Advertisement

“ಸ್ಟಾಕ್‌’ಟೈಮ್‌!

11:37 AM Sep 26, 2017 | |

ಈ ಟೈಮಿನಲ್ಲಿ ಷೇರು ಮಾರುಕಟ್ಟೇಲಿ ಹಣ ಹೂಡಿದರೆ ಲಾಭ ಬರುವುದರಲ್ಲಿ ಸಂದೇಹವೇ ಇಲ್ಲ. ಮಾರುಕಟ್ಟೆ ಶ್ರೇಯಾಂಕ, ಉತ್ಪನ್ನದ ಮುಖಬೆಲೆ ಎಲ್ಲವೂ ಹೇಳಿ ಮಾಡಿಸಿದಂತಿದೆ. ಹಾಗಾದರೆ, ಷೇರನ್ನು ಕೊಳ್ಳೋದಾದ್ರೂ ಹೇಗೆ? ಮಾರಾಟ ಮಾಡೋದು ಹೇಗೆ? ಎಂದು ಯೋಚಿಸಿದಾಗ ನಮ್ಮ ಕಣ್ಣ ಮುಂದೆ ಬರುವವರೇ ಸ್ಟಾಕ್‌ ಬ್ರೋಕರ್‌ಗಳು. ಇವರು ಷೇರು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಮಾರುಕಟ್ಟೆ ವ್ಯವಹಾರ ಸುಗಮಗೊಳಿಸುತ್ತಾರೆ. ಹಾಗೆಯೇ ಪರ್ಸೆಂಟೇಜ್‌ ಲೆಕ್ಕದಲ್ಲಿ ದೊಡ್ಡಮಟ್ಟದ ಗಳಿಕೆಯನ್ನೂ ಮಾಡುತ್ತಾರೆ. ಅಂತಹ ಕೆಲಸ ನಿಮ್ಮದಾಗಬೇಕೆಂದರೆ…

Advertisement

“ನಮಗೊಂದು ಜೊತೆ ಒಳ್ಳೆ ಎತ್ತುಗಳನ್ನು ಕೊಡಿಸಪ್ಪಾ! ಹಿಂಗಾರು ಚೆನ್ನಾಗಿ ಆಗಿದೆ. ಬೇಸಾಯಕ್ಕೆ ಅನುಕೂಲ ಆಗುತ್ತೆ’ ಎಂದು ಹಳ್ಳಿಯ ರೈತರು ಮಧ್ಯವರ್ತಿಯನ್ನು ಕೇಳುವುದನ್ನು ನೋಡಿರಬಹುದು. “ಆ ಮನುಷ್ಯನನ್ನ ಜೊತೆಯಲ್ಲಿ ಕರೆದುಕೊಂಡು ಹೋದರೆ ಎಂಥ ಕೆಲಸನಾದ್ರೂ ಹೂವು ಎತ್ತಿದ ಹಾಗೆ ಆಗಿಹೋಗುತ್ತೆ’ ಎಂದು ಕೆಲವರನ್ನು ಜೊತೆಯಲ್ಲಿ ಗಂಟು ಹಾಕಿಕೊಂಡು ಓಡಾಡುವವರಿದ್ದಾರೆ. ಹಳೇ ಮೊಬೈಲ್ ಮಾರೋದ್ರಿಂದ ಹಿಡಿದು ಹೊಸ ರೆಫ್ರಿಜರೇಟರ್‌ ಕೊಳ್ಳೋವರೆಗೂ ಆನ್‌ಲೈನ್‌ನ ಮಧ್ಯಸ್ಥಿಕೆ ಪಡೆದುಕೊಳ್ಳುತ್ತೇವೆ.

