ಸಿಂದಗಿ: ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಅರಿತು ಹಂತ ಹಂತವಾಗಿ ಪರಿಹರಿಸುವ ಕಾರ್ಯ ಮಾಡುತ್ತಿದ್ದೇನೆ. ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಹೇಳಿದರು.
ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಪುರಸಭೆ ಕಾರ್ಯಾಲಯ ಹಮ್ಮಿಕೊಂಡ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿನ ಸಿಸಿ ರಸ್ತೆ, ಚರಂಡಿ, ಒಳಚರಂಡಿ, ಉದ್ಯಾನವನ ಅಭಿವೃದ್ಧಿ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಾರದ ರೀತಿಯಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಪಟ್ಟಣದ ಪ್ರತಿ ವಾರ್ಡ್ ಅಭಿವೃದ್ಧಿಯಾಗಬೇಕು. ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು ಸರಬರಾಜು ಆಗಬೇಕು. ಒಳಚರಂಡಿ ವ್ಯವಸ್ಥೆಯಾಗಬೇಕು. ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ಗುರಿಯನ್ನಾಗಿಟ್ಟುಕೊಂಡು ಯೋಜನೆ ಮಾಡಲಾಗುತ್ತಿದೆ ಎಂದರು.
2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಪಟ್ಟಣದ ವಾರ್ಡ್ ನಂ. 14ರಲ್ಲಿ 5 ಲಕ್ಷ; ವಾರ್ಡ್ ನಂ.13ರಲ್ಲಿ 9 ಲಕ್ಷ ಮತ್ತು ವಾರ್ಡ್ ನಂ. 10ರಲ್ಲಿ 5.5 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ವಾರ್ಡ್ ನಿವಾಸಿಗಳು ಕಾಮಗಾರಿಗೆ ಸಹಕರಿಸಬೇಕು. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಪಟ್ಟಣದಲ್ಲಿನ ಉದ್ಯಾನವನಗಳ ಅಭಿವೃದ್ಧಿಯಿಂದ ವಾರ್ಡ್‌ಗಳ ಸೌಂದರ್ಯ ಹೆಚ್ಚಾಗುವ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಪಟ್ಟಣದಲ್ಲಿರುವ ಉದ್ಯಾನವನಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಮೃತ ನಿರ್ಮಲ ಯೋಜನೆಯಡಿ ಬಸವೇಶ್ವರ ವೃತ್ತದ ಬಳಿ ಹಾಗೂ ಕಾಗಿ ದವಾಖಾನೆ ಹತ್ತಿರ ಹೈಟೆಕ್ ಶೌಚಾಲಯ, ವಿವೇಕಾನಂದ ವೃತ್ತ ದಿಂದ ಬಸವೇಶ್ವರ ವೃತ್ತ ದವರೆಗೆ ಡಿವೈಡರ್‌ಗಳಿಗೆ ಗ್ರಿಲ್ ಅಳವಡಿಸುವುದು. ಸಸಿ ನೆಡುವುದು, ಘನತ್ಯಾಜ್ಯ ವಸ್ತು ವಿಲೆವಾರಿ ಘಟಕದಲ್ಲಿ ಕಾಂಪೌಂಡ್ ನಿರ್ಮಿಸುವುದು ಮುಂತಾದ ಅಭಿವೃದ್ಧಿ ಜೊತೆಗೆ ನಗರಕ್ಕೆ ಅವಶ್ಯಕವಿರುವ ಯಂತ್ರೋ ಪಕರಣಗಳನ್ನು ಖರೀದಿ ಸಲಾಗುವುದು ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಮುಖ್ಯಾಧಿಕಾರಿ ಪ್ರಕಾಶ ಮದುಗೋಳಕರ, ವಾರ್ಡ್ ಸದಸ್ಯ ಶಾಂತವೀರ ಬಿರಾದಾರ, ಅಭಿಯಂತ ಅಜರುದ್ಧಿನ ನಾಟಿಕಾರ, ಶಿವು ಬಡಿಗೇರ ಇನ್ನಿತರರಿದ್ದರು.