ಉಡುಪಿ: ಊರಿನ ಕೆರೆ, ಮದಗಗಳ ಹೂಳು ತೆಗೆಸಬೇಕು, ಎರಡು ಮೂರು ಬೆಳೆಗಳನ್ನು ಬೆಳೆಯುವಾಗ ಹಾಕಿದ ತಾತ್ಕಾಲಿಕ ಕಟ್ಟುಗಳಿಂದ ಅಂತರ್ಜಲ ಹೆಚ್ಚು ಕಾಲ ಉಳಿಯುತ್ತದೆ, ಇಲ್ಲವಾದರೆ ಅಂತರ್ಜಲ ಕುಸಿಯುತ್ತದೆ, ಮಣ್ಣಿನ ಅಂಗಣವಾದರೆ ನೀರು ಭೂಮಿಯಲ್ಲಿ ಇಂಗುತ್ತದೆ, ಕಾಂಕ್ರಿಟ್ ಅಂಗಣವಾದರೆ ಇಂಗುವುದು ಸಾಧ್ಯವಿಲ್ಲ ಎಂದು ಹೇಳಲು ಡಾಕ್ಟರೇಟ್ ಜ್ಞಾನ, ಪದವಿಯೇನಾದರೂ ಬೇಕೆ?
ಭೂ ಮಸೂದೆ ಕಾನೂನು ಜಾರಿಗೊಳ್ಳುವಾಗ ಶಾಸಕರಾಗಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಕಾಗೋಡು ತಿಮ್ಮಪ್ಪನವರು ರವಿವಾರವಷ್ಟೇ ಕರಾವಳಿ ಜಿಲ್ಲೆಗಳಿಗೆ ಭೇಟಿ ಕೊಟ್ಟ ಸಂದರ್ಭ ಭೂಮಸೂದೆ ಕಾನೂನಿನ ಕಾಲವನ್ನು ಸ್ಮರಿಸಿಕೊಂಡರು. ಈ ಕಾನೂನು ತಂದದ್ದು ಉಳುತ್ತಿದ್ದ ಕೃಷಿಕನನ್ನು ಮೇಲೆತ್ತಲೋ? ಕೃಷಿ ಕ್ಷೇತ್ರವನ್ನು ಮೇಲೆತ್ತಲೋ? ಸರಿ ಸುಮಾರು ನಾಲ್ಕು ದಶಕಗಳ ಬಳಿಕ ಕೃಷಿ ಕ್ಷೇತ್ರವನ್ನು ಮೇಲೆತ್ತುವ ಪ್ರಯತ್ನ ಕೈಗೂಡಲಿಲ್ಲ ಎನ್ನುವುದು ಗೋಚರಿಸುತ್ತದೆ. ಆ ಕೃಷಿ ಭೂಮಿ ಎರಡು ಮೂರು ತಲೆಮಾರಿನಲ್ಲಿ ತುಂಡು ಭೂಮಿಗಳಾಗಿ ಮಾರಾಟವಾಗಿವೆ. ಗದ್ದೆಗಳು ಪಾಳು ಬಿದ್ದಿವೆ. ಎರಡು ಮೂರು ಬೆಳೆ ಬೆಳೆಯುವ ಗದ್ದೆಗಳಲ್ಲಿ ಮಳೆಗಾಲದ ಒಂದು ಬೆಳೆ ಬೆಳೆದರೂ ಕಷ್ಟ. ಎರಡನೆಯ ಮೂರನೆಯ ಬೆಳೆಗೆ ಹಾಕುತ್ತಿದ್ದ ತಾತ್ಕಾಲಿಕ ಅಣೆಕಟ್ಟುಗಳು ಮಾಯವಾಗಿ ಅಂತರ್ಜಲ ಕುಸಿಯಲು ಇದೂ ಒಂದು ಕಾರಣವಾಗಿದೆ. ಆದರೆ ವೆಂಟೆಡ್ ಡ್ಯಾಮ್ ಕಾಮಗಾರಿಗೆ ಕೋಟಿಗಟ್ಟಲೆ ಹಣ ಮಂಜೂರಾಗುತ್ತಿದೆ, ಬಿಡುಗಡೆಯೂ ಆಗುತ್ತಿದೆ. ತನ್ನ ಹೆಸರಿನಲ್ಲಿ ಇಷ್ಟು ಹಣ ಖರ್ಚಾಗುತ್ತಿರುವುದು ಅಂತರ್ಜಲ ಇಲಾಖೆಗೆ ಗೊತ್ತಿಲ್ಲ!
