ಲಂಡನ್ : ಭಾರತೀಯ ಮಹಿಳಾ ತಂಡ ಕಳೆದೆರೆಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ. ಇಂಗ್ಲೆಂಡ್ ತಂಡದ ವಿರುದ್ಧ ಟಿ-20 ಸರಣಿಯನ್ನು ಕ್ವೀನ್ ಸ್ವೀಪ್ ಮಾಡಿ ಐತಿಹಾಸಿಕ ಸಾಧನೆ ಮಾಡಿದೆ.
ದೀಪ್ತಿ ಶರ್ಮಾ ಅವರು ಡೀನ್ ಅವರನ್ನು “ಮಂಕಡ್’ ಮಾದರಿಯಲ್ಲಿ ರನೌಟ್ ಮಾಡಿದ ಘಟನೆಯ ವಿಡಿಯೋ ತುಣುಕು, ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿದೆ. ಹಲವು ಕ್ರಿಕೆಟ್ ದಿಗ್ಗಜರು ಈ ಘಟನೆಯನ್ನು ಬೆಂಬಲಿಸಿದರೆ, ಕೆಲವರು ತಮ್ಮದೇ ವ್ಯಾಖ್ಯಾನವನ್ನು ನೀಡಿದ್ದಾರೆ.
ಈ ನಡುವೆ ಲಂಡನ್ ನಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯ ಬ್ಯಾಗ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾದ ತಾನಿಯಾ ಭಾಟಿಯಾ ಹೊಟೇಲ್ ರೂಮ್ ನಲ್ಲಿ ಬ್ಯಾಗ್ ಕಳ್ಳತನವಾದ ಬಗ್ಗೆ ಟ್ವಟರ್ ನಲ್ಲಿ ಹೇಳಿಕೊಂಡಿದ್ದಾರೆ.
”ಲಂಡನ್ ನಲ್ಲಿ ನಾನಿದ್ದ ಮ್ಯಾರಿಯಟ್ ಹೋಟೆಲ್ ಮೈದಾ ವೇಲ್ ನಲ್ಲಿ, ನನ್ನ ರೂಮಿಗೆ ಯಾರೋ ಬಂದು, ನನ್ನ ಬ್ಯಾಗ್ ಕದ್ದಿದ್ದಾರೆ. ಅದರಲ್ಲಿ ನಗದು, ಚಿನ್ನಾಭರಣ,ಕಾರ್ಡ್, ವಾಚ್ ಇತ್ತು. ನಾನು ಟೀಮ್ ಇಂಡಿಯಾದ ಭಾಗವಾಗಿ ಹೊಟೇಲ್ ನಲ್ಲಿ ಉಳಿದುಕೊಂಡಿದ್ದೆ. ಈ ಹೊಟೇಲ್ ತುಂಬಾ ಅಸುರಕ್ಷಿತ” ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಷಯದಲ್ಲಿ ಶೀಘ್ರದಲ್ಲಿ ತನಿಖೆಯಾಗಿ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಹೊಟೇಲ್ ಪ್ರತಿಕ್ರಿಯೆ ಕೊಟ್ಟಿದ್ದು, ದಯವಿಟ್ಟು ನಿಮ್ಮ ಹೆಸರು ಮತ್ತು ನೀವು ಕಾಯ್ದಿರಿಸಿರುವ ಇಮೇಲ್ ವಿಳಾಸ ಮತ್ತು ನಿಮ್ಮ ವಾಸ್ತವ್ಯದ ನಿಖರವಾದ ದಿನಾಂಕಗಳನ್ನು ನಮಗೆ ಹೇಳಿ, ಆದ್ದರಿಂದ ನಾವು ಈ ಪ್ರಕರಣವನ್ನು ಮತ್ತಷ್ಟು ಪರಿಶೀಲಿಸಬಹುದು ಎಂದು ತಾನಿಯಾ ಅವರಲ್ಲಿ ಕೇಳಿಕೊಂಡಿದೆ.