Advertisement

ಪ್ರಣಾಳಿಕೆ ಭರವಸೆ ಹಂತ-ಹಂತವಾಗಿ ಈಡೇರಿಕೆ: ಸಿದ್ದು 

05:23 PM Jun 08, 2018 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕಡಿಮೆ ಸ್ಥಾನ ಪಡೆದ ಬಳಿಕ ನನ್ನನ್ನು ಸೈಡ್‌ಲೈನ್‌ ಮಾಡಲಾಗಿದೆ ಎಂಬ ಟೀಕೆ ತಪ್ಪು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ನಾನೇ ಆಗಿದ್ದೇನೆ. ಅಲ್ಲದೇ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಪಕ್ಷದ ನಾಯಕನೂ ನಾನೇ ಇದ್ದೇನೆ. ಹೀಗಾಗಿ ನಾನು ಹೇಗೆ ಪಕ್ಷದಲ್ಲಿ ನಿರ್ಲಕ್ಷ್ಯಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಪ್ರಶ್ನಿಸಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗುರುವಾರ ಬಾದಾಮಿಗೆ ಆಗಮಿಸಿದ ಅವರು ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಸಚಿವರಾದವರೂ ಆಪ್ತರೇ: ನನ್ನ ಪರಮಾಪ್ತರಿಗೆ ಸಚಿವ ಸ್ಥಾನ ಕೊಡದೇ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಚಿವರಾದವರೂ ನನ್ನ ಪರಮಾಪ್ತರು. ಮೊದಲು ಸಚಿವರಿದ್ದವರೂ ನನ್ನ ಆಪ್ತರು. ಸಚಿವ ಸಂಪುಟ ರಚನೆ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸದ್ಯ 27 ಜನರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಇನ್ನೂ 6 ಸ್ಥಾನ ಖಾಲಿ ಇವೆ. ಸೂಕ್ತರಿಗೆ ಸ್ಥಾನಮಾನ ದೊರೆಯಲಿದೆ ಎಂದರು. ಜಿಲ್ಲಾವಾರು ಪ್ರಾತಿನಿಧ್ಯ ವಿಷಯದಲ್ಲಿ ಹಲವು ಜಿಲ್ಲೆ ಕಡೆಣಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟದಲ್ಲಿ ಕಾಂಗ್ರೆಸ್‌ ಪಕ್ಷದ 6 ಹಾಗೂ ಜೆಡಿಎಸ್‌ನ 1 ಸ್ಥಾನ ಕಾಯ್ದಿರಿಸಲಾಗಿದೆ. ಇನ್ನೊಮ್ಮೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಆಗ ಇನ್ನುಳಿದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುವುದು.

ಎರಡೂ ಪಕ್ಷಗಳ ಭರವಸೆ ಈಡೇರಿಕೆ: ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದಿಂದ ನಾವು ಪ್ರಣಾಳಿಕೆ ನೀಡಿದ್ದೆವು. ಜೆಡಿಎಸ್‌ ಕೂಡ ಹಲವು ಭರವಸೆ ನೀಡಿತ್ತು. ಕೋಮುವಾದ ಸರ್ಕಾರ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ನಾವಿಬ್ಬರೂ ಕೂಡಿ ಸರ್ಕಾರ ರಚಿಸಿದ್ದೇವೆ. ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲಿದ್ದೇವೆ. ರಾಜ್ಯದಲ್ಲಿ ಐದು ವರ್ಷ ಹಲವು
ಅತ್ಯುತ್ತಮ ಯೋಜನೆಯನ್ನು ಕೊಟ್ಟಿದ್ದೇವೆ. ಅವು ಇನ್ನು ಮುಂದೆಯೂ ಮುಂದುವರಿಯುತ್ತವೆ ಎಂದರು.

ಅಪ್ಪ- ಮಕ್ಕಳ ಪಕ್ಷದಿಂದ ಕಾಂಗ್ರೆಸ್‌ನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ 133 ವರ್ಷಗಳ ಇತಿಹಾಸವಿದೆ. ಬಿಜೆಪಿ ದೂರ ಇಡುವ ಒಂದೇ ಉದ್ದೇಶದಿಂದ ಜೆಡಿಎಸ್‌ ಜತೆಗೆ ಸರ್ಕಾರ ಮಾಡಿದ್ದೇವೆ. ಸುದೀರ್ಘ‌ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಯಾರು-ಏನೂ ಮಾಡಲಾಗುವುದಿಲ್ಲ ಎಂಹೇಳಿದರು. ಬಾಗಲಕೋಟೆ ಜಿಲ್ಲೆಯಿಂದ ಸದ್ಯ ನಾನೋಬ್ಬನೇ ಶಾಸಕನಿದ್ದೇನೆ. ಜಮಖಂಡಿ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅವರನ್ನು ಕಳೆದುಕೊಂಡಿದ್ದೇವೆ. ಈ ನೋವು ನಮಗೆ ಮಾಸಿಲ್ಲ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದು ಸಚಿವನಾಗಲು ಬರಲ್ಲ. ಶೀಘ್ರವೇ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗಲಿದೆ ಎಂದು ಹೇಳಿದರು.

ಮುಸ್ಲಿಂರು ದೇಶದ ಪ್ರಜೆಗಳಲ್ವಾ
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ಪರೋಕ್ಷವಾಗಿ ಟಾಂಗ್‌ ನೀಡಿದ ಅವರು, ಮುಸ್ಲಿಂರು ದೇಶದ ಪ್ರಜೆಗಳು ಅಲ್ವಾ? ಅವರ ಬಗ್ಗೆ ಅಷ್ಟೊಂದು ದ್ವೇಷ ಸಾಧಿಸುವುದು ರಾಜಕಾರಣವೇ? ಪಕ್ಷಪಾತ, ಜಾತಿ-ಭೇದ ಇಲ್ಲದೇ ಕೆಲಸ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಮುಸ್ಲಿಂರ ಬಗ್ಗೆ ಈ ರೀತಿ ಹೇಳುವುದು ಎಷ್ಟು ಸರಿ. ಬಿಜೆಪಿಯ ಯತ್ನಾಳ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಂತೆ ಕೀಳು ಮಟ್ಟದ ರಾಜಕೀಯ ನಾನು ಮಾಡಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next