ಒಂದು ಕಾಲದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಅಭಿವೃದ್ಧಿಗೆ ಧಕ್ಕೆ ಎಂಬ ಮಾತನ್ನು ಎಲ್ಲರೂ ಉದುರಿಸುತ್ತಿದ್ದರು. ಈಗ ಒಂದೋ ಎರಡೋ ಮಕ್ಕಳ ಕಾಲ. ಈಗ ಆ ಕಾರಣವನ್ನು ಹೇಳಿ ಅಭಿವೃದ್ಧಿ ಆಗಲಿಲ್ಲ ಎಂದು ಹೇಳುವುದು ಕಷ್ಟ. ಮನೆಗಳಲ್ಲಿ ಒಬ್ಬರೋ ಇಬ್ಬರೋ ವೃದ್ಧರಿದ್ದರೆ ಮಕ್ಕಳು ಪ್ರಾಯಕ್ಕೆ ಬಂದ ಬಳಿಕ ಊರಿನಲ್ಲಿ ನಿಲ್ಲದ ಸ್ಥಿತಿ ಇದೆ. ಆದರೂ…. ಮನೆಗಳ, ಕಟ್ಟಡಗಳ ನಿರ್ಮಾಣ ನಾಗಾಲೋಟದಲ್ಲಿ ಸಾಗುತ್ತಿದೆ. ಗದ್ದೆಗಳ ಮಧ್ಯೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಾರಣ ಹೆಚ್ಚಿನ ಬೆಲೆಗೆ ಮನೆ ನಿವೇಶನಗಳನ್ನು ಮಾರಾಟ ಮಾಡಲು. ಈಗ ಮಳೆ ಪ್ರಮಾಣ ಕಡಿಮೆಯಾದರೂ ಬರುವ ಒಂದೆರಡು ಮಳೆಗೆ ಕೃತಕ ನೆರೆ ಬರುವುದನ್ನು ನೋಡುತ್ತಿದ್ದೇವೆ. ಕೂಡಲೇ ಮಾಧ್ಯಮಗಳು ನೆರೆ ದೃಶ್ಯ, ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಕೊಡುವ ದೃಶ್ಯಗಳನ್ನು ಪ್ರಕಟಿಸುತ್ತವೆ. ಕೃತಕ ನೆರೆಯೂ ಒಂದಿಷ್ಟು ಜನರಿಗೆ ಸಂಪತ್ತನ್ನು ಸುರಿಸುತ್ತದೆ. ಈಗ ನಿರ್ಮಿಸುತ್ತಿರುವ ರಸ್ತೆಗಳ ಅಡಿ ಭಾಗದಿಂದ ನೀರು ಹರಿದುಹೋಗಲೂ ಸಾಕಷ್ಟು ಕೊಳವೆ ಮಾರ್ಗಗಳು ಇಲ್ಲ. ಈಗ ಬೇಸಗೆಯಾದ ಕಾರಣ ಕರೆನ್ಸಿ ನೋಟುಗಳ ಎಣಿಕೆಯಲ್ಲಿ ಕನಸು ಕಾಣುವವರಿಗೆ ಕೃತಕ ನೆರೆಯ ಯೋಚನೆಯೂ ಬರುತ್ತಿಲ್ಲ. ಇವರಿಗೆ ಬಾರದಿದ್ದರೆ ಹೋಗಲಿ, ಸ್ಥಳೀಯ ಸರಕಾರಗಳಾದ ಗ್ರಾ.