ಬೆಂಗಳೂರು: ಮಲ್ಲೇಶ್ವರದಲ್ಲಿ ಮನೆಗೆ ಕನ್ನ ಹಾಕಿ ದೇವರ ಕೋಣೆಯಲ್ಲಿದ್ದ ಮೌಲ್ಯಯುತ ವಸ್ತುಗಳನ್ನು ಗುಜರಿಗೆ ಮಾರಾಟ ಮಾಡಿದ್ದ ಕಳ್ಳ ಮಲ್ಲೇಶ್ವರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಲ್ಲೇಶ್ವರದ ನಿವಾಸಿ ಸುಧಾಕರ್ (36) ಬಂಧಿತ. 1 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮಲ್ಲೇಶ್ವರ 9ನೇ ಕ್ರಾಸ್‌ನ 6ನೇ ಮುಖ್ಯರಸ್ತೆಯ ನಿವಾಸಿ ದೇವರಾಜ್ ಆ.10ರಂದು ಸಂಜೆ 4.30ಕ್ಕೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ವಿದ್ಯುತ್ ಮೀಟರ್ ಬೋರ್ಡ್ ಮೇಲಿಟ್ಟು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ತೆರಳಿದ್ದರು. ಸಂಜೆ 6 ಗಂಟೆಗೆ ಮನೆಗೆ ವಾಪಾಸ್ಸಾದಾಗ ಮನೆಯ ಬಾಗಿಲು ತೆರೆದಿರುವುದು ಕಂಡು ಆತಂಕಗೊಂಡಿದ್ದರು.
ಬಳಿಕ ಮನೆಯೊಳಗೆ ಪ್ರವೇಶಿಸಿ ನೋಡಿದಾಗ ದೇವರ ಕೋಣೆಯಲ್ಲಿದ್ದ ಕಂಚಿನ ಗಂಟೆ, ದೇವರ ಪೆಟ್ಟಿಗೆ, 4 ಬೆಳ್ಳಿಯ ಬಾಕ್ಸ್, 2 ಚಿನ್ನದ ನಾಣ್ಯಗಳು, ಕಂಚಿನ ಪೀಠ, 30 ದೇವರ ಸಣ್ಣ ವಿಗ್ರಹಗಳು ಕಳುವಾಗಿರುವುದು ಪತ್ತೆಯಾಗಿತ್ತು. ದೇವರಾಜ್ ಮಲ್ಲೇಶ್ವರ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು.
ಕದ್ದ ವಸು ಗುಜರಿಗೆ ಮಾರಾಟ: ಕಾರ್ಯಪ್ರವೃತ್ತರಾದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅದರಲ್ಲಿ ಆರೋಪಿ ಸುಧಾಕರ್ ಮುಖಚಹರೆ ಸೆರೆಯಾಗಿತ್ತು. ಈ ಆಧಾರದಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೇವರಾಜ್ ಅವರ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಕಳ್ಳತನ ಮಾಡಲು ಸಂಚು ರೂಪಿಸಿದ್ದೆ. ಸಭ್ಯರಂತೆ ಇವರ ಮನೆಯ ಬಳಿ ಬಂದು ಬೀಗ ಒಡೆದು ದೇವರ ಕೋಣೆಯಲ್ಲಿದ್ದ ವಸ್ತುಗಳನ್ನು ಕದ್ದು ಸಿಕ್ಕಿದ ದುಡ್ಡಿಗೆ ಗುಜರಿಗೆ ಮಾರಾಟ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.