ಇಂಥ ದಿನಮಾನದಲ್ಲಿ ಕಾಣದ ಲೋಕದಂತಿದ್ದ ಷೇರು ಮಾರುಕಟ್ಟೆ ಮೊಬೈಲ್ನಲ್ಲಿ ನಡೆಸುವ ಬೆರಳಂಚಿನ ಚಟುವಟಿಕೆಯಾಗಿ ಹೋಗಿದೆ. ಅಂಥ ಚುಟುವಟಿಕೆಯ ಹಿಂದೆ ವಹಿವಾಟು ಸುಗಮಗೊಳಿಸಲು ಅನೇಕರು ಶ್ರಮಿಸುತ್ತಾರೆ. ಅವರಲ್ಲಿ ಸ್ಟಾಕ್‌ ಬ್ರೋಕರ್‌ ಕೂಡ ಒಬ್ಬರು. ಯಾವುದೇ ಕಂಪನಿಯ ಶೇರುಗಳನ್ನು ಕೊಳ್ಳುವ ಮತ್ತು ಮಾರುವವರ ಅಗತ್ಯಕ್ಕನುಗುಣವಾಗಿ ಷೇರುಗಳ ಪೂರೈಕೆ ಮಾಡುತ್ತಾ ಷೇರಿಗಿಷ್ಟು ಅಥವಾ ದಿನಕ್ಕೆ ಇಂತಿಷ್ಟು ಎಂದು ಶೇಕಡಾವಾರು ಲೆಕ್ಕದಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವವರು ಇವರು. ಇಂಥದ್ದೊಂದು ಸ್ವತಂತ್ರ ಉದ್ಯೋಗ ಮಾಡುವ ಇಚ್ಛೆಯಿದ್ದವರಿಗೆ ಇಲ್ಲಿದೆ ಕೈಪಿಡಿ.

ಅಧ್ಯಯನ ಹೀಗಿರಲಿ…
ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಪಿಯುಸಿಗೆ ಕಾಮರ್ಸ್‌ ಆಯ್ಕೆ ಮಾಡಿಕೊಳ್ಳಿ. ಬಳಿಕ ಪದವಿ ತರಗತಿಗಳಲ್ಲಿ ಬಿ.ಕಾಂ., ಇಸಿಒ, ಪೈನಾನ್ಸ್ ಸಂಬಂಧಿತ ವಿಷಯಗಳಿರಲಿ. ಸ್ನಾತಕೋತ್ತರ ಪದವಿಯಲ್ಲಿ ಎಂ.ಕಾಂ., ಎಂಬಿಎ ಜೊತೆಗೆ ಎನ್‌ಸಿಎಫ್ಎಂ, ಎಎಂಎಫ್‌ಐ, ಎನ್‌ಎಸ್‌ಇ, ಬಿಸಿಡಿಇ ಸರ್ಟಿಫಿಕೇಷನ್‌ ಪಡೆಯುವುದು ಅಗತ್ಯ. ಇದರೊಂದಿಗೆ ಬ್ರೋಕಿಂಗ್‌ ಫರ್ಮ್, ಸ್ಟಾಕ್‌ ಮಾರ್ಕೆಟ್‌ಗಳಲ್ಲಿ ಟ್ರೈನಿ ಮೆಂಬರ್‌ ಆಗಿ ಸೇರಿಕೊಂಡರೆ ಮುಂದಿನ ದಾರಿ ಸುಲಭ. ಜೊತೆಗೆ ಕಂಪ್ಯೂಟರ್‌ ಜ್ಞಾನ, ಕಂಪನಿಗಳ ಷೇರು ಮೌಲ್ಯ, ದಿನನಿತ್ಯ ವಹಿವಾಟು ಇತ್ಯಾದಿಗಳ ಬಗ್ಗೆ ಜ್ಞಾನ ಅಗತ್ಯ.

