Advertisement

ಇವರ ಸಾಧನೆಗೆ ಕೊರತೆಗಳೇ ಮೆಟ್ಟಿಲು; ಸ್ಫೂರ್ತಿ ಬದುಕು ಗೆಲ್ಲಲು!

10:27 AM May 01, 2018 | |

ಅಣ್ಣ ತಂಗಿಯ ರ್‍ಯಾಂಕ್‌ ಮೀರಿದ ಸಾಧನೆ
ಕಾರ್ಕಳ: ಬಾಲ್ಯದಿಂದಲೇ ದೈಹಿಕ ಅಸಾಮರ್ಥ್ಯ ಬೆನ್ನುಬಿದ್ದರೂ, ಸಾಧನೆಯ ಬೆನ್ನುಬಿಡದೇ ಯಶಸ್ಸು ಗಿಟ್ಟಿಸಿದವರು ಕಾರ್ಕಳದ ಬೋರ್ಗಲ್‌ಗ‌ುಡ್ಡೆಯ ಅಣ್ಣ ತಂಗಿ, ಪ್ರಜ್ವಲ್‌-ಪ್ರತೀಕ್ಷಾ. ಸೊಂಟದ ಕೆಳಭಾಗ ಶಕ್ತಿ ಇಲ್ಲದೇ ಇದ್ದರೂ, ಪಿಯುಸಿ ಪರೀಕ್ಷೆಯಲ್ಲಿ ಪ್ರಜ್ವಲ್‌ ಶೇ.51 ಮತ್ತು ಪ್ರತೀಕ್ಷಾ ಶೇ.49 ಅಂಕ ಗಳಿಸಿ ರ್‍ಯಾಂಕ್‌ ಗಳಿಕೆಗೂ ಮಿಗಿಲಾದ ಸಾಧನೆ ಮಾಡಿದ್ದಾರೆ. 

Advertisement

ಉಜ್ವಲ ಸಾಧನೆ  
ಶೇಖರ್‌ ಸಾಲಿಯಾನ್‌ ಹಾಗೂ ಜ್ಯೋತಿ ಸಾಲಿಯಾನ್‌ ದಂಪತಿಯ ಮಕ್ಕಳಾದ ಪ್ರಜ್ವಲ್‌ ಹಾಗೂ ಪ್ರತೀಕ್ಷಾ ಹುಟ್ಟಿದ ಒಂದೂವರೆ ವರ್ಷದಲ್ಲೇ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡಿದ್ದರು. ಬಳಿಕ ಇವರು ತೆವಳಿಯೇ ಚಲಿಸುತ್ತಿದ್ದರು. ಆರಂಭದಲ್ಲಿ ಇವರನ್ನು ವಿಶೇಷ ಶಾಲೆಗೆ ಸೇರಿಸಲಾಗಿತ್ತು. ಅನಂತರ ಮನೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿತ್ತು. ದೈಹಿಕ ಅಸಾಮರ್ಥ್ಯ ಇದ್ದರೂ, ಕಲಿಕೆಯ ತುಡಿತ ಅಣ್ಣ ತಂಗಿಯಲ್ಲಿ ಒಂಚೂರೂ ಕಡಿಮೆಯಾಗಿರಲಿಲ್ಲ. ಸಾಧನೆಯ ನಿರಂತರ ಆಕಾಂಕ್ಷೆ ಅವರನ್ನು ಪಿಯುಸಿ ಯಶಸ್ಸಿನವರೆಗೆ ತಂದು ನಿಲ್ಲಿಸಿತ್ತು. 

