ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಮುಂದಿನ ಎರಡು ದಿನಗಳು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಉಂಟಾಗಿರುವ ಮೇಲ್ಮೆ„ಸುಳಿಗಾಳಿಯ ಪ್ರಭಾವದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಜಿಲ್ಲೆ ಸೇರಿ ರಾಜ್ಯದ ಹಲವೆಡೆ ಬುಧವಾರ ಗುಡುಗು, ಮಿಂಚು ಸಹಿತ ಮಳೆಯಾಯಿತು. ದಕ್ಷಿಣ ಒಳನಾಡಿನಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಾಗಿದ್ದು, ಇದರಿಂದಾಗಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದರು. ಕಳೆದ ಎರಡು ಮೂರು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನ ಕಡಿಮೆಯಾಗಿದ್ದು,
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿದೆ. ಇದರೊಂದಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೂ ಉಷ್ಣಾಂಶ ಹೆಚ್ಚಾಗಿರುವುದರಿಂದ ಉತ್ತರ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದರು.
ಬುಧವಾರ ರಾಮನಗರದಲ್ಲಿ 39 ಮಿ.ಮೀ.ಮಳೆಯಾಗಿದೆ. ಉಳಿದಂತೆ ಬೆಂಗಳೂರು ನಗರ 30, ಬೆಂಗಳೂರು ಗ್ರಾಮಾಂತರ 32, ಕೋಲಾರ 36, ಚಿಕ್ಕಬಳ್ಳಾಪುರ 6, ತುಮಕೂರು 33, ಮೈಸೂರು 5, ಮಂಡ್ಯ 12, ಬೀದರ್ 1, ವಿಜಯಪುರ 2, ಹಾವೇರಿ 2.50, ಹಾಸನ 1, ಕೊಡಗು 5.5 ಹಾಗೂ ದಕ್ಷಿಣ 1.50 ಮಿ.ಮೀಗಳಷ್ಟು ಮಳೆಯಾಗಿದೆ.