ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರವು ಶಂಖಾಕೃತಿಯಲ್ಲಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಎತ್ತರವನ್ನು ಹೊಂದಿರುವ ಬೆಟ್ಟ ಎಂಬ ಖ್ಯಾತಿಗೆ ಪಾತ್ರವಾದ ಈ ಪ್ರದೇಶ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಯುಳ್ಳ ಇದೊಂದು ಅರೆ ಮಲೆನಾಡು ಪ್ರದೇಶ. ಇಲ್ಲಿ ಬೆಟ್ಟಗುಡ್ಡಗಳು, ಜೈನ ಬಸದಿಗಳು, ಗಿರಿಧಾಮಗಳು ನೆಲೆ ನಿಂತು ಭವ್ಯ ತಾಣವಾಗಿದೆ.
ಈ ಬೆಟ್ಟದ ಮೇಲೆ ನಿಂತು ಪ್ರಕೃತಿಯ ಸೊಬಗನ್ನು ನೋಡಿದರೆ ಒಂದೆಡೆ ಮಲೆನಾಡು ಮತ್ತೊಂದೆಡೆ ಅರೆ ಮಲೆನಾಡಿನ ಸುಂದರ ದೃಶ್ಯಗಳ ಸಮ್ಮಿಲನ ಕಣ್ಣಿಗೆ ರಾಚುತ್ತದೆ. ಹೊಲ, ಗದ್ದೆಗಳು ಅಡಿಕೆ ಮತ್ತು ತೆಂಗಿನ ತೋಟಗಳು ದೂರದಲ್ಲಿ ಬೆಟ್ಟ ಶ್ರೇಣಿಗಳು ಹಸಿರನ್ನೊದ್ದು ಮಲಗಿರುವ ರಮಣೀಯ ದೃಶ್ಯ ನೋಡುಗರ ಸೊಬಗನ್ನು ಹೆಚ್ಚಿಸುತ್ತದೆ.
ತಾಲೂಕಿನ ಬೆಟ್ಟದಪುರದಲ್ಲಿ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ, ಸೀತೆಬೆಟ್ಟ ಹಾಗೂ ಸಿದ್ಧರ ಗುಡ್ಡಗಳು ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಇವುಗಳಲ್ಲದೆ ಇಲ್ಲಿನ ಸುತ್ತ ಇತಿಹಾಸ ಸಾರುವ ಅನೇಕ ಬೆಟ್ಟಗುಡ್ಡಗಳು ಒಂದೊಂದು ಕಥೆಗಳನ್ನು ಸಾರುತ್ತಿವೆ. ಇಂಥ ಅನೇಕ ಬೆಟ್ಟಗುಡ್ಡಗಳು ಇಂದು ಅಕ್ರಮ ಗಣಿಗಾರಿಕೆಗೆ ತುತ್ತಾಗಿ ತಮ್ಮ ಐಹಿತ್ಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಅವುಗಳಲ್ಲಿ ಸೀತೆಯಬೆಟ್ಟವು ಬಹು ಮುಖದಯವಾದುದ್ದು,
ಸೀತೆಯ ಒಡಲ ಬಗೆದರು:
ಪುರಾಣ ಹಾಗೂ ಐತಿಹಾಸಿಕ ಹಿನ್ನೆಲೆಗೆ ಹೆಸರಾಗಿರುವ ಸೀತೆಬೆಟ್ಟವು ಇಂದು ಅಕ್ರಮ ಗಣಿಗಾರಿಕೆಗೆ ಸಿಲುಕಿ ಅವನತಿಯ ಹಂತಕ್ಕೆ ಬಂದು ತಲುಪಿದೆ. ಈ ಬೆಟ್ಟವನ್ನು ಖಾಸಗಿ ವ್ಯಕ್ತಿಗಳು ಗಣಿಗಾರಿಕೆಯ ಹೆಸರಿನಲ್ಲಿ ನಾಶಪಡಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿ ಗಣಿಗಾರಿಕೆಗೆ ಬರುವವವರು ಸ್ಥಳೀಯ ರೈತರಿಂದ ಕಡಿಮೆ ಹಣಕ್ಕೆ ಭೂಮಿಯನ್ನು ಇಂತಿಷ್ಟು ವರ್ಷಕ್ಕೆ ಎಂದು ಭೋಗ್ಯಕ್ಕೆ ಪಡೆದು. ಅವದಿ ಮುಗಿದರೂ ರೈತರಿಗೆ ಭೂಮಿಯನ್ನು ಬಿಟ್ಟುಕೊಡದೆ ಹಣಬಲ, ರಾಕೀಯ ಪ್ರಭಾವ ಹಾಗೂ ಅಧಿಕಾರಿಗಳ ಮೂಲಕ ಬೆದರಿಕೆಯೊಡ್ಡುತ್ತ ಗಣಿಗಾರಿಕೆಯನ್ನು ಮೂಂದುವರಿಸುತ್ತ ಬರುತ್ತಾರೆ.