ಪಂ., ನಗರ ಸಂಸ್ಥೆಗಳು, ನಗರ ಪ್ರಾಧಿಕಾರಗಳಿಗಾದರೂ ಇದು ಗೋಚರಿಸಬೇಕಿತ್ತಲ್ಲ? ಈಗ ಎಲ್ಲರಿಗೂ ಗಾಢನಿದ್ರೆ. ಅತ್ತ ಕೃಷಿಯೂ ಇಲ್ಲ, ಇತ್ತ ಅಣೆಕಟ್ಟೂ ಇಲ್ಲ, ಅತ್ತ ಅಂತರ್ಜಲವೂ ಇಲ್ಲ, ಇತ್ತ ನೀರು ಹರಿದುಹೋಗಲು ಕೊಳವೆಮಾರ್ಗವೂ ಇಲ್ಲ. ಇರುವುದೇನು? ಅನುಭವಿಸಲು ಸಾಧ್ಯವೋ ಇಲ್ಲವೋ ಎಂದು ಯೋಚಿಸದೆ ಎಲ್ಲರೂ ಕರೆನ್ಸಿ ನೋಟುಗಳ ಹಿಂದೆ ಓಡುತ್ತಿದ್ದಾರೆ. ಈಗ ಪಡೆದ ಕರೆನ್ಸಿ ನೋಟುಗಳಿಗೆ ಎಷ್ಟು ದಿನ ಎಷ್ಟು ಬೆಲೆ ಇರುತ್ತದೆ ಎಂದು ಯಾರೂ ಯೋಚಿಸುತ್ತಿಲ್ಲ. ಎರಡು- ಮೂರು ತಲೆಮಾರಿನ ಹಿಂದಿನವರೂ ಇದೇ ರೀತಿ ಕೆಡಿಸಿ ಇಟ್ಟಿದ್ದರೆ ನಮ್ಮ ಊರು ವೆನಿಜುವೆಲಾ, ಉಗಾಂಡ, ಸುಡಾನ್, ಈಜಿಪ್ಟ್, ಜಿಂಬಾಬ್ವೆ, ಇಕ್ವೆಡೋರ್‌ನಂತೆ ದಿವಾಳಿ ಆಗಿರುತ್ತಿತ್ತು. ಮುಂದೆ ದಿವಾಳಿಯಾದರೂ ಪರವಾಗಿಲ್ಲ, ಈಗ ಎಸಿ ಕಾರಿನಲ್ಲಿ ಹೋಗೋಣ, ಎಸಿ ಕೋಣೆಯಲ್ಲಿ ಕೂರೋಣ ಎಂಬ ವಿಕ್ಷಿಪ್ತ ಮಾನಸಿಕತೆ ತಳವೂರಿದೆ.
“ಕೋತಿ ತಾನೂ ಕೆಟ್ಟು ಊರೆಲ್ಲವನ್ನೂ ಕೆಡಿಸಿತು’ ಎಂಬ ಗಾದೆ ಮಾತಿನಂತೆ ಕೆಲವೇ ಜನರು ತಮ್ಮ ಸ್ವಾರ್ಥಕ್ಕಾಗಿ ಊರನ್ನೇ ಕೆಡಿಸುತ್ತಿದ್ದಾರೆ. ಇದು ಕೋತಿಗೆ ಸಂಬಂಧಿಸಿದ ಗಾದೆಯಾದ್ದರಿಂದ ಧೈರ್ಯದಿಂದ ಬರೆಯಬಹುದು. ವ್ಯಕ್ತಿಗೋ, ಜಾತಿಗೋ ಸಂಬಂಧಿಸಿದ್ದಾದರೆ ಬರೆಯುವಂತೆಯೂ ಇಲ್ಲ.
ಬಜೆ ಅಣೆಕಟ್ಟು
ನೀರಿನ ಮಟ್ಟ ಮತ್ತಷ್ಟು ಕುಸಿತ
ಸ್ವರ್ಣಾ ನದಿಯ ಬಜೆ ಅಣೆಕಟ್ಟಿನ ನೀರಿನ ಸಂಗ್ರಹ ಮಟ್ಟ
ಮತ್ತಷ್ಟು ಕುಸಿತ ಕಂಡಿದೆ.
23-4-17: 2.26 ಮೀ.
23-4-16: 3.45 ಮೀ.
24-4-17: 2.18 ಮೀ.
24-4-16: 3.40 ಮೀ.
– ಮಟಪಾಡಿ ಕುಮಾರಸ್ವಾಮಿ