Advertisement

ಇದ್ದ ಕಡೆಯಲ್ಲೇ ಇರುವಂತೆ ಸೂಚನೆ; ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರಿ ಸಲಹೆ

03:01 AM Apr 13, 2020 | Hari Prasad |

ವಾಷಿಂಗ್ಟನ್: ಸುದೀರ್ಘ‌ ಅವಧಿಯ ಲಾಕ್‌ ಡೌನ್‌ನಿಂದಾಗಿ ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳು ಮುಚ್ಚಿರುವ ಕಾರಣ ಅಲ್ಲಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅವರಿಗೆ ಸಂದೇಶವೊಂದನ್ನು ರವಾನಿಸಿರುವ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣ್‌ ಜಿತ್‌ ಸಿಂಗ್‌ ಸಂಧು, ‘ನೀವು ಸದ್ಯಕ್ಕೆ ಎಲ್ಲಿದ್ದೀರೋ, ಅಲ್ಲೇ ಇರಿ. ಹಾಗಿದ್ದರಷ್ಟೇ ನೀವು ಸುರಕ್ಷಿತವಾಗಿರುತ್ತೀರಿ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮಗೆ ಏನು ಸಹಾಯ ಬೇಕೋ ಅದನ್ನು ನಾವು ಮಾಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

Advertisement

ಭಾರತೀಯ ರಾಯಭಾರಿ ಕಚೇರಿಯು ಭಾನುವಾರ ಆಯೋಜಿಸಿದ್ದ ಇನ್‌ಸ್ಟಾಗ್ರಾಂ ನೇರ ಪ್ರಸಾರದಲ್ಲಿ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ವೇಳೆ ಸಂದೇಶ ರವಾನಿಸಲಾಗಿದೆ. ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದರೆ ಸಾಕು, ನಾವು ನಿಮ್ಮನ್ನು ಭಾರತಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡುತ್ತೇವೆ ಎಂಬ ಭರವಸೆಯನ್ನೂ ನೀಡಲಾಗಿದೆ. ಅಮೆರಿಕದಲ್ಲಿ ಸುಮಾರು 2.50 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದಾರೆ.

20,637ಕ್ಕೇರಿದ ಸಾವಿನ ಸಂಖ್ಯೆ: ಕೋವಿಡ್ ವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನೇ ಮೀರಿಸಿರುವ ಅಮೆರಿಕ ಈಗ ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಕಂಡ ರಾಷ್ಟ್ರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಇಲ್ಲಿ ಭಾನುವಾರ ಸಾವಿನ ಸಂಖ್ಯೆ 20,637ಕ್ಕೇರಿದೆ. ಇಟಲಿಯಲ್ಲಿ ಈವರೆಗೆ ಒಟ್ಟು 19,468 ಮಂದಿ ಈ ವೈರಸ್ ಗೆ ಬಲಿಯಾಗಿದ್ದಾರೆ. 5.3 ಲಕ್ಷಕ್ಕೂ ಅಧಿಕ ಅಮೆರಿಕನ್ನರು ಸೋಂಕಿನಿಂದ ಬಳಲುತ್ತಿದ್ದಾರೆ.

ಅಮೆರಿಕ ತಲುಪಿದ ಔಷಧ: ಮಲೇರಿಯಾ ನಿಗ್ರಹ ಔಷಧದ ಮೇಲೆ ಭಾರತ ಹೇರಿದ್ದ ರಫ್ತು ನಿರ್ಬಂಧ ವಾಪಸ್‌ ಪಡೆದ ಬೆನ್ನಲ್ಲೇ ಭಾನುವಾರ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧವುಳ್ಳ ಸಂಗ್ರಹವು ಅಮೆರಿಕಕ್ಕೆ ತಲುಪಿದೆ. ಮಾನವೀಯ ನೆಲೆಯಲ್ಲಿ ಭಾರತವೇ ಈ ಔಷಧವನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ.

