ಮುಂಬಯಿ : ಭಾರತದ ಸೊವರೀನ್ ಕ್ರೆಡಿಟ್ ರೇಟಿಂಗನ್ನು ಪ್ರಖ್ಯಾತ ರೇಟಿಂಗ್ ಸಂಸ್ಥೆ ಮೂಡಿ ಮೇಲ್ದರ್ಜೆಗೆ ಏರಿಸಿರುವ ಕಾರಣಕ್ಕೆ ಹೊಸ ಆತ್ಮವಿಶ್ವಾಸ ಪಡೆದು ಗರಿಗೆದರಿದ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 235.98 ಅಂಕಗಳ ಏರಿಕೆಯನ್ನು ದಾಖಲಿಸಿ 33,342.80 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 68.85 ಅಂಕಗಳ ಏರಿಕೆಯನ್ನು ಪಡೆದು ದಿನದ ವಹಿವಾಟನ್ನು 10,283.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 346 ಅಂಕಗಳ ಮುನ್ನಡೆಯನ್ನು ದಾಖಲಿಸಿತ್ತು.
ಹಿಂದಿನ ವಾರಾಂತ್ಯಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಈ ವಾರಾಂತ್ಯ 28.24 ಅಂಕ ಗಳಿಸಿತು; ನಿಫ್ಟಿ 38.15 ಅಂಕಗಳನ್ನು ಕಳೆದುಕೊಂಡಿತು.
ಇಂಡಿಯಾ ಕ್ರೆಡಿಟ್ ರೇಟಿಂಗ್ ಅನ್ನು ಮೂಡಿ ಒಂದು ಹಂತ ಮೇಲ್ದರ್ಜೆಗೇರಿಸಿ ಬಿಎಎ2 ರ ಮಟ್ಟಕ್ಕೆ ಒಯ್ದಿರುವುದು ಕೇಂದ್ರ ಸರಕಾರ ಈಚಗೆ ಕೈಗೊಂಡ ಹಲವು ಆರ್ಥಿಕ ಸುಧಾರಣಾ ಉಪಕ್ರಮಗಳಿಗೆ ದೊರಕಿದ ಮನ್ನಣೆ ಎಂದು ತಿಳಿಯಲಾಗಿದೆ.