ಅತ್ಯುತ್ತಮ ಗ್ರಹಣ ಶಕ್ತಿ 
ಪ್ರಜ್ವಲ್‌, ಪ್ರತೀಕ್ಷಾ ಅಂಗವಿಕಲರಾಗಿದ್ದರೂ, ಪಠ್ಯಕ್ಕೆ ಸಂಬಂಧಿಸಿ ಪ್ರತಿಯೊಂದನ್ನೂ ಆಲಿಸಿ ಗ್ರಹಿಸುವ ಶಕ್ತಿ ಇವರಿಗಿದೆ. ಪ್ರಥಮ ಪಿಯುಸಿಯಲ್ಲಿ ಅಣ್ಣ – ತಂಗಿ ಸ್ವತಃ ಪರೀಕ್ಷೆ ಬರೆದಿದ್ದರು. ದ್ವಿತೀಯ ಪಿಯುಸಿಯಲ್ಲಿ ಸರಕಾರಿ ನಿಯಮದಂತೆ ಸಹಾಯಕರನ್ನಿಟ್ಟು ಪರೀಕ್ಷೆ ಬರೆಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಇವರ ಶಿಕ್ಷಕರೇ ಪರೀಕ್ಷೆ ಬರೆದಿದ್ದರು, ಆದರೆ ಅವರು ತಮ್ಮ ಸ್ವಂತ ಉತ್ತರ ಬರೆಯದಂತೆ ದಿನಕ್ಕೊಬ್ಬರು ಸ್ಕ್ವಾಡ್‌ ಪ್ರತಿನಿಧಿ ಇರುತ್ತಿದ್ದರು. ಆಗ ಆರಂಭದಲ್ಲಿ ಶಿಕ್ಷಕರಿಗೆ ಅವಕಾಶ ನೀಡದೆ ತೊಂದರೆಯಾಗಿತ್ತು; ಅನಂತರ ಇಲಾಖೆ ಅವಕಾಶ ನೀಡಿತ್ತು.

ಶಿಕ್ಷಕರಾದ ಗಣೇಶ್‌ ಹಾಗೂ ರಜನಿ ಮನೆಗೆ ತೆರಳಿ ಪಾಠ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿಗೂ ಮನೆಯಲ್ಲೇ ಪಾಠ ಹೇಳಲಾಗಿತ್ತು. ದ್ವಿತೀಯ ಪಿಯುಸಿಯ ತಲಾ ಮೂರು ವಿಷಯಗಳನ್ನು ರಜನಿ ಹಾಗೂ ಗಣೇಶ್‌ ಬೋಧಿಸಿದ್ದಾರೆ. ಸಂಜೆಯ ವೇಳೆಗೆ ಅವರಿಗೆ ತರಗತಿ ನಡೆಸಲಾಗಿತ್ತು.   

ತಂದೆ-ತಾಯಿಯ ಅವಲಂಬನೆ
ಈಗ ಪ್ರಜ್ವಲ್‌ಗೆ 22 ಮತ್ತು ಪ್ರತೀಕ್ಷಾಗೆ 19 ವರ್ಷ. ಮಾನಸಿಕವಾಗಿ ಸದೃಢವಾಗಿದ್ದಾರೆ. ಆದರೆ ನಿತ್ಯವೂ ಇವರು ಪ್ರತಿಯೊಂದಕ್ಕೂ ಹೆತ್ತವರನ್ನು ಅವಲಂಬಿಸಬೇಕಾಗುತ್ತದೆ. ಅವರನ್ನು ಎತ್ತಿಕೊಂಡೇ ಹೋಗಬೇಕು. ಇಬ್ಬರಿಗೂ ಕೃತಕ ನಡೆಯುವ ವ್ಯವಸ್ಥೆ ಮಾಡಬೇಕೆನ್ನುವ ಆಸೆ ಹೆತ್ತವರಿಗಿದೆ. ಆದರೆ ಆರ್ಥಿಕವಾಗಿಯೂ ಹಿಂದಿರುವ ಕುಟುಂಬ ಇವರದ್ದಾಗಿದೆ.   

