Advertisement

ಅಭ್ಯಾಸ ಪಂದ್ಯ: ಸ್ಮಿತ್‌, ಮಾರ್ಷ್‌ ಸೆಂಚುರಿ ಸಂಭ್ರಮ

03:45 AM Feb 18, 2017 | Team Udayavani |

ಮುಂಬಯಿ: ಆಸ್ಟ್ರೇಲಿಯ ತನ್ನ ಭಾರತ ಪ್ರವಾಸವನ್ನು ಆಶಾದಾಯಕ ರೀತಿಯಲ್ಲಿ ಆರಂಭಿಸಿದೆ. ಭಾರತ “ಎ’ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನ 5 ವಿಕೆಟಿಗೆ 327 ರನ್‌ ರಾಶಿ ಹಾಕಿದೆ. ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ಅವರ ಶತಕ ಕಾಂಗರೂ ಸರದಿಯ ಆಕರ್ಷಣೆಯಾಗಿತ್ತು.

Advertisement

ಟಾಸ್‌ ಗೆದ್ದ “ಎ’ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಮೊದಲು ಬೌಲಿಂಗ್‌ ಬಯಸಿದರು. ಆದರೆ ಇದರಿಂದ ಆತಿಥೇಯರಿಗೆ ಯಾವುದೇ ಲಾಭವಾಗಲಿಲ್ಲ. ಒಟ್ಟು 7 ಮಂದಿಯನ್ನು ದಾಳಿಗಿಳಿಸಿದರೂ ಯಶಸ್ಸು ಪಡೆದವರು ಇಬ್ಬರು ಮಾತ್ರ. ಮಧ್ಯಮ ವೇಗಿ ನವದೀಪ್‌ ಸೈನಿ 2 ವಿಕೆಟ್‌ ಕಿತ್ತರೆ, ಸ್ವತಃ ಪಾಂಡ್ಯ ಒಂದು ವಿಕೆಟ್‌ ಕಿತ್ತರು. ಸ್ಮಿತ್‌ ಮತ್ತು ಮಾರ್ಷ್‌ ಶತಕ ಬಾರಿಸಿದ ಬಳಿಕ ನಿವೃತ್ತರಾದರು.

ಸ್ಮಿತ್‌-ಮಾರ್ಷ್‌ ಶತಕದಾಟ
161 ಎಸೆತಗಳಿಗೆ ಜವಾಬಿತ್ತ ಸ್ಟೀವನ್‌ ಸ್ಮಿತ್‌ 107 ರನ್‌ ಬಾರಿಸಿ ಟೆಸ್ಟ್‌ ಸರಣಿಗೆ ಮಾನಸಿಕವಾಗಿ ಸಜ್ಜುಗೊಂಡಂತೆ ಕಂಡರು. ಕಾಂಗರೂ ಕಪ್ತಾನನ 161 ಎಸೆತಗಳ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಶಾನ್‌ ಮಾರ್ಷ್‌ ಕೊಡುಗೆ 104 ರನ್‌. ಎದುರಿಸಿದ್ದು 173 ಎಸೆತ, ಬೀಸಿದ್ದು 11 ಬೌಂಡರಿ ಮತ್ತು ಒಂದು ಸಿಕ್ಸರ್‌.

ದ್ವಿತೀಯ ವಿಕೆಟಿಗೆ ಜತೆಗೂಡಿದ ಸ್ಟೀವನ್‌ ಸ್ಮಿತ್‌ ಮತ್ತು ಶಾನ್‌ ಮಾರ್ಷ್‌ ಭಾರತ “ಎ’ ತಂಡದ ಬೌಲಿಂಗ್‌ ದಾಳಿಯನ್ನು ತೀರಾ ಸಾಮಾನ್ಯ ಮಟ್ಟಕ್ಕಿಳಿಸಿದರು. ಇಬ್ಬರೂ ಶತಕ ಸಂಭ್ರಮ ಆಚರಿಸುವುದರ ಜತೆಗೆ 3ನೇ ವಿಕೆಟಿಗೆ 156 ರನ್‌ ಒಟ್ಟುಗೂಡಿಸಿ ಮೆರೆದಾಡಿದರು. 40 ಓವರ್‌ಗಳ ಜತೆಯಾಟ ಇವರದಾಗಿತ್ತು.

