Advertisement

PU ಫಲಿತಾಂಶ; ಅಗ್ರಸ್ಥಾನ ಉಳಿಸಿಕೊಂಡ ಕರಾವಳಿ ಜಿಲ್ಲೆಗಳು

12:52 AM Apr 11, 2024 | Team Udayavani |

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸತತವಾಗಿ ಪ್ರಥಮ ಸ್ಥಾನವನ್ನೇ ಪಡೆಯುತ್ತಾ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ ನಿರ್ವಹಣೆ ಕಾಯ್ದುಕೊಂಡಿದೆ.

Advertisement

ಜಿಲ್ಲೆಗೆ ಈ ಬಾರಿ ಶೇ.97.37 ಫಲಿತಾಂಶ ಬಂದಿದ್ದು, ಕಳೆದ ಬಾರಿ ಶೇ. 95.33 ಲಭಿಸಿತ್ತು. ಈ ಮೂಲಕ ಕಳೆದ ಬಾರಿಗಿಂತ ಶೇಕಡಾವಾರು ಫಲಿತಾಂಶದಲ್ಲಿಯೂ ಏರಿಕೆ ದಾಖಲಿಸಿದೆ.

ಜಿಲ್ಲೆಯಲ್ಲಿ ಒಟ್ಟು 35,928 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 34,361 ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರಲ್ಲಿ 16,740 ಬಾಲಕರು (ಶೇ. 94.26) ಹಾಗೂ 17,621 (ಶೇ. 96.98)ಬಾಲಕಿಯರು. ಖಾಸಗಿಯಾಗಿ ಪರೀಕ್ಷೆ ಬರೆದ 1584 ವಿದ್ಯಾರ್ಥಿಗಳ ಪೈಕಿ 1136 ಮಂದಿ ಉತ್ತೀರ್ಣರಾಗಿ ಶೇ. 71.72 ಫಲಿತಾಂಶ ದಾಖಲಾಗಿದೆ. ಮರು ಪರೀಕ್ಷೆ ಬರೆದ 384 ಮಂದಿಯಲ್ಲಿ 159 ಮಂದಿ ಉತ್ತೀರ್ಣರಾಗಿ ಶೇ. 41.41ರಷ್ಟು ಫಲಿತಾಂಶ ದೊರಕಿದೆ.

ಕಲಾ ವಿಭಾಗದಲ್ಲಿ 3,822 ಮಂದಿಯಲ್ಲಿ 3,428 ಮಂದಿ ಉತ್ತೀರ್ಣರಾಗಿದ್ದು ಶೇ. 89.69 ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ 13,928 ಮಂದಿಯಲ್ಲಿ 13,097 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 94.03 ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ 18,178 ಮಂದಿಯಲ್ಲಿ 17,836 ಮಂದಿ ಉತ್ತೀರ್ಣರಾಗಿ ಶೇ.98.12 ಫಲಿತಾಂಶ ದಾಖಲಾಗಿದೆ.

ನಗರ: ಉತ್ತೀರ್ಣ ಅಧಿಕ!
ದ.ಕ. ಜಿಲ್ಲೆಯ ನಗರ ಪ್ರದೇಶದಲ್ಲಿ 25,031 ಮಂದಿ ಪರೀಕ್ಷೆಗೆ ಹಾಜರಾಗಿದ್ದು 24,224 ಮಂದಿ ಪಾಸಾಗಿದ್ದಾರೆ. ಶೇ. 96.78 ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ 10,897 ಮಂದಿ ಪರೀಕ್ಷೆಗೆ ಹಾಜರಾಗಿದ್ದು 10,137 ಮಂದಿ ಉತ್ತೀರ್ಣರಾಗಿ ಶೇ. 93.03 ಫಲಿತಾಂಶ ಬಂದಿದೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿಂತ ನಗರ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ನಗರದಲ್ಲಿ ಶೇ. 94.55 ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ತೇರ್ಗಡೆ  ಶೇ.88.45 ಆಗಿತ್ತು.