ಕಡಿಮೆ ಹಣಕ್ಕೆ ಭೋಗ್ಯ:
ಬರೀ ಕಲ್ಲಿನಿಂದ ಕೂಡಿರುವ ಭೂಮಿಯಲ್ಲಿ ಫಲವತ್ತತೆ ಕಡಿಮೆ, ಈ ಭೂಮಿ ಕಲ್ಲಿನಿಂದ ಆವೃತವಾಗಿರುವ ಬೆಳೆ ಬೆಳೆಯಲು ಸಾಧ್ಯವಿಲ್ಲ ಹಾಗಾಗಿ ಕೆಲವು ಖಾಸಗಿ ವ್ಯಕ್ತಿಗಳು ರೈತರಿಗೆ ಎಲ್ಲಿಲ್ಲದ ಆಸೆ ಮತ್ತು ಆಮೀಷವನ್ನು ಒಡ್ಡುವ ಮೂಲಕ ರೈತರಿಂದ ಕೃಷಿ ಭೂಮಿಯನ್ನು ಇಂತಿಷ್ಟು ವರ್ಷ ಎಂದು ಲೀಸ್ ಗೆ ಪಡೆದು ಅದರಲ್ಲಿ ಅಕ್ರಮ ಗಣಿಗಾರಿಕೆಯನ್ನು ಆರಂಭಿಸುವ ಮೂಲಕ ರೈತರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತ ನೈಸರ್ಗಿಕವಾಗಿ ಬಂದ ಬೆಟ್ಟಗುಡ್ಡಗಳನ್ನು ಹಾಗೂ ಅಲ್ಲಿನ ನೈಸರ್ಗಿಕ ಸಂಪತ್ತು ಮತ್ತು ಆರೋಗ್ಯವರ್ಧಕ ಸಸ್ಯ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರತ್ಯೇಕ ಪ್ರಕರಣ : ವಾಟ್ಸಪ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ , ಮೂವರ ವಿರುದ್ಧ ದೂರು
ಅಧಿಕಾರಿಗಳ ಮೌನ:
ಗಣಿಗಾರಿಕೆ ಮಾಡುವ ಖಾಸಗಿ ವ್ಯಕ್ತಿಗಳು ಕೆಲವೇ ಕೆಲವು ಸೀಮಿತವಾದ ಜಾಗಕ್ಕೆ ಗಣಿಗಾರಿಕೆಗಾಗಿ ಅನುಮತಿ ಪಡೆದು ಮತ್ತೆ ಆ ಜಾಗದ ಸುತ್ತಮುತ್ತಲಿನ ರೈತರಿಂದ ರಸ್ತೆ ಹಾಗೂ ವಾಹನ ಸಂಚಾರದ ಉದ್ದೇಶಕ್ಕಾಗಿ ಜಮೀನನ್ನು ಭೋಗ್ಯಕ್ಕೆ ಪಡೆದು ಅದೇ ಜಮೀನಿನಲ್ಲಿ ಗಣಿಗಾರಿಕೆ ಆರಂಭಿಸುವ ಮೂಲಕ ಸರ್ಕಾರಕ್ಕೆ ಹಾಗೂ ಭೂ ಮಾಲೀಕರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿ ಅಧಿಕಾರಿಗಳು ಹೆಸರಿಗಷ್ಟೇ ಅಳತೆ ಕಾರ್ಯ ನಡೆಸಿದರೂ ಗಣಿಗಾರಿಕೆ ನಡೆಸುವ ವ್ಯಕ್ತಿಗಳು ಕೆಲವೇ ದಿನಗಳಲ್ಲಿ ಅಳತೆ ಗುರುತುಗಳನ್ನು ನಾಶಮಾಡಿ ಕೇವಲ ತಗಡಿನ ಡಬ್ಬಗಳ ಬೋರ್ಡ್ ಸಿದ್ಧಪಡಿಸಿಕೊಂಡು ಬೇಕಾದ ಕಡೆಯಲ್ಲಿ ಈ ಬೋರ್ಡ್ ಡಬ್ಬವನ್ನು ಇಟ್ಟು ಜಾಗವನ್ನು ಅತಿಕ್ರಮಿಸಿ ಸ್ಫೋಟಕಗಳನ್ನು ಬಳಸಿ ಇಚ್ಚಾ ಪ್ರಕಾರ ಬೆಟ್ಟವನ್ನು ನಾಶ ಪಡಿಸುತ್ತಿದ್ದಾರೆ. ಇದರಿಂದ ರೈತರ ಭೂಮಿಗಳಲ್ಲಿ ಬೇಕಾಬಿಟ್ಟಿ ಅಗೆದು ಭೂಮಿಯನ್ನು ಪಾತಾಳದಂತೆ ಆಳವಾಗಿದ್ದು ಯಾವುದೇ ರೀತಿಯ ರಕ್ಷಣೆ ಬೇಲಿಯನ್ನು ನಿರ್ಮಿಸಿದೆ ಜನ-ಜಾನುವಾರುಗಳು ಬಿದ್ದು ಪ್ರಾಣಹಾನಿ ಆಗಬಹುದೆಂದು ಸುತ್ತಮುತ್ತಲ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ನಿಯಮಗಳ ಉಲ್ಲಂಘನೆ:
ರೈತರಿಂದ ಭೋಗ್ಯಕ್ಕೆ ಪಡೆಯುವ ಈ ವ್ಯಕ್ತಿಗಳು ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಪರಿಸರವನ್ನು ಹಾಳು ಮಾಡುತ್ತಿರುವ ಬಗ್ಗೆ ರೈತರು ಕಳೆದ ಒಂದು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ, ಹುಣಸೂರು ಉಪ ವಿಭಾಗ ಅಧಿಕಾರಿಗಳು ಪಿರಿಯಪಟ್ಟಣ ತಹಸಿಲ್ದಾರ್ ರವರಿಗೆ ಕೇವಲ ಪತ್ರ ವ್ಯವಹಾರ ನಡೆಸಿದ್ದಾರೆ ವಿನಃ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದು, ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಭವನದ ಮುಂಭಾಗ ಪ್ರಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಗಣಿಗಾರಿಕೆಗೆಂದು ಬರುವವರು ರೈತರಿಗೆ ಭೂಮಿಯ ಅಭಿವೃದ್ದಿಯ ಆಸೆ ಆಮೀಷ ಒಡ್ಡಿ ಭೂಮಿಯನ್ನು ಭೋಗ್ಯಕ್ಕೆ ಪಡೆದು ಅವಧಿ ಮುಗಿದರೂ ಮಾಲೀಕರಿಗೆ ಭೂಮಿಯನ್ನು ಹಿಂತಿರುಗಿಸುತ್ತಿಲ್ಲ, ಸೀತೆಬೆಟ್ಟ ಹಾಗೂ ಸಿದ್ದರ ಗುಡ್ಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
– ರೈತ ಎಂ ಜೆ ಕುಮಾರ ನಾಯಕ ಬೆಟ್ಟದಪುರ.,