ಬೆಂಗಳೂರು: ಭಾರತದಲ್ಲಿನ ರಕ್ತದ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಿರುವ ‘ಬ್ಲಿಡ್ ಸ್ಟೆಮ್ ಸೆಲ್’ (ರಕ್ತಕಾಂಡ ಕೋಶ) ದಾನಿಗಳ ನೋಂದಣಿ ಹೆಚ್ಚಿಸುವ ಹಾಗೂ ದಾನಿಗಳ ಸಂಪರ್ಕ ಸೇವೆ ಒದಗಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಬ್ಲಿಡ್ ಸ್ಟೆಮ್ ಸೆಲ್ ದಾನಿಗಳ ಕೇಂದ್ರ ಡಿಕೆಎಂಎಸ್ ಸಂಸ್ಥೆಯು ಬೆಂಗಳೂರು ಮೆಡಿಕಲ್ ಸರ್ವೀಸ್ ಟ್ರಸ್ಟ್ ಜೊತೆ ಕೈಜೋಡಿಸಿದೆ.
ಈ ಹಿನ್ನೆಲೆಯಲ್ಲಿ ಜೂನ್ 15ರಂದು ನಗರದ ಓರಿಯನ್ ಮಾಲ್ನಲ್ಲಿ ರಕ್ತದ ಕ್ಯಾನ್ಸರ್ ಜಾಗೃತಿ, ಸ್ಟೆಮ್ ಸೆಲ್ ಕಸಿ, ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ದಾನಿಗಳ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ. ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 8 ಗಂಟೆ ಈ ಅಭಿಯಾನ ನಡೆಯಲಿದ್ದು, 18 ರಿಂದ 55 ವರ್ಷದೊಳಗಿನ ಆಸಕ್ತ ದಾನಿಗಳು ನೋಂದಣಿ ಮಾಡಿಸಬಹುದು.
ಈ ಕುರಿತು ಮಾತನಾಡಿದ ರಕ್ತರೋಗ ತಜ್ಞ ಡಾ.ಬಿಜು ಜಾರ್ಜ್, ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೆ ಒಬ್ಬರಲ್ಲಿ ರಕ್ತದ ಕ್ಯಾನ್ಸರ್, ರಕ್ತ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ಪೈಕಿ ಲೂಕೇಮಿಯಾ ಅಗ್ರಸ್ಥಾನದಲ್ಲಿದೆ. ರಕ್ತದ ಕ್ಯಾನ್ಸರ್ ರೋಗಿಗಳಲ್ಲಿ ರಕ್ತ ಕೋಶಗಳು ದಿನದಿಂದ ದಿನಕ್ಕೆ ನಾಶವಾಗುತ್ತಾ ಹೋಗುತ್ತವೆ. ಇಂತಹ ರೋಗಿಗಳಿಗೆ ಆರೋಗ್ಯಕರ ವ್ಯಕ್ತಿಯ ರಕ್ತದ ಸ್ಟೆಮ್‌ಸೆಲ್ಗಳ ಕಸಿ ಮಾಡುವ ಮೂಲಕ ಆರೋಗ್ಯವಂತ ರಕ್ತ ಕೋಶಗಳ ಉತ್ಪತ್ತಿ ಮಾಡಿ ಜೀವ ಉಳಿಸಬಹುದಾಗಿದೆ. ಹೀಗಾಗಿ, ರೋಗಿಗಳನ್ನು ಬದುಕುಳಿಯಲು ಬ್ಲಿಡ್ ಸ್ಟೆಮ್‌ಸೆಲ್ ದಾನಿಗಳು, ನೋಂದಣಿ ಹಾಗೂ ಸಂಪರ್ಕ ಅತ್ಯಾವಶಕವಾಗಿದೆ ಎಂದರು.
