ಉಡುಪಿ: ಮಣಿಪಾಲ ಕೆಎಂಸಿ ಮತ್ತು ಆಸ್ಪತ್ರೆ, ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯ ರೇಡಿಯೋಥೆರಪಿ ಮತ್ತು ಓಂಕಾಲಜಿ ವಿಭಾಗವು ಸ್ಟೀರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯವನ್ನು ಆರಂಭಿಸಿದೆ. ಈ ಅತ್ಯಾಧುನಿಕ ಕ್ಯಾನ್ಸರ್
ಚಿಕಿತ್ಸಾ ಸೌಲಭ್ಯವು ಕರಾವಳಿ ಕರ್ನಾಟಕದಲ್ಲಿ ಲಭ್ಯವಾಗುತ್ತಿರುವುದು ಇದೇ ಮೊದಲು.
ಇದು ಅತ್ಯಧಿಕ ಡೋಸೇಜ್‌ನ ಎಕ್ಸ್‌ರೇಗಳನ್ನು ಕ್ಯಾನ್ಸರ್ ಗಡ್ಡೆಯ ಮೇಲೆ ಅತ್ಯಂತ ನಿಖರವಾಗಿ ಕೇಂದ್ರೀಕರಿಸಿ ಹಾಯಿಸಲು ಸಾಧ್ಯವಾಗುವ ವಿಕಿರಣ ಚಿಕಿತ್ಸಾ ತಂತ್ರಜ್ಞಾನ. ಈ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣ ತೊಡೆದುಹಾಕಬಹುದು. ತೊಂದರೆಗೀಡಾದ ದೇಹಭಾಗವನ್ನು ತೆಗೆದು ಹಾಕುವಲ್ಲಿ ಶಸ್ತ್ರಚಿಕಿತ್ಸೆಯು ಒದಗಿಸುವಷ್ಟೇ ನಿಖರ ಪರಿಣಾಮವನ್ನು ಈ ವಿಧಾನದಿಂದ ಪಡೆಯಬಹುದು. ಹಾಗಾಗಿ ಈ ಪ್ರಕ್ರಿಯೆಯನ್ನು “ರೇಡಿಯೋ ಸರ್ಜರಿ’ ಎಂದು ಕರೆಯಲಾಗುತ್ತದೆ ಎಂದು ಕೆಎಂಸಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಡಾ| ಕೃಷ್ಣ ಶರಣ್ ಹೇಳಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದು ಅತ್ಯಾಧುನಿಕ ತಂತ್ರಜ್ಞಾನ. ಕೆಲವು ನಿರ್ದಿಷ್ಟ ಬಗೆಯ ಮೆದುಳು ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಅಲ್ಲದ ಇನ್ನಿತರ ಅಸಹಜ ಬೆಳವಣಿಗೆಗಳ ಚಿಕಿತ್ಸೆಯಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಎಂಬುದಾಗಿ ಸಂಶೋಧನೆಗಳಲ್ಲಿ ಕಂಡುಬಂದಿದೆ. ಮೊದಲು ಈ ಚಿಕಿತ್ಸೆಯನ್ನು ಮೆದುಳಿಗಷ್ಟೇ ಉಪಯೋಗಿಸಲಾಗುತ್ತಿತ್ತು. ತಾಂತ್ರಿಕ ಪ್ರಗತಿಯಿಂದಾಗಿ ಈಗ ಈ ತಂತ್ರಜ್ಞಾನವನ್ನು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್, ಅಂದರೆ ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಮತ್ತು ಲಿವರ್ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಬಳಸುತ್ತಾರೆ. ಸ್ಟೀರಿಯೋ ಟ್ಯಾಕ್ಟಿಕ್ ಸೌಲಭ್ಯದೊಂದಿಗೆ ಆಧುನಿಕ ಲೀನಿಯರ್ ಆ್ಯಕ್ಸಲರೇಟರ್ ಅಳವಡಿಕೆ ಮೂಲಕ ಆಸ್ಪತ್ರೆಯು ಕ್ಲಿನಿಕಲ್ ಪರಿಣತಿ ಮತ್ತು ಉಪಕರಣ ವಿಭಾಗದಲ್ಲಿ ದೇಶದಲ್ಲಿನ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ|(ಕ)ಎಂ.ದಯಾನಂದ ತಿಳಿಸಿದ್ದಾರೆ.