ವಿಧಾನಸಭೆ:ಬೆಂಬಲ ಬೆಲೆಯಡಿ ಕಡಲೆ ಖರೀದಿ ಮಿತಿ ಪ್ರತಿ ರೈತರಿಗೆ 50 ಕ್ವಿಂಟಾಲ್ ನಿಗದಿಪಡಿಸುವ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು, ಅಗತ್ಯಬಿದ್ದರೆ ನಿಯೋಗ ಕರೆದೊಯ್ಯಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಕೋನರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ 20 ಲಕ್ಷ ಕ್ವಿಂಟಾಲ್ ಕಡಲೆ ಖರೀದಿಗೆ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ 80 ಲಕ್ಷ ಕ್ವಿಂಟಾಲ್ ಬೆಳೆಯಲಾಗಿದೆ. ಪ್ರಸ್ತುತ ಪ್ರತಿ ರೈತನಿಂದ 20 ಕ್ವಿಂಟಾಲ್ ಖರೀದಿ ಮಿತಿ ನಿಗದಿಪಡಿಸಲಾಗಿದೆ. ಮಿತಿ ಹೆಚ್ಚಿಸುವ ಬಗ್ಗೆ ಬೇಡಿಕೆಯಿದ್ದು ಈಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಚಿವರೊಂದಿಗೂ ಮಾತನಾಡುತ್ತೇನೆ ಎಂದು ಹೇಳಿದರು.
ಕೇಂದ್ರ ಸಚಿವರ ಜತೆ ನೀವೂ (ಬಿಜೆಪಿ) ನಾಯಕರೂ ಮಾತನಾಡಿ. ಅಗತ್ಯವಾದರೆ ನಿಯೋಗದಲ್ಲೂ ಹೋಗಿ ಮನವಿ ಮಾಡೋಣ. ನಮ್ಮ ರೈತರಿಗೆ ನೆರವು ಕಲ್ಪಿಸುವ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರವೇ 50 ಕ್ವಿಂಟಾಲ್ ಮಿತಿ ನಿಗದಿಪಡಿಸಬಹುದು ಎಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಮತ್ತು ರಾಜ್ಯ ಸೇರಿ ಖರೀದಿ ಪ್ರಕ್ರಿಯೆ ನಡೆಸುವಾಗ ಅವರಿಗೆ ಹೇಳದೆ ನಾವೇ ತೀರ್ಮಾನ ಮಾಡಿದರೆ ತಪ್ಪಾಗುತ್ತದೆ ಎಂದು ಸಮಜಾಯಿಷಿ ನೀಡಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿಯ ವಿಶ್ವನಾಥ ಮಾಮನಿ, ರಮೇಶ್ ಭೂಸನೂರು, ಕಾಂಗ್ರೆಸ್‌ನ ಬಿ.ಆರ್.ಯಾವಗಲ್, ಜೆಡಿಎಸ್‌ನ ಕೋನರೆಡ್ಡಿ, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಪ್ರತಿಪಕ್ಷ ನಾಯಕ ಶೆಟ್ಟರ್, ಸರ್ಕಾರವೇ ಮಿತಿ ಏರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಚಿವರು ಮಾತನಾಡಿ, ನಾವು ಸಾಧ್ಯವಾದಷ್ಟೂ ಪ್ರಯತ್ನ ಮಾಡ್ತೇವೆ. ಖರೀದಿ ಮಿತಿ ಹೆಚ್ಚಿಸುವುದರಿಂದ ರಾಜ್ಯಕ್ಕೇನೂ ನಷ್ಟವಿಲ್ಲ. ಆದರೆ, ಅನುಮತಿ ಪಡೆಯಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಉಳಿದಂತೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾದರೆ ಆ ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕರುಗಳ ಸಮಿತಿಗೆ ಅಭಿವೃದ್ಧಿ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು. ಆರ್‌ಟಿಸಿ ಕಡ್ಡಾಯ ಎಂಬ ಷರತ್ತು ಸಹ ತೆಗೆಯಲಾಗಿದೆ ಎಂದು ಹೇಳಿದರು.