Advertisement

ಕನ್ನಡ ಮಾಧ್ಯಮ; ಗಮನಾರ್ಹ ದಾಖಲೆ
ದ.ಕ.ದಲ್ಲಿ ಈ ಬಾರಿ 3,816 ಮಂದಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು ಈ ಪೈಕಿ 3,326 ಉತ್ತೀರ್ಣರಾಗಿ ಶೇ. 87.16 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ 5,348 ಮಂದಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು 4,373 ಮಂದಿ ಉತ್ತೀರ್ಣರಾಗಿ ಶೇ. 81.77ರಷ್ಟು ಫಲಿತಾಂಶ ಬಂದಿತ್ತು. ಅಂದಹಾಗೆ, ಈ ಬಾರಿ 32,112 ಮಂದಿ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ 31,035 ಮಂದಿ ಉತ್ತೀರ್ಣರಾಗಿ ಶೇ. 96.65 ಫಲಿತಾಂಶ ದಾಖಲಾಗಿದೆ.

39ಕಾಲೇಜುಗಳಿಗೆ ಶೇ.100 ಫಲಿತಾಂಶ
ಜಿಲ್ಲೆಯಲ್ಲಿ 39 ಪಿಯು ಕಾಲೇಜುಗಳು ಶೇ.100 ಫಲಿತಾಂಶ ದಾಖಲಿಸಿವೆ. ಈ ಪೈಕಿ, ಸರಕಾರಿ ಪ.ಪೂ. ಕಾಲೇಜು ಪಂಜ, ಕೊಕ್ಕಡ, ಪುತ್ತೂರು, ನಾಲ್ಯಪದವು, ಕೊಣಾಲು ಸೇರಿ 5 ಸರಕಾರಿ ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ.
ಉಳಿದಂತೆ 6 ಅನುದಾನಿತ ಹಾಗೂ 28 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಶೇ. 100 ಫಲಿತಾಂಶ ಬಂದಿದೆ.

ಕಳೆದ ವರ್ಷ ಒಂದು ಸರಕಾರಿ ಕಾಲೇಜು, 2 ಅನುದಾನಿತ, 14 ಅನು ದಾನರಹಿತ ಕಾಲೇಜುಗಳು ಶೇ. 100 ಫಲಿತಾಂಶ ಪಡೆದಿದ್ದವು. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 100 ಫಲಿತಾಂಶದ ಸಾಧನೆಯಲ್ಲಿ ಏರಿಕೆಯಾಗಿದೆ.

11 ವಿದ್ಯಾರ್ಥಿಗಳಿಗೆ ಅಗ್ರ ಸ್ಥಾನ
ಕಲಾ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪುರೋಹಿತ್‌ ಖುಶಿಬೇನ್‌ ರಾಜೇಂದ್ರ ಕುಮಾರ್‌ (594 ಅಂಕ), ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ಬಿ. ತುಳಸಿ ಪೈ (596), ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜಿನ ಸಮಿತ್‌ ವಿ. ಕುರ್ಡೆಕರ್‌ (595), ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ತರುಣ್‌ ಕುಮಾರ್‌ ಪಾಟೀಲ್‌ (594), ಮಂಗಳೂರು ಕೆನರಾ ಕಾಲೇಜಿನ ಸಮೃದ್ಧಿ (594), ಅಳಿಕೆಯ ಶ್ರೀಸತ್ಯಸಾಯಿ ಲೋಕ ಸೇವಾ ಕಾಲೇಜಿನ ಪ್ರಜ್ವಲ್‌ ಕೆ.ಎನ್‌. (594), ಮಂಗಳೂರಿನ ಮ್ಯಾಪ್ಸ್‌ ಕಾಲೇಜಿನ ಮಾನ್ಯಾ (594) ಹಾಗೂ ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್‌ ಕಾಲೇಜಿನ ವಿದ್ಯಾರ್ಥಿ ಗುಣಸಾಗರ್‌ (597) ಹಾಗೂ ಭಾರ್ಗವಿ ಎಂ.ಜೆ. (595), ಮಂಗಳೂರಿನ ವಳಚ್ಚಿಲ್‌ನ ಎಕ್ಸ್‌ಪರ್ಟ್‌ ಕಾಲೇಜಿನ ವಿದ್ಯಾರ್ಥಿನಿ ನಿಖೀತಾ ವೈ.ಆರ್‌. (595), ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ನೂತನ್‌ ಆರ್‌. ಗೌಡ (595) ಅತ್ಯಧಿಕ ಅಂಕ ಪಡೆಯುವ ಮೂಲಕ ರಾಜ್ಯ-ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ದ.ಕ.: 2023-24ರ ವಿಭಾಗವಾರು ಫಲಿತಾಂಶ
ಕಲಾ ವಿಭಾಗ ಶೇ. 93.64
ವಾಣಿಜ್ಯ ವಿಭಾಗ- ಶೇ. 96.79
ವಿಜ್ಞಾನ ವಿಭಾಗ- ಶೇ. 98.44
ನಗರ ವಿದ್ಯಾರ್ಥಿಗಳ ತೇರ್ಗಡೆ- ಶೇ. 97.65
ಗ್ರಾಮೀಣ ವಿದ್ಯಾರ್ಥಿಗಳ ತೇರ್ಗಡೆ  ಶೇ. 96.65

