ಬೆಂಗಳೂರು: ಸಾರ್ವಜನಿಕರಿಗೆ ಅನುಕೂಲವಾಗುವ ಮತ್ತು ಮಾದರಿ ರಸ್ತೆಯನ್ನಾಗಿ ಬದಲಾಯಿಸುವ ಉದ್ದೇಶದಿಂದ ಚರ್ಚ್ ಸ್ಟ್ರೀಟ್ ಅನ್ನು ವಾಹನ ಮುಕ್ತ ರಸ್ತೆಯನ್ನಾಗಿಸಲು ಬಿಬಿಎಂಪಿ ನಿರ್ಧರಿಸಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಒಲವು ತೋರದ ಕಾರಣದ ಹಾಗೂ ಪ್ರಾರಂಭದಲ್ಲೇ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ.
ಚರ್ಚ್‌ಸ್ಟ್ರೀಟ್ 750 ಮೀ. ಉದ್ದವಿದ್ದು, ನಿತ್ಯ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಅದೇ ರೀತಿ ನೂರಾರು ಜನರ ಜೀವನೋಪಾಯಕ್ಕೂ ಈ ರಸ್ತೆ ವೇದಿಕೆಯಾಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸುವ ಮೂಲಕ ಸಾರ್ವಜನಿಕರು ಈ ರಸ್ತೆಯಲ್ಲಿ ಮುಕ್ತವಾಗಿ ನಡೆದಾಡುವುದಕ್ಕೆ ಅವಕಾಶ ಕಲ್ಪಿಸಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಚರ್ಚ್‌ಸ್ಟ್ರೀಟ್‌ನಲ್ಲಿ ಟೆಂಡರ್ ಶ್ಯೂರ್ ಯೋಜನೆಯನ್ನು ಪರಿಚಸುವಾಗಲೇ ವಾಹನ ಪ್ರವೇಶ ನಿಷೇಧಿಸಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಆ ಕುರಿತು ಹೆಚ್ಚಿನ ಚರ್ಚೆಯಾಗಿಲ್ಲ.
ವ್ಯಾಪಾರ ಹೆಚ್ಚಳ: “ರಸ್ತೆಗಳನ್ನು ಪಾದಚಾರಿಗಳಿಗೆ ಮೀಸಲಿಟ್ಟರೆ ಆ ಪ್ರದೇಶದಲ್ಲಿ ವ್ಯಾಪಾರ ಪ್ರಮಾಣ ಹೆಚ್ಚಾಗಲಿದೆ’ ಎನ್ನುತ್ತಾರೆ ಸಾರಿಗೆ ತಜ್ಞೆ ಸೋನಲ್ ಎಸ್. ಕುಲಕರ್ಣಿ. “ದೆಹಲಿ, ಮುಂಬೈ ನಗರಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಭಾಗದಲ್ಲಿ ಉಳಿದ ಪ್ರದೇಶಗಳಿಗಿಂತ ಹೆಚ್ಚು ಜನ ವ್ಯಾಪಾರ ಮಾಡುತ್ತಾರೆ. ಬೆಂಗಳೂರಿನಲ್ಲಿ ಈ ಯೋಜನೆ ಅನುಷ್ಠಾನ ಮಾಡುವುದಕ್ಕೆ ಬಹಳಷ್ಟು ಅವಕಾಶವಿದೆ. ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಲಾಭದ ಬಗ್ಗೆ ತಿಳಿಸಬೇಕು. ವಾಹನ ಸಂಚಾರವಿರುವ ರಸ್ತೆಗಳಲ್ಲಿ ಸಾರ್ವಜನಿಕರು ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ವಾಹನ ಸಂಚಾರವಿಲ್ಲದಿದ್ದರೆ, ಜನ ನಡೆದುಕೊಂಡೇ ಹೋಗುವುದರಿಂದ ಎಲ್ಲ ಅಂಗಡಿಗಳನ್ನು ಗಮನಿಸುತ್ತಾರೆ. ಸಹಜವಾಗೇ ಈ ಭಾಗದಲ್ಲಿ ವ್ಯಾಪಾರ, ವಹಿವಾಟಿಗೂ ಉತ್ತೇಜನ ಸಿಗಲಿದೆ’ ಎಂದು ಅವರು ವಿವರಿಸುತ್ತಾರೆ.
“ಈ ರೀತಿ ನಿಷೇಧ ಹೇರಿದ ರಸ್ತೆಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು. ಬೆಂಗಳೂರಿನ ಚರ್ಚ್‌ಸ್ಟ್ರೀಟ್, ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್, ಗಾಂಧೀ ಬಜಾರ್ ಹಾಗೂ ವಿವಿ ಪುರದ ಪುಡ್ ಸ್ಟ್ರೀಟ್‌ನಲ್ಲಿ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ, ಇದರಲ್ಲಿ ಕೆಲವನ್ನು ವಾಹನ ಮುಕ್ತ ರಸ್ತೆಯಾಗಿ ಬದಲಾಯಿಸಿದರೆ ಸಾರ್ವಜನಿಕರಿಗೂ ಅನುಕೂಲ ವಾಗಲಿದೆ’ ಎನ್ನುತ್ತಾರೆ ಬಿ-ಪ್ಯಾಕ್ ಸದಸ್ಯ ಶರತ್ ಎಸ್.ಆರ್.
-ಹಿತೇಶ್ ವೈ