ಆಸ್ಟ್ರೇಲಿಯದ ಭರವಸೆಯ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಾಂಬ್‌ 45 ರನ್‌ (70 ಎಸೆತ, 3 ಬೌಂಡರಿ) ಹೊಡೆದು ಪಾಂಡ್ಯ ಅವರಿಗೆ ವಿಕೆಟ್‌ ಒಪ್ಪಿಸಿದರು. ಮಿಚೆಲ್‌ ಮಾರ್ಷ್‌ 16, ಮ್ಯಾಥ್ಯೂ ವೇಡ್‌ 7 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಕೆ. ಗೌತಮ್‌ ಗಾಯಾಳು
ಅನುಭವಿ ವೇಗಿ ಅಶೋಕ್‌ ದಿಂಡ, ಎಡಗೈ ಸ್ಪಿನ್ನರ್‌ ಶಾಬಾಜ್‌ ನದೀಂ ಅವರಿಗೆ ವಿಕೆಟ್‌ ಕೀಳಲು ಸಾಧ್ಯವಾಗಲಿಲ್ಲ. ಉಳಿದಂತೆ ಅಖೀಲ್‌ ಹೆರ್ವಾಡ್ಕರ್‌, ಶ್ರೇಯಸ್‌ ಅಯ್ಯರ್‌, ಪ್ರಿಯಾಂಕ್‌ ಪಾಂಚಾಲ್‌ ಮೊದಲಾದ ಪಾರ್ಟ್‌ಟೈಮ್‌ ಬೌಲರ್‌ಗಳಿಗೆ ಅವಕಾಶ ಕಲ್ಪಿಸಲಾಯಿತು. ಕರ್ನಾಟಕದ ಆಫ್ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ದ್ವಿತೀಯ ಅವಧಿಯಲ್ಲಿ ಸ್ನಾಯು ಸೆಳೆತಕ್ಕೆ ಸಿಲುಕಿ ಹೊರನಡೆದದ್ದು ಆತಿಥೇಯರಿಗೆ ಹಿನ್ನಡೆಯಾಗಿ ಪರಿಣಮಿಸಿತು.

ನವದೀಪ್‌ ಸೈನಿ ಆಸೀಸ್‌ ಆರಂಭಿಕರಾದ ಡೇವಿಡ್‌ ವಾರ್ನರ್‌ (25) ಮತ್ತು ಮ್ಯಾಟ್‌ ರೆನ್‌ಶಾ (11) ವಿಕೆಟ್‌ ಹಾರಿಸಿ ಆತಿಥೇಯರಿಗೆ ಮೇಲುಗೈ ಒದಗಿಸುವ ಸೂಚನೆಯಿತ್ತರು. ಸೈನಿ 6 ಓವರ್‌ಗಳಲ್ಲಿ ಕೇವಲ 13 ರನ್‌ ನೀಡಿ ಈ ವಿಕೆಟ್‌ ಕಬಳಿಸಿದ್ದರು. ಇವರಿಬ್ಬರೂ ಕೀಪರ್‌ ಇಶಾನ್‌ ಕಿಶನ್‌ಗೆ ಕ್ಯಾಚ್‌ ನೀಡಿದರು. ಆದರೆ ಸ್ಮಿತ್‌-ಮಾರ್ಷ್‌ ಜೋಡಿಯ ಸೊಗಸಾದ ಬ್ಯಾಟಿಂಗ್‌ ಪ್ರದರ್ಶನದಿಂದ ಆಸೀಸ್‌ ಕೈ ಮೇಲಾಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌-5 ವಿಕೆಟಿಗೆ 327 (ಸ್ಮಿತ್‌ 107, ಶಾನ್‌ ಮಾರ್ಷ್‌ 104, ಹ್ಯಾಂಡ್ಸ್‌ಕಾಂಬ್‌ 45, ವಾರ್ನರ್‌ 25, ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ 16, ರೆನ್‌ಶಾ 11, ವೇಡ್‌ ಬ್ಯಾಟಿಂಗ್‌ 7, ಸೈನಿ 27ಕ್ಕೆ 2, ಪಾಂಡ್ಯ 64ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next