Advertisement

ಕಳೆದ 5 ವರ್ಷಗಳಿಂದ ನಾನು ಇವರಿಗೆ ಶಿಕ್ಷಣ ನೀಡುತ್ತಿದ್ದೇನೆ. ಕಲಿಕೆಗೆ ದೈಹಿಕ ನ್ಯೂನತೆ ಅಡ್ಡಿಯಲ್ಲ, ಮನಸ್ಸಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆಸಕ್ತಿಯಿದ್ದು ಕಲಿತಿದ್ದಾರೆ. ಹೀಗಾಗಿ ಉತ್ತಮ ಫ‌ಲಿತಾಂಶ ಬಂದಿದೆ. ಅವರು ಉತ್ತಮ ಭವಿಷ್ಯ ಪಡೆಯಲಿದ್ದಾರೆ.
ಗಣೇಶ್‌, ಶಿಕ್ಷಕ

ಮಕ್ಕಳ ಪಿಯುಸಿ ಫ‌ಲಿತಾಂಶ ನೋಡಿ ಸಂತೋಷವಾಗಿದೆ. ಮುಂದಿನ ಶಿಕ್ಷಣ ನೀಡಬೇಕು ಎನ್ನುವ ಆಕಾಂಕ್ಷೆಯಿದೆ. ಮಕ್ಕಳಿಗೂ ಆಸೆ ಇದೆ. ಆದರೆ ಆರ್ಥಿಕವಾಗಿ ನಾವು ಸದೃಢರಲ್ಲ.
ಶೇಖರ್‌ ಸಾಲಿಯಾನ್‌, ತಂದೆ.

ನಮಗೆ ಪರೀಕ್ಷೆಯಲ್ಲಿ ಪಾಸಾಗುವ ಧೈರ್ಯವಿತ್ತು. ಫ‌ಲಿತಾಂಶ ನೋಡಿ ನಾವು ಮತ್ತಷ್ಟು ಖುಷಿ ಪಟ್ಟಿದ್ದೇವೆ. ಮುಂದೆ ಕಲಿಯಬೇಕು ಎನ್ನುವ ಆಸೆಯಿದೆ. ಕಂಪ್ಯೂಟರ್‌ ಕೂಡ ಕಲಿಯಬೇಕು. ಆದರೆ ನಾವು ಹೆತ್ತವರ ಮೇಲೆ ಅವಲಂಬಿತರಾಗಿದ್ದೇವೆ. ಅವರು ಹೇಳಿದಂತೆ ನಡೆಯುತ್ತೇವೆ.  
ಪ್ರಜ್ವಲ್‌, ಪ್ರತೀಕ್ಷ

ಚಾಲಕನ ಪುತ್ರಿ ರಾಜ್ಯಕ್ಕೇ 4ನೇ ಸ್ಥಾನಿ 
ಕುಂದಾಪುರದ ಸತ್ಯಶ್ರೀಯ ಅಪೂರ್ವ ಸಾಧನೆ


ಕುಂದಾಪುರ: ಭೌತಶಾಸ್ತ್ರದಲ್ಲಿ 100, ರಸಾಯನ ಶಾಸ್ತ್ರದಲ್ಲಿ 100, ಗಣಿತದಲ್ಲಿ 100, ಕಂಪ್ಯೂಟರ್‌ ಸೈನ್ಸ್‌ನಲ್ಲಿ 100, ಸಂಸ್ಕೃತದಲ್ಲಿ 100, ಇಂಗ್ಲಿಷ್‌ನಲ್ಲಿ 93! 

ಮೂಗಿನ ಮೇಲೆ ಬೆರಳಿಡುವ ರೀತಿ ಇಂತಹ ಸಾಧನೆ ಮಾಡಿದ್ದು ಕುಂದಾಪುರದ ಸತ್ಯಶ್ರೀ.  ಒಟ್ಟು 593 ಅಂಗಳನ್ನು ಪಡೆದು ರಾಜ್ಯಕ್ಕೇ ನಾಲ್ಕನೇ ಸ್ಥಾನ ತಂದಿರುವ ಸತ್ಯಶ್ರೀ ಅವರ ತಂದೆ, ತಮ್ಮ ಮಗಳೇ ಕಲಿತಿದ್ದ ವೆಂಕಟರಮಣ ಶಾಲೆಯ ಮಕ್ಕಳ ಶಾಲಾ ವಾಹನದ ಚಾಲಕರು! ಮಗಳ ಸಾಧನೆ ಬಗ್ಗೆ ಅಂಕದಕಟ್ಟೆ ನಿವಾಸಿ ನಾಗೇಶ್‌ ರಾವ್‌ ಮತ್ತು ಲಲಿತಾ ದಂಪತಿಗೆ ಅಪಾರ ಹೆಮ್ಮೆ ಇದೆ. ಸತ್ಯಶ್ರೀ ಅವರು ಕುಂದಾಪುರದ  ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ರ್‍ಯಾಂಕ್‌ ವಿಜೇತೆಗೆ ಇದೀಗ ಎಲ್ಲೆಡೆಯಿಂದ ವಿದ್ಯಾರ್ಥಿನಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.  

