ನಾನು ಹಿಂದೆ ತಿರುಗಿ ನೋಡುವುದಕ್ಕೂ, ಕಲ್ಲು ಬಂದು ಕಣ್ಣಿನ ಹತ್ತಿರ ಬೀಳುವುದಕ್ಕೂ ಸರಿಯಾಯ್ತು. ಪುಣ್ಯಕ್ಕೆ, ಕಣ್ಣಿಗೆ ತಾಗಬೇಕಾಗಿದ್ದ ಕಲ್ಲು ಹುಬ್ಬಿಗೆ ತಾಗಿ ರಕ್ತ ಚಿಮ್ಮಿತು. ರಕ್ತ ನೋಡಿದ ಅಜ್ಜಿ ಗಾಬರಿಯಾಗಿ, ಶಾಲೆಗೆ ಹೋಗದೆ ಅಡಗಿ ಕುಳಿತಿದ್ದ ನನ್ನ ತಪ್ಪನ್ನು ಮರೆತೇಬಿಟ್ಟರು.
ನನ್ನ ಅಜ್ಜಿ ಬಹಳ ಸಿಟ್ಟಿನ ಸ್ವಭಾವದವರಾಗಿದ್ದರು. ಅವರ ಮುಂದೆ ಸುಳ್ಳು ಹೇಳಿ ಬಚಾವಾಗುವುದು ಭಾರಿ ಕಷ್ಟದ ಸಂಗತಿಯಾಗಿತ್ತು. ಎಲ್ಲರೂ ಅವರಿಗೆ ಬಹಳ ಹೆದರುತ್ತಿದ್ದರು. ಗಂಡು ಮಕ್ಕಳೆಂದರೆ ಅವರಿಗೆ ಅಚ್ಚುಮೆಚ್ಚು. ಹಾಗಾಗಿ ನಮಗೆ ಎಲ್ಲದರಲ್ಲೂ ರಿಯಾಯಿತಿ. ಕರಿದ ತಿಂಡಿಗಳಲ್ಲಿ ಸಿಂಹಪಾಲು. ಆದರೆ, ಶಾಲೆಗೆ ಚಕ್ಕರ್ ಹಾಕುವುದನ್ನು ಮಾತ್ರ ಅವರು ಸಹಿಸುತ್ತಿರಲಿಲ್ಲ.
ನನಗೋ ಶಾಲೆಗೆ ಹೋಗುವುದೆಂದರೆ ಅಲರ್ಜಿ. ಶಾಲೆ ತಪ್ಪಿಸುವ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದೆ. ನಮ್ಮ ಮನೆಯಲ್ಲಿ ದೊಡ್ಡವರೆಲ್ಲರೂ ಬೆಳಗ್ಗೆ ಗಂಜಿ ಊಟ ಮಾಡಿ, ಹೊರಗಡೆ ಕೆಲಸಗಳಿಗೆ ತೆರಳುತ್ತಿದ್ದರು. ಅವರು ಹೊರ ಹೋಗುವುದನ್ನೇ ಕಾಯುತ್ತಿದ್ದ ನಾನು, ಅವರು ಕಣ್ಣಿಂದ ಮರೆಯಾದ ತಕ್ಷಣ ಶಾಲೆ ಚೀಲವನ್ನು ಎತ್ತಿಕೊಂಡು, ಮನೆಯಲ್ಲಿದ್ದ ಅಟ್ಟವನ್ನು ಏರುತ್ತಿದ್ದೆ. ಅಲ್ಲಿ ಚೆನ್ನಾಗಿ ಕುರುಕಲು ತಿಂಡಿ ತಿಂದು, ನಿದ್ರೆ ಹೊಡೆದು ಸಂಜೆ ಎಲ್ಲರೂ ಮರಳಿ ಬರುವ ಅರ್ಧಗಂಟೆ ಮೊದಲು ಕೆಳಗಿಳಿದು, ಮುಖ ತೊಳೆದು ಅಮಾಯಕನಂತೆ ಕುಳಿತಿರುತ್ತಿದ್ದೆ.
ಹತ್ತು ಸಲ ಕದ್ದ ಕಳ್ಳ ಒಂದು ಸಲ ಸಿಕ್ಕಿ ಬೀಳದಿರುತ್ತಾನೆಯೇ? ಎಂಬ ಗಾದೆ ಮಾತಿನಂತೆ, ನನ್ನ ಈ ಕಳ್ಳಾಟ ಕೊನೆಗೂ ಒಂದು ದಿನ ಅಜ್ಜಿಯ ಕಣ್ಣಿಗೆ ಬಿದ್ದೇ ಬಿಟ್ಟಿತು. ಇನ್ನು ಶಿಕ್ಷೆ ಗ್ಯಾರಂಟಿ ಎಂದಾದಾಗ, ಅಟ್ಟದಿಂದ ಇಳಿದವನೇ ಹೊರಗೆ ಓಡಲು ಶುರು ಮಾಡಿದೆ. ನಾನು ಅವರ ಕೈಗೆ ಸಿಗಲಿಲ್ಲ ಎಂಬ ಕೋಪದಿಂದ ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನೆತ್ತಿ ನನ್ನತ್ತ ಒಗೆದೇ ಬಿಟ್ಟರು! ನಾನು ಹಿಂದೆ ತಿರುಗಿ ನೋಡುವುದಕ್ಕೂ, ಕಲ್ಲು ಬಂದು ಕಣ್ಣಿನ ಹತ್ತಿರ ಬೀಳುವುದಕ್ಕೂ ಸರಿಯಾಯ್ತು. ಪುಣ್ಯಕ್ಕೆ, ಕಣ್ಣಿಗೆ ತಾಗಬೇಕಾಗಿದ್ದ ಕಲ್ಲು ಹುಬ್ಬಿಗೆ ತಾಗಿ ರಕ್ತ ಚಿಮ್ಮಿತು. ರಕ್ತ ನೋಡಿದ ಅಜ್ಜಿ ಗಾಬರಿಯಾಗಿ, ಶಾಲೆಗೆ ಹೋಗದೆ ಅಡಗಿ ಕುಳಿತಿದ್ದ ನನ್ನ ತಪ್ಪನ್ನು ಮರೆತೇಬಿಟ್ಟರು. ನನ್ನನ್ನು ಹತ್ತಿರ ಕರೆದು ಮುದ್ದು ಮಾಡಿ, ಗಾಯಕ್ಕೆ ಮದ್ದು ಹಚ್ಚಿದರು. ಅವರ ಆರೈಕೆಯಲ್ಲಿ ನನ್ನ ನೋವು ಮಾಯವಾಯಿತು. ನಾ ಮಾಡಿದ ತಪ್ಪಿಗೆ ಅವರು ಕೊಟ್ಟ ಶಿಕ್ಷೆ, ಗಾಯದ ಗುರುತಾಗಿ ಇನ್ನೂ ನನ್ನ ಜೊತೆಗೆ ಇದೆ. ಅಂದಿನಿಂದ ಶಾಲೆಗೆ ಚಕ್ಕರ್ ಎನ್ನುವ ಪದವೇ ನನ್ನಿಂದ ದೂರವಾಗಿ ಬಿಟ್ಟಿತ್ತು.
ಎನ್.ಕೃಷ್ಣಮೂರ್ತಿ ರಾವ್