ಪ್ರಾವೀಣ್ಯತೆ ಏನಿರಬೇಕು?
– ಷೇರು ಮಾರುಕಟ್ಟೆ ತಲ್ಲಣಗಳ ಬಗ್ಗೆ ವಿಶೇಷ ವಿಮರ್ಶಾ ಜ್ಞಾನ
– ಮಾರುವವರು ಮತ್ತು ಕೊಳ್ಳುವವರ ವಲಯವನ್ನು ಕಂಡುಕೊಳ್ಳುವ ಚಾಣಾಕ್ಷತೆ
– ಅನೇಕ ಷೇರು ಮಾರುಕಟ್ಟೆ ದೈತ್ಯ ಕಂಪನಿ, ಷೇರು ಡೀಲರ್ಗಳೊಂದಿಗೆ ಬಾಂಧವ್ಯ ಹೊಂದುವ ಜಾಣತನ
– ಹೂಡಿಕೆ, ಪರಭಾರೆ, ಮಾರಾಟ, ಷೇರುಗಳ ಕುರಿತ ಕಾನೂನು ಸಂಬಂಧಿತ ಅರಿವು
– ಸರ್ಕಾರಿ, ಆರ್‌ಬಿಐನಿಂದ ಷೇರು ಸಂಬಂಧಿತ ಹೊಸ ಯೋಜನೆಗಳ ಜ್ಞಾನ
– ಬ್ಯಾಂಕುಗಳು, ಅಂತಾರಾಷ್ಟ್ರೀಯ ಹಣದ ಮೌಲ್ಯಾಪಮೌಲ್ಯದ ಬಗ್ಗೆ ತಿಳಿವಳಿಕೆಗಳಿಕೆ ಹೇಗೆ?
ಷೇರು ಮಾರುಕಟ್ಟೆಯ ಸ್ಟಾಕ್‌ ಬ್ರೋಕರ್‌ಗಳು ಸ್ವತಂತ್ರವಾಗಿ ಶೇಕಡಾವಾರು ಲೆಕ್ಕದಲ್ಲಿ ಗಳಿಕೆ ಮಾಡುವುದುಂಟು. ಆದರೂ ಕಂಪನಿ ಹುದ್ದೆ, ವಾಣಿಜ್ಯ ವಲಯವನ್ನು ಆಧರಿಸಿ ವಾರ್ಷಿಕವಾಗಿ 3 ಲಕ್ಷದಿಂದ 12 ಲಕ್ಷ ರೂ.ಗಳವರೆಗೆ ಸಂಬಳ ಪಡೆಯುತ್ತಾರೆ. ತಮ್ಮ ಪ್ರಾವೀಣ್ಯತೆ ಮತ್ತು ಷೇರು ವಲಯದಲ್ಲಿ ಮಾಡಿರುವ ಹೆಸರಿನ ಆಧಾರದ ಮೇಲೆ ಗಳಿಕೆ ಹೆಚ್ಚುತ್ತಾ ಹೋಗುತ್ತದೆ.

Advertisement

ಎಲ್ಲಿ ಕಲಿಯಬಹುದು?
ಸ್ಟಾಕ್‌ ಬ್ರೋಕರ್‌ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ ಬಿ.ಕಾಂ, ಎಂ.ಕಾಮ…, ಎಂಬಿಎ ಆಗಿರುವುದರಿಂದ ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಈ ಕೋರ್ಸ್‌ಗಳನ್ನು ಮಾಡಬಹುದು. ಪದವಿ ಜೊತೆಗೆ ಸರ್ಟಿಫಿಕೇಷನ್‌ ಕೋರ್ಸ್‌ಗಳಾದ ಎನ್‌ಸಿಎಫ್‌ಎಂ, ಎಎಂಎಫ್‌ಐ, ಎನ್‌ಎಸ್‌ಐ, ಬಿಸಿಡಿಇ ಕೋರ್ಸ್‌ಗಳನ್ನು ಕಾಲೇಜು ಓದಿನೊಂದಿಗೆ ಖಾಸಗಿ ವಲಯದಲ್ಲಿ ಮಾಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಅವಕಾಶ ಎಲ್ಲೆಲ್ಲಿ?
– ಇನ್ವೆಸ್ಟ್ಮೆಂಟ್‌ ಬ್ಯಾಂಕುಗಳು ಮತ್ತು ಬ್ಯಾಂಕುಗಳ ಬ್ರೋಕಿಂಗ್‌ ಫರ್ಮ್
– ಇನ್ವೆಸ್ಟ್ಮೆಂಟ್‌ ಕನ್ಸಲ್ಟೆನ್ಸಿಸ್‌
– ಇನ್ಷೊರೆನ್ಸ್‌ ಕಂಪನಿಗಳು
– ಪೆನ್ಷನ್‌, ಮ್ಯೂಚುವಲ್ ಫಂಡ್ ಮತ್ತು ಫೌಂಡೇಶನ್‌
– ಫೈನಾನ್ಷಿಯಲ್ ರೀಸರ್ಚ್‌
– ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್
– ಷೇರು ಮಾರುಕಟ್ಟೆ ವಲಯ

 ಎನ್‌. ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next