ಕನಸಲ್ಲೂ ಎಣಿಸಿರಲಿಲ್ಲ
ರಾಜ್ಯದಲ್ಲೇ 4ನೇ ಸ್ಥಾನಿಯಾಗುತ್ತೇನೆಂದು ಕನಸಲ್ಲೂ ಎನಿಸಿರಲಿಲ್ಲ. ನನ್ನ ಈ ಸಾಧನೆಯಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ‘ಉದಯವಾಣಿ’ ಸಂಭ್ರಮ ಹಂಚಿಕೊಂಡರು ಸತ್ಯಶ್ರೀ. ಎರಡು ವರ್ಷದ ಹಿಂದೆ ಅವರು ಎಸ್ಸೆಸ್ಸೆಲ್ಸಿಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಇದೇ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಅವರು, 625 ರಲ್ಲಿ 613 ಅಂಕಗಳನ್ನು ಪಡೆದಿದ್ದರು. ಅವರ ಅಕ್ಕ ಶೈಲಶ್ರೀ ದ್ವಿತೀಯ ಪದವಿ ಓದುತ್ತಿದ್ದಾರೆ. ತಂದೆ ಹಾಗೂ ತಾಯಿ ನನಗೆ ತುಂಬಾನೇ ಪ್ರೋತ್ಸಾಹ ನೀಡುತ್ತಿದ್ದರು. ಯಾವತ್ತೂ ಒತ್ತಡ ಹಾಕುತ್ತಿರಲಿಲ್ಲ. ಅಕ್ಕನೂ ಅಷ್ಟೇ. ಹೆಚ್ಚು ಯೋಚನೆ ಮಾಡುತ್ತಿರಲಿಲ್ಲ. ಹೆಚ್ಚು ನಿದ್ದೆ ಬಿಟ್ಟು ಓದುತ್ತಿರಲಿಲ್ಲ. ಕಾಲೇಜಿನಿಂದಲೂ ಪ್ರಾಂಶುಪಾಲರು, ಪ್ರಾಧ್ಯಾಪಕರು ತುಂಬಾನೇ ಸಹಕಾರ ನೀಡಿದ್ದಾರೆ. ನೃತ್ಯದಲ್ಲಿ ಆಸಕ್ತಿಯಿದೆ. ತ್ರೋಬಾಲ್‌ ಆಟಗಾರ್ತಿಯಾಗಿದ್ದೆ. ಆದರೆ ಪಿಯುಸಿಗೆ ಬಂದ ನಂತರ ಆಡುವುದನ್ನು ಬಿಟ್ಟು, ವ್ಯಾಸಂಗದತ್ತ ಹೆಚ್ಚಿನ ಒತ್ತು ಕೊಟ್ಟಿದ್ದೇನೆ ಎನ್ನುತ್ತಾರೆ.   
ಇಂಜಿನಿಯರ್‌ ಆಗುವಾಸೆ
590 ಅಂಕಗಳು ಬರುವ ನಿರೀಕ್ಷೆಯಿತ್ತು. ಅದಕ್ಕಿಂತ ಹೆಚ್ಚಿನ ಅಂಕಗಳೇ ಬಂದಿದೆ. ಕಾಲೇಜಿನಲ್ಲಿ ಕಲಿಸಿದ ಪಾಠವನ್ನೇ ಓದುತ್ತಿದ್ದೆ. ಟಿವಿಯನ್ನು ನೋಡುತ್ತಿದ್ದೆ. ಯಾವುದೇ ಒತ್ತಡದಿಂದ ಓದುತ್ತಿರಲಿಲ್ಲ. ಮುಂದಕ್ಕೆ ಇಂಜಿನಿಯರಿಂಗ್‌ ಪದವಿ ಮಾಡುವಾಸೆಯಿದೆ 
ಸತ್ಯಶ್ರೀ, ಸಾಧಕ ವಿದ್ಯಾರ್ಥಿನಿ

