆಟೋನಿಲ್ದಾಣಗಳನ್ನು ಖಾಯಂ ಮಾಡಿಕೊಡಬೇಕು. ಮಂಗಳೂರು ಸ್ಮಾರ್ಟ್‌ ಆಗುತ್ತಿದ್ದರೂ ನಿಲ್ದಾಣಗಳು ಅವ್ಯವಸ್ಥೆಯಿಂದ ಕೂಡಿವೆ ಎಂದು ಆಟೋಚಾಲಕರು ಹೇಳಿದರು. ಸ್ಥಳೀಯವಾಗಿ ಆಟೋ ಚಾಲಕರ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಆರ್‌ಟಿಒ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳೂರು ಆರ್‌ಟಿಒ ರಾಮಕೃಷ್ಣ ರೈ, ಪುತ್ತೂರು ಆರ್‌ಟಿಒ ಕೆ.ಆನಂದ ಗೌಡ, ಎಎಸ್‌ಪಿ ವಿಕ್ರಂ ವಿ. ಅಮಾಟೆ, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ಯಾವ ಸೌಲಭ್ಯವೂ ಇಲ್ಲ
ಸರಕಾರಕ್ಕೆ ಆರ್‌ಟಿಒ ಮೂಲಕ ವಿವಿಧ ರೀತಿಯ ಶುಲ್ಕಗಳನ್ನು ಇತರರಂತೆ ಆಟೋರಿಕ್ಷಾದವರು ಕೂಡ ಪಾವತಿ ಮಾಡುತ್ತಾರೆ. ಆದರೆ ಸರಕಾರದಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಇದರ ಜತೆಗೆ ಇತ್ತೀಚೆಗೆ ಎಲೆಕ್ಟ್ರಿಕ್‌ ರಿಕ್ಷಾಗಳು, ಬಾಡಿಗೆ ಬೈಕ್‌ಗಳು ಕೂಡ ಬಂದಿವೆ. ಆರ್‌ಟಿಒ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಹೊಸ ಹೊಸ ಪರವಾನಿಗೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಆಟೋಚಾಲಕರು ಅಹವಾಲು ಮಂಡಿಸಿದರು.

ವರ್ಗಾವಣೆಗೆ ಅವಕಾಶ ನೀಡಿ
ಆಟೋರಿಕ್ಷಾ ಚಾಲಕ ದುಡಿಯಲು ಅಸಮರ್ಥನಾದಾಗ ಆತನ ಪರವಾನಿಗೆಯನ್ನು ಬೇರೆಯವರಿಗೆ ವರ್ಗಾಯಿಸಲು ಅವಕಾಶ ಮಾಡಿಕೊಡಬೇಕು. ಅಲ್ಲದೆ ಸಾರಿಗೆ ಇಲಾಖೆಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ. ಶಾಲಾ ಮಕ್ಕಳನ್ನು ಸಾಗಿಸುವ ಇತರ ವಾಹನಗಳು ನಿಯಮ ಮೀರಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಆಟೋರಿಕ್ಷಾ ಚಾಲಕರಿಗೆ ಮಾತ್ರ ಕಿರುಕುಳ ನೀಡಲಾಗುತ್ತಿದೆ ಎಂದು ಆಟೋ ಚಾಲಕರು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next