ದ.ಕ.: ಹಿಂದಿನ ವರ್ಷಗಳ ಫಲಿತಾಂಶ
2023-2024                   ಶೇ. 97.37
2022-23                        ಶೇ. 95.33
2021-22                        ಶೇ. 88.02
2020-21                        ಶೇ. 100
2019-2020                   ಶೇ.90.71
2018-2019                    ಶೇ.90.91
2017-2018                    ಶೇ. 91.49

ಉಡುಪಿ: ವಿದ್ಯಾರ್ಥಿಗಳಿಂದ ದಾಖಲೆ ಫ‌ಲಿತಾಂಶ ಸೃಷ್ಟಿ
ಉಡುಪಿ: ದ್ವಿತೀಯ ಪಿಯುಸಿ ಫ‌ಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈವರೆಗೂ ಸರ್ವಕಾಲಿಕ ದಾಖಲೆಯಾಗಿದ್ದ ಶೇ. 95.24 ಫ‌ಲಿತಾಂಶವನ್ನು ಮೀರಿಸಿ, ಈ ಬಾರಿ 96.80ರಷ್ಟು ಫ‌ಲಿತಾಂಶ ಪಡೆದಿದ್ದಾರೆ ಮತ್ತು ಯಥಾಪ್ರಕಾರ ರಾಜ್ಯಮಟ್ಟದಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಕೊರೊನಾ ಸಂದರ್ಭ ಒಂದು ವರ್ಷ ಎಲ್ಲ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ್ದರಿಂದ ಶೇ. 100ರಷ್ಟು ಫ‌ಲಿತಾಂಶ ದಾಖಲಾಗಿತ್ತು. ಆ ವರ್ಷ ವಾರ್ಷಿಕ ಪರೀಕ್ಷೆ ಇಲ್ಲದೇ ಎಲ್ಲ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆಯಾಗಿದ್ದರು.
ಈ ಬಾರಿ ಜಿಲ್ಲೆಯ 15,964 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 15,189 ಮಂದಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ 15,328 ಹೊಸ (ಫ್ರೆಶರ್) ವಿದ್ಯಾರ್ಥಿಗಳಾಗಿದ್ದು, ಅವರಲ್ಲಿ 14,837 ವಿದ್ಯಾರ್ಥಿಗಳು ಪಾಸಾಗಿ ಶೇ.96.80ರಷ್ಟು ಫ‌ಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದ ಶೇ. 86.81, ವಾಣಿಜ್ಯ ವಿಭಾಗದ ಶೇ. 93.58, ವಿಜ್ಞಾನ ವಿಭಾಗದಲ್ಲಿ ಶೇ. 97.964ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ.

ಗ್ರಾಮೀಣ ಮಕ್ಕಳ ಸಾಧನೆ
ಜಿಲ್ಲೆಯ ಒಟ್ಟಾರೆ ಫ‌ಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೇ ಮೇಲಿದೆ. ಗ್ರಾಮೀಣ ಭಾಗದ 7,632 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7,313 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 95.82ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ನಗರ ಪ್ರದೇಶದ 8,332 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 7,876 ಪಾಸಾಗಿ ಶೇ.94.53ರಷ್ಟು ಫ‌ಲಿತಾಂಶ ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 1.29ರಷ್ಟು ಹೆಚ್ಚು ತೇರ್ಗಡೆಯಾಗಿದ್ದಾರೆ.