ಹೆಮ್ಮೆಯಾಗುತ್ತಿದೆ
ಬಹಳ ಖುಷಿಯಾಗುತ್ತಿದೆ. ನಾನು ಅವಳ ತಂದೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಅವಳ ಎಲ್ಲ ಯಶಸ್ಸಿನ ಎಲ್ಲ ಶ್ರೇಯಸ್ಸು ಕಾಲೇಜಿಗೆ ಸಲ್ಲಬೇಕು. ಓದಲು ನಾವು ಯಾವುದೇ ಒತ್ತಡ ಹಾಕುತ್ತಿರಲಿಲ್ಲ. ಅವಳ ಸ್ವಇಚ್ಛೆಯಿಂದಲೇ ಓದುತ್ತಿದ್ದಳು.
ನಾಗೇಶ್‌ ರಾವ್‌, ಸತ್ಯಶ್ರೀ ತಂದೆ 

ಟ್ಯೂಶನ್‌ಗೆ ಹೋಗಿಲ್ಲ
ಕಾಲೇಜಿನಲ್ಲಿಯೇ ಉತ್ತಮವಾಗಿ ಕಲಿಸುತ್ತಿದ್ದುದರಿಂದ ಟ್ಯೂಶನ್‌ ಅಗತ್ಯ ಕಂಡು ಬಂದಿಲ್ಲ. ಪ್ರಥಮ ಪಿಯುಸಿ ಮುಗಿದ ರಜೆಯಲ್ಲಿ ದ್ವಿತೀಯ ಪಿಯು ಮಕ್ಕಳಿಗೆ ಬೇಸಿಗೆ ತರಗತಿ ಮಾಡಿದ್ದು ತುಂಬಾನೇ ಪ್ರಯೋಜನಕ್ಕೆ ಬಂತು. ರಜೆ ದಿನ ಸ್ವಲ್ಪ ಓದುತ್ತಿದ್ದೆ. ಪರೀಕ್ಷೆಗೆ ಮುಂಚಿನ ಕೆಲ ದಿನ ನಿತ್ಯ 7 ಗಂಟೆ ಓದುತ್ತಿದ್ದೆ ಎನ್ನುವುದು ಸತ್ಯಶ್ರೀ ಅವರ ಮಾತು.  

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ  ದ್ವಿತೀಯ ಸ್ಥಾನಿಯಾದ ಅಂಕಿತಾ 
ಸುರತ್ಕಲ್‌ ಗೋವಿಂದದಾಸ ಪ.ಪೂ. ವಿದ್ಯಾರ್ಥಿನಿ


ಸುರತ್ಕಲ್‌: ವಿಜ್ಞಾನ ವಿಭಾಗದಲ್ಲಿ 595 ಅಂಕ ಪಡೆದು ರಾಜ್ಯದಲ್ಲೇ 2ನೇ ಸ್ಥಾನಿಯಾದವರು ಸುರತ್ಕಲ್‌ ಗೋವಿಂದದಾಸ ಪ. ಪೂ. ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಪಿ. ಇವರು ಸುರತ್ಕಲ್‌ ಹಳೆಯ ಅಂಚೆ ಕಚೇರಿ ರಸ್ತೆ ನಿವಾಸಿ, ಎಂಆರ್‌ಪಿಎಲ್‌ನಲ್ಲಿ ಮಹಾ ಪ್ರಬಂಧಕರಾಗಿರುವ ಪ್ರಸಾದ್‌ ಹಾಗೂ ಭಾರತೀ ಅವರ ಪುತ್ರಿ.

