ವಿಟ್ಲ: ದುಷ್ಕರ್ಮಿಗಳು ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ವಿಟ್ಲ ಠಾಣಾ ವ್ಯಾಪ್ತಿಯ ಸೂರಿ ಕುಮೇರು ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರೆಬೆಟ್ಟುವಿನಲ್ಲಿ ನಡೆದಿದೆ.
ಮಂಗಳೂರು ಕಡೆಯಿಂದ ಮಾಣಿ ಮೂಲಕ ಪುತ್ತೂರು ಕಡೆಗೆ ತೆರಳುವ ಸೆಲಿನಾ ಹಾಗೂ ಸೇಫ್ ವೇ ಸೇರಿದಂತೆ ಮೂರು ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಘಟನೆಯಲ್ಲಿ ಬಸ್ ಗಳ ಗಾಜು ಸಂಪೂರ್ಣ ಪುಡಿಪುಡಿಯಾಗಿದೆ.
ಸೋಮವಾರ ಕೇರಳ ಭಾಗದ ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪ್ರಖಂಡದ ಹಲವು ಮಂದಿ ಭಜರಂಗ ದಳದ ಮುಖಂಡರ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಮುಖಂಡರ ಮೇಲೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಪ್ರಖಂಡದ ಪ್ರದೇಶಗಳಲ್ಲಿ ಬಂದ್ ಮಾಡಲಾಗುವುದು ಎಂದು ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಸೋಮವಾರ ರಾತ್ರಿ ಹರಿಯಬಿಟ್ಟಿದ್ದರು. ಇದರ ಮುಂದುವರಿದ ಭಾಗವಾಗಿ ಈ ಘಟನೆ ಸಂಭವಿಸಿದೆಯೆನ್ನಲಾಗಿದೆ.
ಒಟ್ಟು 7 ಬಸ್ ಮೇಲೆ ಕಲ್ಲು ತೂರಾಟ ನಡೆದಿದ್ದು, ಸಾಲೆತ್ತೂರು, ಕುದ್ದುಪದವು, ಮೈರ, ಅಡ್ಯನಡ್ಕದಲ್ಲಿಯೂ ಕಲ್ಲು ತೂರಾಟ ನಡೆದಿದ್ದು ಬಸ್ಸುಗಳಿಗೆ ಹಾನಿಮಾಡಲಾಗಿದೆ. ವಿಟ್ಲ ಮತ್ತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸರಕಾರಿ ಬಸ್ಸಿಗೂ ಕಲ್ಲೆಸತ: ಶಂಬೂರು ಬರ್ಕೆಯಲ್ಲಿ ಸರಕಾರಿ ಬಸ್ ಗೆ ಕಲ್ಲೆಸೆತ ನಡೆದ ಘಟನೆ ವರದಿಯಾಗಿದೆ. ಬಸ್ ಚಾಲಕ ಕೊಚಪ್ಪ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.