ಬೆಂಗಳೂರು: ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಭಾನುವಾರ ಚಾಲನೆ ಸಿಕ್ಕಿದ್ದು, ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಲು ಯೋಜನಾ ಸ್ಥಳದಲ್ಲಿ ಬಿಬಿಎಂಪಿಯು ಮಣ್ಣಿನ ಪರೀಕ್ಷೆ ಆರಂಭಿಸಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಯೋಜನೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ನಡೆಸಿತ್ತು. “ಎಂ.ವೆಂಕಟರಾವ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ’ಗೆ ಟೆಂಡರ್ ನೀಡಲಾಗಿದೆ. ಮೊದಲ ಹಂತವಾಗಿ ಕಾಮಗಾರಿ ನಡೆಯಬೇಕಾದ ಸ್ಥಳದಲ್ಲಿ ಬಿಬಿಎಂಪಿ ಮಣ್ಣಿನ ಪರೀಕ್ಷೆ ನಡೆಸುತ್ತಿದೆ. ಮಣ್ಣಿನ ಪರೀಕ್ಷೆ ವರದಿ ಸಹಿತ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೋಜನೆಗಾಗಿ 1,500.36 ಚದರ ಮೀಟರ್ ಜಾಗ ಗುರುತಿಸಲಾಗಿದ್ದು, ನಾಲ್ಕು ಪಥದ ಮೇಲ್ಸೇತುವೆಯು ಒಟ್ಟು 310 ಮೀಟರ್ ಉದ್ದ ಹಾಗೂ 16 ಮೀಟರ್ ಅಗಲ ಇರಲಿದೆ. ರೇಸ್‌ಕೋರ್ಸ್ ರಸ್ತೆಯಿಂದ ಹರೆಕೃಷ್ಣ ರಸ್ತೆ ಹಾಗೂ ಶೇಷಾದ್ರಿಪುರ ರೈಲ್ವೇ ಅಂಡರ್‌ಪಾಸ್ ಅನ್ನು ಉಕ್ಕಿನ ಸೇತುವೆ ಸಂಪರ್ಕಿಸಲಿದೆ. ಯೋಜನಾ ವೆಚ್ಚ 19.85 ಕೋಟಿ ಆದರೂ ಭೂಸ್ವಾಧೀನ ಪ್ರಕ್ರಿಯೆ, ಯುಟಿಲಿಟಿ ಸ್ಥಳಾಂತರ ಸೇರಿ ವಿವಿಧ ವೆಚ್ಚ ಸೇರಿದಂತೆ 50 ಕೋಟಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನಾಗರಿಕ ಸಂಘಟನೆಗಳಿಂದ ಆಕ್ಷೇಪ: ಈ ನಡುವೆಯೇ ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಿರುವ ರಸ್ತೆಯಲ್ಲಿ 26 ಮರಗಳನ್ನು ಕತ್ತರಿಸಬೇಕಾಗಿದೆ. ಆದರೆ, ಸಾರ್ವಜನಿಕರಿಂದ ಆಕ್ಷೇಪಣೆ ಅರ್ಜಿಗಳನ್ನು ಪಾಲಿಕೆಯ ಅಧಿಕಾರಿಗಳು ಆಹ್ವಾನಿಸಿಲ್ಲ ಎಂದು ಕೆಲ ನಾಗರಿಕ ಸಂಘಟನೆಗಳು ಆರೋಪಿಸಿವೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಇರುವ ಕುಮಾರಕೃಪಾ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಹೀಗಾಗಿ ಮೇಲ್ಸೇತುವೆ ಹಾಗೂ ಗ್ರೇಡ್ ಸಪರೇಟರ್ ನಿರ್ಮಾಣ ಅನಿವಾರ್ಯ. 2011-12ರಲ್ಲೇ ಸಾಧ್ಯತಾ ವರದಿ ಸಿದ್ದಪಡಿಸುವಾಗಲೇ ಯೋಜನಾ ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿತ್ತು. ಆದರೆ, ಟೆಂಡರ್ ಅಂತಿಮಗೊಂಡು ಕಾರ್ಯಾದೇಶ ನೀಡುವ ಮೊದಲು ಮತ್ತೂಮ್ಮೆ ಮಣ್ಣಿನ ಪರೀಕ್ಷೆ ಮಾಡಬೇಲಾಗುತ್ತಿದೆ.
-ಜಿ.ಪದ್ಮಾವತಿ, ಮೇಯರ್