ಕಳೆದ ವಾರದ ಆರಂಭದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು 35.82 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳು ಹಾಗೂ 9 ಮೆಟ್ರಿಲ್‌ ಟನ್‌ ಫಾರ್ಮಾಸ್ಯುಟಿಕಲ್‌ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಭಾರತಕ್ಕೆ ಮನವಿ ಮಾಡಿದ್ದರು. ಅದರಂತೆ, ಔಷಧ ಹೊತ್ತ ವಿಮಾನವು ನೆವಾರ್ಕ್‌ ವಿಮಾನ ನಿಲ್ದಾಣ ತಲುಪಿದೆ.

Advertisement

ಟ್ರಂಪ್‌ ವಿರುದ್ಧ ಕಿಡಿ
ಸಾವಿನ ಸಂಖ್ಯೆ 20 ಸಾವಿರ ದಾಟುತ್ತಲೇ ಅಧ್ಯಕ್ಷ ಟ್ರಂಪ್‌ ವಿರುದ್ಧ ಅಸಮಾಧಾನ ಆರಂಭವಾಗಿದೆ. ಈ ವೈರಸ್‌ ನ ಗಂಭೀರತೆ ಕುರಿತು ಆರಂಭದಲ್ಲೇ ಪದೇ ಪದೆ ಎಚ್ಚರಿಕೆ ನೀಡಿದರೂ ಟ್ರಂಪ್‌ ಕಿವಿ ಗೊಡಲೇ ಇಲ್ಲ. ಸೋಂಕು ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ಬದಲು ಅಂಥ ಸಂದೇಶಗಳನ್ನು ನಿಯಂತ್ರಿಸುವ, ಹಿರಿಯ ಅಧಿಕಾರಿಗಳು ನೀಡಿರುವ ಎಚ್ಚರಿಕೆಗೆ ಟಾಂಗ್‌ ನೀಡುವ, ಆರ್ಥಿಕತೆಯ ಲಾಭ ಪಡೆಯುವುದರಲ್ಲೇ ಟ್ರಂಪ್‌ ನಿರತರಾದರು. ಅವರ ನಿರ್ಲಕ್ಷ್ಯ ಧೋರಣೆಯೇ ಅಮೆರಿಕನ್ನರ ಈ ಪ್ರಮಾಣದ ಸಾವಿಗೆ ಕಾರಣ ಎಂಬ ದೀರ್ಘ‌ ತನಿಖಾ ವರದಿಯನ್ನು ದೇಶದ ಪ್ರಮುಖ ಪತ್ರಿಕೆಗಳಲ್ಲೊಂದಾದ ನ್ಯೂಯಾರ್ಕ್‌ ಟೈಮ್ಸ್ ಪ್ರಕಟಿಸಿದೆ.

ಅದರಲ್ಲಿ ಸಂಭಾವ್ಯ ವೈರಸ್‌ನ ಅಪಾಯದ ಕುರಿತು ಆರೋಗ್ಯ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಅಧಿಕಾರಿಗಳು, ತಜ್ಞರು, ಗುಪ್ತಚರ ಸಂಸ್ಥೆಗಳು ನೀಡಿದ ಎಚ್ಚರಿಕೆಯ ಸಂದೇಶಗಳನ್ನೂ ಪ್ರಕಟಿಸಲಾಗಿದೆ. ‘ಆಂತರಿಕ ಭಿನ್ನಮತ, ಸಮರ್ಪಕ ಯೋಜನೆಯ ಕೊರತೆ, ತಾನು ಹೇಳಿದ್ದೇ ನಡೆಯಬೇಕೆಂಬ ಟ್ರಂಪ್‌ ಧೋರಣೆಯೇ ದೇಶ ಇಂದು ಶೋಚನೀಯ ಸ್ಥಿತಿಗೆ ತಲುಪಲು ಕಾರಣ’ ಎಂದೂ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next