ತಿ.ನರಸೀಪುರ: ಹಸಿವಿನ ಸಂಕಟ, ಬಡತನದ ಕಷ್ಟವನ್ನು ಹತ್ತಿರದಿಂದ ಕಂಡಿರುವುದರಿಂದ ಕಡಿಮೆ ಖರ್ಚಿನಲ್ಲಿ ಹಸಿದ ಹೊಟ್ಟೆಯನ್ನು ತುಂಬಿಸಲು ಪೊಲೀಸ್ ಕ್ಯಾಂಟೀನ್, ಮಾಸಿಕ ಉಳಿತಾಯಕ್ಕೆ ಉತ್ತೇಜನ ನೀಡಲು ರಿಯಾಯ್ತಿ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ದಿನಸಿ ಹಾಗೂ ಔಷಧ ಅಂಗಡಿಗಳನ್ನು ಜಿಲ್ಲೆಯಾದ್ಯಂತ ಆರಂಭಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳ ಸಮುತ್ಛಯದಲ್ಲಿ ಆರಕ್ಷಕ ಕಲ್ಪವೃಕ್ಷ ಕಾರ್ಯಕ್ರಮದಡಿ ಸಸಿಗೆ ನೀರೆರೆಯುವ ಮೂಲಕ ಪೊಲೀಸ್ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಹೆಚ್.ಡಿ ಕೋಟೆ, ಸರಗೂರು ಪಟ್ಟಣಗಳಲ್ಲಿ ಪೊಲೀಸ್ ಕ್ಯಾಂಟೀನ್ ಈಗಾಗಲೇ ಕಾರ್ಯಾರಂಭ ಮಾಡಿದ್ದು, ನರಸೀಪುರದಲ್ಲಿ ಉದ್ಘಾಟನೆಗೊಳ್ಳುತ್ತಿದೆ.
ಸೋಮವಾರ ಹುಣಸೂರು ಪಟ್ಟಣದಲ್ಲಿ ಸೂಪರ್ ಮಾರ್ಕೇಟ್ ಮಾದರಿಯ ದಿನಸಿ ಅಂಗಡಿ ಉದ್ಘಾಟನೆಗೊಳ್ಳಲು ಸಜಾjಗಿದೆ ಎಂದರು. ತರಬೇತಿಯಲ್ಲಿದ್ದಾಗ ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಂದು ಠಾಣೆಯಲ್ಲೂ ಪೊಲೀಸ್ ಕ್ಯಾಂಟೀನ್ ನಡೆಯುತ್ತಿದ್ದುದ್ದನ್ನು ನೋಡಿದ್ದೆ. ನೆರೆಯ ತೆಲಂಗಾಣದಲ್ಲಿ ಪೊಲೀಸ್ ಕ್ಯಾಂಟೀನ್ ಆರಂಭಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಹಾಸನದಲ್ಲಿ ಕರ್ತವ್ಯದ ಆರಂಭದಲ್ಲಿ ಚಿಂತನೆ ಮಾಡಿದ್ದನ್ನು ಶಿವಮೊಗ್ಗದಲ್ಲಿದ್ದಾಗ ಕ್ಯಾಂಟೀನ್ ಆರಂಭಿಸಿ ಎಸ್ಪಿ ಕಚೇರಿ ಮುಂಭಾಗವಿದ್ದ ದೊಡ್ಡಾಸ್ಪತ್ರೆಗೆ ನಿತ್ಯವೂ ಬರುವ ಸಾವಿರಾರು ಜನರಿಗೆ ರಿಯಾಯ್ತಿ ದರಲ್ಲಿ ಗುಣಮಟ್ಟದ ಊಟವನ್ನು ನೀಡಿ ಯಶಸ್ವಿಯಾಗಿದ್ದೇವೆ. ನಂತರ ಔಷಧ ಮಳಿಗೆಯನ್ನೂ ಆರಂಭಿಸಲಾಯಿತು. ಈಗ ಮೈಸೂರು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಮುಕ್ತ ಅವಕಾಶ: ಎನ್.ರುದ್ರಮುನಿ ಮಾತನಾಡಿ, ಆರಕ್ಷಕ ಕಲ್ಪವೃತ್ತ ಯೋಜನೆಯಡಿ ಆರಂಭಿಸಿರುವ ಪೊಲೀಸ್ ಕ್ಯಾಂಟೀನ್ ಪೊಲೀಸ್ ಇಲಾಖೆಯ ಕನಸಿನ ಕೂಸು. ಪೊಲೀಸ್ ವರಿಷ್ಠಾಧಿಕಾರಿ ದೂರದೃಷ್ಟಿ ಚಿಂತನೆಗೆ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳು ಸಾಥ್ ನೀಡುತ್ತಿದ್ದು, ಅತ್ಯಾಧುನಿಕ ವಿನ್ಯಾಸದ ಶೈಲಿಯಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದಾರೆ.
ಪೊಲೀಸರಿಗಷ್ಟೇ ಅಲ್ಲ, ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ ಎಂದು ತಿಳಿಸಿದರು. ನಂಜನಗೂಡು ಉಪ ವಿಭಾಗದ ಎಎಸ್ಪಿಯಾಗಿ ಸೇವೆಯನ್ನು ಸಲ್ಲಿಸಿ ಬೆಂಗಳೂರು ಲೋಕಾಯುಕ್ತ ಎಸ್ಪಿಯಾಗಿ ಬಡ್ತಿಪಡೆದು ವರ್ಗಾವಣೆಗೊಂಡ ಮೊಹಮ್ಮದ್ ಸುಜಿತ್ ಅವರು ಪೊಲೀಸ್ ಕ್ಯಾಂಟೀನ್ ಉದ್ಘಾಟಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಎನ್.ಆನಂದ್, ಲತೇಶ್‌ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುನೀತಾ ಪ್ರಭು, ಸಮಾಜ ಸೇವಕ ಮಾದೇಶ, ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕಿರಗಸೂರು ಶಂಕರ್, ಗ್ರಾಪಂ ಮಾಜಿ ಉಪಾಧ್ಯಕ್ಷ ತಿರುಮಕೂಡಲು ಪುಟ್ಟು, ಎಎಸೈಗಳಾದ ಮೂರ್ತಿ, ದೊಡ್ಡೇಗೌಡ ಹಾಗೂ ಇನ್ನಿತರರು ಹಾಜರಿದ್ದರು.