ಮುಂಬಯಿ/ಹೊಸದಿಲ್ಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮಂಗಳವಾರ 47 ಪೈಸೆಯಷ್ಟು ಕುಸಿತ ಕಂಡಿದೆ. ದಿನದ ಅಂತ್ಯಕ್ಕೆ ಡಾಲರ್ ಎದುರು 72.98 ರೂ. ಆಗಿತ್ತು. ಆರಂಭದಲ್ಲಿ 10 ಪೈಸೆ ಚೇತರಿಕೆ ಕಂಡಿದ್ದರೂ, ದಿನಾಂತ್ಯಕ್ಕೆ ಅದು ದಾಖಲೆ ಕುಸಿತ ಕಂಡಿದೆ. ಕಳೆದ ವಾರ ರೂಪಾಯಿ ಮೌಲ್ಯ 72.91 ರೂ. ಆಗಿತ್ತು. ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಮರ ಈ ಬೆಳವಣಿಗೆಗೆ ಕಾರಣವಾಗಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಾಷಿಂಗ್ಟನ್‌ನಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಪ್ರಸಕ್ತ ವರ್ಷ ರೂಪಾಯಿಯ ಕುಸಿತ ಪ್ರಮಾಣ ಶೇ.6-7 ಮಾತ್ರ. ಆದರೆ ಈ ಬೆಳವಣಿಗೆ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರೀತು. ಹೀಗಾಗಿ, ಅದು ಹಣದುಬ್ಬರಕ್ಕೆ ಕಾರಣವಾದೀತು ಎಂದು ಎಚ್ಚರಿಕೆ ನೀಡಿದೆ.
ಪೇಟೆ ಕುಸಿತ: ಅಮೆರಿಕ ಅಧ್ಯಕ್ಷ ಟ್ರಂಪ್ ಚೀನ ವಿರುದ್ಧ ಮತ್ತಷ್ಟು ಸುಂಕ ಘೋಷಣೆ ಮಾಡಿದ್ದರ ಪರಿಣಾಮ, ಬಾಂಬೆ ಷೇರು ಪೇಟೆ ಸೂಚ್ಯಂಕ 295ರಷ್ಟು ಕುಸಿದಿದೆ. ನಿಫ್ಟಿ ಕೂಡ 98 ಅಂಕ ಇಳಿಕೆಯಾಗಿ, ದಿನಾಂತ್ಯಕ್ಕೆ 11, 300ರಲ್ಲಿ ಮುಕ್ತಾಯವಾಗಿದೆ. ಸತತ 2 ದಿನಗಳ ಕುಸಿತದಿಂದಾಗಿ ಹೂಡಿಕೆದಾರರಿಗೆ 2.72 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಜತೆಗೆ ಸೆನ್ಸೆಕ್ಸ್ ಒಟ್ಟಾರೆ 800 ಅಂಕಗಳಷ್ಟು ಕುಸಿದಿದೆ.
10 ಪೈಸೆ ಏರಿಕೆ: ಮಂಗಳವಾರ ಪೆಟ್ರೋಲ್ ದರ 10 ಪೈಸೆ ಏರಿಕೆಯಾಗಿದೆ. ಹೀಗಾಗಿ ಮುಂಬೈನಲ್ಲಿ ಪ್ರತಿ ಲೀ. ಪೆಟ್ರೋಲ್ ದರ 89.54 ರೂ. ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ 9 ಪೈಸೆ ಹೆಚ್ಚಳವಾಗಿದ್ದರಿಂದ 78.42 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀ.ಗೆ 82.16 ರೂ., ಡೀಸೆಲ್‌ಗೆ 73.87 ರೂ. ಆಗಿದೆ. ಕರ್ನಾಟಕ ಸರಕಾರ ತೆರಿಗೆ ಪ್ರಮಾಣ 2 ರೂ. ಇಳಿಕೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 82.82 ರೂ. (1.92 ರೂ. ಇಳಿಕೆ), ಡೀಸೆಲ್ ದರ 74.25 ರೂ. (1.91 ರೂ. ಇಳಿಕೆ) ಆಗಿದೆ.