ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಆಗಿರುವ ವಿಕ್ರಂ ಲ್ಯಾಂಡರ್ ನೌಕೆಯ ಜೊತೆ ಸಂವಹನ ಸಾಧಿಸಲು ಇಸ್ರೋ ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.
‘ಲ್ಯಾಂಡರ್ ಜೊತೆ ಸಂವಹನ ಸಾಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಇಸ್ರೋ ಮಂಗಳವಾರ ತನ್ನ ಹೊಸ ಟ್ವೀಟ್ ನಲ್ಲಿ ತಿಳಿಸಿದೆ.
ಚಂದ್ರನ ನೆಲದಲ್ಲಿ ತನ್ನ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಇಸ್ರೋ ವಿಜ್ಞಾನಿಗಳ ಪ್ರಯತ್ನ ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಮತ್ತು ವಿಕ್ರಂ ನೌಕೆ ಇಸ್ರೋ ನಿಯಂತ್ರಣ ಕೇಂದ್ರದ ನಿಗಾದಿಂದ ತಪ್ಪಿಸಿಕೊಂಡಿತ್ತು. ಆದರೆ ಮರುದಿನ ಅಂದರೆ ರವಿವಾರದಂದು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಚಂದ್ರನ ನೆಲದಲ್ಲಿ ವಿಕ್ರಂ ಇರುವಿಕೆಯನ್ನು ಪತ್ತೆಹಚ್ಚಿತ್ತು.
ಈ ಬೆಳವಣಿಗೆ ಇಸ್ರೋ ವಿಜ್ಞಾನಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು. ಮತ್ತು ಆ ಕ್ಷಣದಿಂದ ವಿಕ್ರಂ ಜೊತೆ ಸಂವಹನ ಸಾಧಿಸಲು ವಿಜ್ಞಾನಿಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.