Advertisement

ವಿದೇಶದಲ್ಲಿರುವ ಕನ್ನಡಿಗರ ನೆರವಿಗೆ ಸೂಕ್ತ ಕ್ರಮ: ಸಚಿವ ರವಿ

01:25 PM May 24, 2020 | mahesh |

ಚಿಕ್ಕಮಗಳೂರು: ವಿದೇಶದಲ್ಲಿರುವ ಕನ್ನಡಿಗರಿಗೆ ಸೂಕ್ತ ನೆರವು ನೀಡಿ ಹಂತ ಹಂತವಾಗಿ ಸ್ವದೇಶಕ್ಕೆ ಕರೆಸಿಕೊಳ್ಳಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು. ಶನಿವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಅರಬ್‌ ರಾಷ್ಟದಲ್ಲಿ ನೆಲೆಸಿರುವ ದುಬೈ ಕನ್ನಡ ಸಂಘದ 25 ಕನ್ನಡಿಗರೊಂದಿಗೆ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೊಂದಿಗಿನ ವಿಡಿಯೋ ಸಂವಾದದ ಉದ್ದೇಶ ಅವರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಸ್ವದೇಶಕ್ಕೆ ಕರೆತರಲು ಸರ್ಕಾರದಿಂದ ಸೂಕ್ತ ನೆರವು ಸಿಗುವಂತೆ ಮಾಡುವುದಾಗಿದೆ ಎಂದರು.

Advertisement

ದುಬೈನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದು ಬೆಂಗಳೂರು ಹಾಗೂ ಮಂಗಳೂರಿಗೆ ಬರಲು ಅಪೇಕ್ಷೆ ತೋರಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರಾದ ಸದಾನಂದ ಗೌಡ ಅವರೊಂದಿಗೆ ಮಾತುಕತೆ ನಡೆಸಿ ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆ ತರಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು. ವಿದೇಶಿ ಕನ್ನಡಿಗರ ಮಕ್ಕಳನ್ನು ಇಲ್ಲಿನ ಶಾಲೆಗಳಲ್ಲಿ ದಾಖಲಿಸುವ ಬಗ್ಗೆ ಸಹಾಯವಾಣಿಯನ್ನು ಸ್ಥಾಪಿಸಿ ಅಂಕಪಟ್ಟಿ ಅಥವಾ ಶಾಲಾ ದಾಖಲಾತಿ ಆಧಾರದಲ್ಲಿ ಇಲ್ಲಿನ ಶಾಲೆಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ರಜಾ ದಿನಗಳಲ್ಲಿ ಆನ್‌ಲೈನ್‌ ವರ್ಕ್‌ಶಾಪ್‌ ಆಯೋಜಿಸುವಂತೆ ಕೇಳಿಕೊಂಡಿದ್ದು ಇಲ್ಲಿನ ಮಾನವ ಸಂಪನ್ಮೂಲಗಳ ಬಗ್ಗೆ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ವಿದೇಶದಲ್ಲಿರುವ ಕನ್ನಡಿಗರನ್ನು ಕರೆತರುವ ಕುರಿತು ರಾಜ್ಯದಲ್ಲಿ ನೋಡೆಲ್‌ ಅಧಿ ಕಾರಿಗಳನ್ನು ನೇಮಿಸಿದ್ದು ಅವರಿಂದ ಸರಿಯಾದ ಪ್ರತಿಕ್ರಿಯೆ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಭಾರತದ ನೆಲದಲ್ಲಿ ಕಿರುಕುಳ, ಸೇರಿದಂತೆ ಬೇರೆ ಕಾರಣಕ್ಕಾಗಿ ಇಲ್ಲಿಗೆ ಬಂದ ಎಲ್ಲಾ ಜನಾಂಗಕ್ಕೂ ಆಶ್ರಯ ನೀಡಿದೆ. ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರನ್ನು ಕಡೆಗಣಿಸುವ ಪ್ರಶ್ನೆಯಿಲ್ಲ. ಈ ಬಗ್ಗೆ ಸರ್ಕಾರ ಸೂಕ್ತ ನೆರವು ನೀಡಲಿದೆ ಎಂದರು. ಸಂವಾದದಲ್ಲಿ ವಿದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿದ ಅವರು ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next