ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚರಿಸುವ ರೈಲುಗಳಲ್ಲಿ ಮೊಬೈಲ್ ಫೋನ್ ಮತ್ತು ಲೇಡಿಸ್ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ಗಾಂಧಿನಗರದ ಅಬ್ದುಲ್ ಅಝೀಜ್ (19) ಬಂಧಿತ. ಈತನಿಂದ 1 ಟ್ಯಾಬ್, 11 ಮೊಬೈಲ್ ಫೋನ್, ಒಂದು ವ್ಯಾನಿಟಿ ಬ್ಯಾಗ್, ಪಾಸ್‌ಪೋರ್ಟ್ ಹಾಗೂ ಇತರ ಕೆಲವು ದಾಖಲಾತಿಗಳು ಸೇರಿದಂತೆ ಒಟ್ಟು ಅಂದಾಜು 1.75 ಲ.ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
2 ತಿಂಗಳುಗಳಿಂದ ಕಳವು :
ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚರಿಸುವ ರೈಲುಗಳಲ್ಲಿ ಕಳ್ಳತನ ನಡೆಯುತ್ತಿದ್ದ ಬಗ್ಗೆ ಕಳೆದ ಎರಡು ತಿಂಗಳುಗಳಿಂದ ರೈಲ್ವೇ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಆರೋಪಿಗಳ ಪತ್ತೆಗಾಗಿ ರೈಲ್ವೇ ಪೊಲೀಸ್‌ನ ಎಡಿಜಿಪಿ ಭಾಸ್ಕರ ರಾವ್ ಅವರ ನಿರ್ದೇಶನದಂತೆ ಎಸ್‌ಪಿ ಡಿ.ಆರ್.ಸಿರಿಗೌರಿ ಮತ್ತು ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭಾಕರ್ ಅವರ ಮಾರ್ಗದರ್ಶನದಂತೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಅವರು ತನಿಖಾ ತಂಡವನ್ನು ರಚಿಸಿ ರೈಲುಗಾಡಿಗಳಲ್ಲಿ ವಿಶೇಷ ಅಪರಾಧ ಪತ್ತೆದಳ ಸಿಬಂದಿಯನ್ನು ನೇಮಿಸಿದ್ದರು.
ಡಿ. 25ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆರೋಪಿ ಅಬ್ದುಲ್ ಅಜೀಝ್ನನ್ನು ಬಂಧಿಸುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಕೂಲಿ ಕೆಲಸ ಮಾಡುವವನಾಗಿದ್ದು, ಕಳೆದ 2 ತಿಂಗಳುಗಳಿಂದ ಮಂಗಳೂರು- ಬೆಂಗಳೂರು ನಡುವೆ ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರು ಮಲಗಿದ್ದ ವೇಳೆ ಕಳ್ಳತನ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.