ಬಿಎಂಎಸ್‌ಟಿ ಟ್ರಸ್ಟ್‌ನ ನಿರ್ದೇಶಕಿ ಡಾ.ಲತಾ ಜಗನ್ನಾಥನ್ ಮಾತನಾಡಿ, ಸದ್ಯ ಡಿಕೆಎಂಎಸ್- ಬಿಎಂಎಸ್‌ಟಿನಲ್ಲಿ ಸಹಯೋಗದಲ್ಲಿ 27,000ಕ್ಕೂ ಹೆಚ್ಚಿನ ಸ್ಟೆಮ್‌ಸೆಲ್ ದಾನಿಗಳು ನೋಂದಣಿಯಾಗಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ರಕ್ತ ಸಂಬಂಧಿ ರೋಗ ಗಮನಾರ್ಹವಾಗಿ ಹೆಚ್ಚಲಿದೆ. ಆದರೆ, ಜನರಲ್ಲಿರುವ ಅರಿವಿನ ಕೊರತೆ ಮತ್ತು ತಪ್ಪು ಕಲ್ಪನೆಗಳಿಂದ ದಾನಿಗಳ ಕೊರತೆ ಇದೆ. ಭಾರತದಲ್ಲಿ ಒಟ್ಟಾರೆ ಜನಸಂಖ್ಯೆಯ ಶೇ.0.03 ಜನರು ಮಾತ್ರ ದಾನಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಯುಎಎಸ್‌ನಲ್ಲಿ ಈ ಸಂಖ್ಯೆ ಶೇ.2.7ರಷ್ಟು ಮತ್ತು ಜರ್ಮನಿಯಲ್ಲಿ ಶೇ.10ರಷ್ಟು ಇದೆ ಎಂದರು.
ದೃಢ ಮನಸ್ಸಿನ ದಾನಿಗಳ ನೋಂದಣಿ ಹೆಚ್ಚಾಗಬೇಕು: ಬ್ಲಿಡ್ ಸ್ಟೆಮ್‌ಸೆಲ್ ಕಸಿ ಒಳಗಾದ ಬೆಂಗಳೂರು ಮೂಲದ 12 ವರ್ಷದ ಬಾಲಕ ಚಿರಾಗ್, ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಚಿರಾಗ್ ಪೋಷಕರು, ‘ಹುಟ್ಟಿದ ವರ್ಷದೊಳಗೆ ಚಿರಾಗ್ ಬೀಟಾ-ಥಲಸ್ಸೀಮಿಯಾ ರೋಗಕ್ಕೆ ತುತ್ತಾದ. ಅವನ ರಕ್ತಕೋಶಗಳಿಗೆ ಸರಿ ಹೊಂದವ ದಾನಿ ಸಿಗದೇ ಹತ್ತು ವರ್ಷಗಳ ಕಾಲ ಕಸಿಗಾಗಿ ಕಾಯಲಾಗಿತ್ತು. ಆ ಹತ್ತು ವರ್ಷಗಳು ಸಾಕಷ್ಟು ನೋವು ಅನುಭವಿಸಿದ್ದೇವೆ. ಆನಂತರ ಡಿಕೆಎಂಎಸ್ ಸಂಸ್ಥೆ ಸಹಾಯದಿಂದ ಎರಡು ವರ್ಷಗಳ ಹಿಂದೆ ಆತನ ಬ್ಲಿಡ್ ಸ್ಟೆಮ್‌ಸೆಲ್ ಕಸಿ ಮಾಡಿಸಲಾಯಿತು. ಇಂದು ಚಿರಾಗ್ ಆರೋಗ್ಯವಾಗಿದ್ದಾನೆ. ರಕ್ತ ಸಂಬಂಧಿ ರೋಗಿಗಳು ಸಾಕಷ್ಟು ಮಂದಿ ಇದ್ದು, ಅಂತೆಯೇ ಸ್ವಯಂ ಪ್ರೇರಿತ, ದೃಢ ಮನಸ್ಸಿನ ಸ್ಟೆಮ್‌ಸೆಲ್ ದಾನಿಗಳ ನೋಂದಣಿ ಹೆಚ್ಚಾಗಬೇಕೆಂದರು.