“10ರೊಳಗೆ ರ್‍ಯಾಂಕ್‌ ನಿರೀಕ್ಷೆಯಿತ್ತು’
“ಉದಯವಾಣಿ’ಯೊಂದಿಗೆ ಮಾತ ನಾಡಿದ ಅಂಕಿತಾ, ತಂದೆ ತಾಯಿ, ಕಾಲೇಜಿನ ಶಿಕ್ಷಕ ವೃಂದ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಶಿಕ್ಷಕರು ಪರೀಕ್ಷೆಯ ಮುನ್ನಾ ದಿನದ ವರೆಗೆ ಯಾವುದೇ ಸಂದೇಹವಿದ್ದರೂ ದೂರವಾಣಿ ಮೂಲಕ ಕೇಳಿಕೊಂಡಾಗ ಸಹಕಾರ ನೀಡಿದ್ದಾರೆ. ರ್‍ಯಾಂಕ್‌ ಪಡೆಯುವ ಛಲದೊಂದಿಗೆ ಓದಿಕೊಂಡಿದ್ದೆ. ಬೆಳಗ್ಗೆ 5ರಿಂದ 7ರ ವರೆಗೆ ಓದು, ಪ್ರಾರ್ಥನೆ ಬಳಿಕ ಕಾಲೇಜು ತರಗತಿಗಳಲ್ಲಿ ಭಾಗವಹಿಸಿ ರಾತ್ರಿ ಮತ್ತೆ ಓದಿನ ಕಡೆ ಗಮನ ನೀಡುತ್ತಿದ್ದೆ. ಸ್ನೇಹಿತರ ಜತೆ ಪಠ್ಯ ಕ್ರಮದ ಬಗ್ಗೆ ಚರ್ಚಿಸುತ್ತಿದ್ದೆ. 2ನೇ ರ್‍ಯಾಂಕ್‌ ಬಂದಿರುವುದು ಅತೀವ ಸಂತಸ ತಂದಿದೆ. ಮುಂದೆ ಕಂಪ್ಯೂಟರ್‌ ಸೈನ್ಸ್‌ ಅಥವಾ ಎಲೆಕ್ಟ್ರಾನಿಕ್‌ ಕಮ್ಯೂನಿಕೇಶನ್‌ನಲ್ಲಿ ಎಂಜಿನಿಯರಿಂಗ್‌ ಮಾಡುವ ಗುರಿ ಹೊಂದಿದ್ದೇನೆ. 

ಹೆಮ್ಮೆ ತಂದಿದ್ದಾಳೆ 
ಮಗಳಿಗೆ 2ನೇ ಸ್ಥಾನ ಬಂದಿರುವುದು ಅತೀವ ಖುಷಿ ತಂದಿದೆ. ಆಕೆ ಉತ್ತಮ ಸಾಧನೆ ಮಾಡುತ್ತಾಳೆ ಎಂಬ ಅಂದಾಜಿತ್ತು ಎನ್ನುವುದು ಅಂಕಿತಾ ತಂದೆ ಪ್ರಸಾದ್‌ ಅವರ ಮಾತು. ಹೆತ್ತವರಾಗಿ ಆಕೆಗೆ ಅಪಾರ ಆತ್ಮವಿಶ್ವಾಸ ತುಂಬುತ್ತಿದ್ದೆವು. ಬೆಂಬಲ ನೀಡುತ್ತಿದ್ದೆವು. ಪಠ್ಯದಲ್ಲಿನ ಸಮಸ್ಯೆಯ ಪರಿಹಾರಕ್ಕೆ ನಾನೂ ನೆರವು ನೀಡಿದ್ದೇನೆ. ಪಠ್ಯೇತರ ಚಟುವಟಿಕೆಗೂ ಬೆಂಬಲ ನೀಡಿದ್ದೇವೆ. ಪಿಯುಸಿ ಓದಿನ ಕಾರಣ ಎರಡನೇ ವರ್ಷ ಓದಿಗೇ ಹೆಚ್ಚಿನ ಮಹತ್ವ ನೀಡಿದ್ದರಿಂದ ಪಠ್ಯೇತರ ಚಟುವಟಿಕೆ ಸೀಮಿತವಾಗಿತ್ತು ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next