Advertisement

ಉತ್ತರ ಕನ್ನಡದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಂಸದ ಅನಂತಕುಮಾರ ಹೆಗಡೆ

04:42 PM Oct 02, 2021 | Team Udayavani |

ಶಿರಸಿ: ಉತ್ತರ ಕನ್ನಡ ಕ್ಷೇತ್ರದಲ್ಲಿ  ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ಕಡಲ ಅಭಿವೃದ್ಧಿ,  ಬೃಹತ್ ಸರಕು ಸಾಗಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 4 ಬೃಹತ್ ಯೋಜನೆಗಳ ಕುರಿತಂತೆ ಸಮಗ್ರ ಕಾರ್ಯಸಾಧ್ಯತಾ ವರದಿಗಳನ್ನು  ಸಾಗರಮಾಲಾ  ಸೆಲ್  ಮತ್ತು ಸಾಗರಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್‌ಗೆ ಸಲ್ಲಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.

Advertisement

ಇನ್ನೂ ಎರಡು ಅಭಿವೃದ್ಧಿ ಯೋಜನೆಗಳಿಗಾಗಿ ಸಮಗ್ರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು.  ಈ ಯೋಜನೆಗಳು ಕಾರವಾರ ಬಂದರುಗಳಲ್ಲಿ ಅಗತ್ಯ ಸಲಕರಣೆಗಳನ್ನು ಸ್ಥಾಪಿಸುವುದು, ಕಾರವಾರ ಬಂದರಿನ ಯಾಂತ್ರೀಕರಣ, ಸೀಪ್ಲೇನ್ ಸೌಲಭ್ಯಗಳು ಮತ್ತು ಜಲಮಾರ್ಗ ಅಭಿವೃದ್ಧಿಯಂತಹ ಘಟಕಗಳಗೆ ಮಾತ್ರ ಸೀಮಿತವಾಗಿರದೇ,  ಆರ್ಥಿಕ ನೆರವಿನ ಕುರಿತ ಒಪ್ಪಂದಗಳನ್ನು ಒಳಗೊಂಡಿರುವಂತಹ ಪ್ರಸ್ತಾವನೆಗಳನ್ನು ಸಾಗರಮಾಲಾ ಸೆಲ್‌ಗೆ ಸಲ್ಲಿಸಲಾಗಿದೆ ಎಂದಿದ್ದಾರೆ.

ಬಂದರುಗಳು, ಹಡಗು ಮತ್ತು ಜಲಮಾರ್ಗಗಳು, ಸ್ಥಳೀಯ ಜನಸಂಖ್ಯೆ ಹಾಗೂ ಸರಿಸುಮಾರು 30 ಲಕ್ಷ ಪ್ರವಾಸಿಗರನ್ನು ಸಂಪರ್ಕಿಸುವ ಜೊತೆಗೆ ಸಾರಿಗೆ ಮತ್ತು ಬೃಹತ್ ಸರಕು ಸಾಗಾಣಿಕೆ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.  ಇದಲ್ಲದೆ, ಅಭಿವೃದ್ಧಿಪಡಿಸಿದ ಸೌಲಭ್ಯಗಳು ಪಶ್ಚಿಮ ಕರಾವಳಿಯಲ್ಲಿ ಕಡಲ ಕಾರ್ಯಾಚರಣೆಗಳಿಗೆ ಪ್ರಮುಖ ಮುಖ್ಯ ಭೂಮಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಭಾರತದ ಸಾಗರ ವಲಯವನ್ನು ಬಲಪಡಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲ ಅವರಿಗೆ ಅನಂತಕುಮಾರ ಹೆಗಡೆ ಅವರು ಪತ್ರ ಮುಖೇನ ವಿನಂತಿಸಿದ್ದಾರೆ ಎಂದು ಪ್ರಕಟನೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next