ಮೊದಲ ಸ್ಥಾನ ಸ್ಪರ್ಧೆ
ಉಡುಪಿ ಜಿಲ್ಲೆ 96.80ರಷ್ಟು ಫ‌ಲಿತಾಂಶ ಪಡೆದು 2ನೇ ಸ್ಥಾನದಲ್ಲಿದೆ. ಶೇ. 0.57ರಷ್ಟು ಫ‌ಲಿತಾಂಶದಿಂದ ಮೊದಲ ಸ್ಥಾನವನ್ನು ಉಡುಪಿ ಜಿಲ್ಲೆ ಕಳೆದುಕೊಂಡಿದೆ. ಪರ್ಯಾಯ ಬೋಧನೆ, ಉಪನ್ಯಾಸಕರು ಖಾಲಿ ಇರುವ ಕಾಲೇಜುಗಳಿಗೆ ವಿಶೇಷ ನಿಯೋಜನೆ, ಜಿ.ಪಂ. ವತಿಯಿಂದ ನೀಡಿರುವ ಸಿಇಟಿ ಆನ್‌ಲೈನ್‌ ಕೋಚಿಂಗ್‌ ಹೀಗೆ ಹಲವು ವಿಶೇಷ ಕಾರ್ಯಕ್ರಮದಿಂದ ಫ‌ಲಿತಾಂಶದಲ್ಲಿ ಏರಿಕೆಯಾಗಿದೆ. ಮೊದಲ ಸ್ಥಾನಕ್ಕೆ ಉಡುಪಿ ಜಿಲ್ಲೆ ತೀವ್ರ ಸ್ಪರ್ಧೆ ನೀಡಿರುವುದಂತೂ ಸ್ಪಷ್ಟವಾಗಿದೆ.

ವಿದ್ಯಾರ್ಥಿನಿಯರೇ ಮೇಲುಗೈ
ಪರೀಕ್ಷೆ ಬರೆದ 7,719 ಹುಡುಗರಲ್ಲಿ 7,223 ಮಂದಿ ತೇರ್ಗಡೆ ಹೊಂದಿ ಶೇ. 93.57ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದ 8,245 ವಿದ್ಯಾರ್ಥಿನಿಯರಲ್ಲಿ 7,966 ಮಂದಿ ತೇರ್ಗಡೆಹೊಂದಿ ಶೇ. 96.38ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ಒಟ್ಟಾರೆಯಾಗಿ ಹುಡುಗಿಯರ ಫ‌ಲಿತಾಂಶ ಶೇ. 3.05ರಷ್ಟು ಹೆಚ್ಚಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲೂ ಹುಡುಗಿಯರ ಫ‌ಲಿತಾಂಶವೇ ಹೆಚ್ಚಿದೆ.

ಗಣನೀಯ ಏರಿಕೆ
2021-22ರಲ್ಲಿ ಉಡುಪಿ ಜಿಲ್ಲೆ ಶೇ.86.38ರಷ್ಟು ಫ‌ಲಿತಾಂಶ ಪಡೆದು ರಾಜ್ಯದಲ್ಲಿ 2ನೇ ಸ್ಥಾನ ಪಡೆದಿತ್ತು. 2022-23ರಲ್ಲೂ 95.24ರಷ್ಟು ಫ‌ಲಿತಾಂಶದೊಂದಿಗೆ ಎರಡನೇ ಸ್ಥಾನ ಗಳಿಸಿತ್ತು. ಈ ಬಾರಿ ಶೇ.96.80ರಷ್ಟು ಫ‌ಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯ ವಿದ್ಯಾರ್ಥಿಗಳ ಫ‌ಲಿತಾಂಶ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಉಡುಪಿಯ ಡಿಡಿಪಿಯು ಮಾರುತಿ ತಿಳಿಸಿದ್ದಾರೆ.

ಹಿಂದಿನ ವರ್ಷಗಳ ಫ‌ಲಿತಾಂಶ
ವರ್ಷ               ಫ‌ಲಿತಾಂಶ
2023-24           ಶೇ. 96.80
2022-23           ಶೇ. 95.24
2021-22           ಶೇ. 86.38
2020-21           ಶೇ. 100
2019-20           ಶೇ. 90.71
2018-19            ಶೇ. 92.20
2017-18           ಶೇ. 90.67

 

 

Advertisement

Udayavani is now on Telegram. Click here to join our channel and stay updated with the latest news.

Next