ಹುಬ್ಬಳ್ಳಿ: ಹು-ಧಾ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್) ಆರಂಭಿಕ ನಿರ್ವಹಣೆಗೆ ಸರಕಾರ ಘೋಷಿಸಿದ್ದ ಅನುದಾನ ಭರವಸೆಯಾಗಿಯೇ ಉಳಿದಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾಲಿಗೆ ಬಿಆರ್‌ಟಿಎಸ್ ಬಿಳಿ ಆನೆಯಾಗಿದೆ.
ಈ ಹಣ ಪಡೆಯಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಹಣಕಾಸು ಇಲಾಖೆ ಅಧಿಕಾರಿಗಳ ಟೇಬಲ್ಗೆ ಎಡತಾಕುತ್ತಿರುವುದನ್ನು ಬಿಟ್ಟರೆ ಯಾವ ಫಲವೂ ದೊರೆಯುತ್ತಿಲ್ಲ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ಕೊರಳಿಗೆ ಮತ್ತೂಂದು ನಷ್ಟದ ಸಂಸ್ಥೆಯನ್ನು ನೇತಾಕಿರುವುದು ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರದಿಂದ ಬರಬೇಕಾಗಿದ್ದ ಅನುದಾನ ಬಾಕಿ ಉಳಿದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.
ನಿರ್ಲಕ್ಷ್ಯ ಕಾರಣವೇ?: ಸಚಿವ ಸಂಪುಟದಲ್ಲಿನ ನಿರ್ಧಾರದಂತೆ ಬಿಆರ್‌ಟಿಎಸ್ ಕಾರ್ಯಾಚರಣೆಯನ್ನು ವಾಯವ್ಯ ಸಾರಿಗೆ ಸಂಸ್ಥೆ ನಿರ್ವಹಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ನಗರ ವಿಭಾಗ ಆರಂಭಿಸಬೇಕು, ಮೂರು ತಿಂಗಳ ನಂತರ ಸಾಧಕ-ಬಾಧಕ ಅವಲೋಕಿಸಿ ಪ್ರತ್ಯೇಕ ನಿಗಮ ಅಥವಾ ವಾಯವ್ಯ ಸಾರಿಗೆ ಸಂಸ್ಥೆ ಅಡಿಯಲ್ಲಿ ವಿಭಾಗವಾಗಿ ಮುಂದುವರಿಯುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ಸಂಸ್ಥೆಯ ಲಾಭದ ದೃಷ್ಟಿಯಿಂದ ಪ್ರತ್ಯೇಕ ಕಾರ್ಪೊರೇಶನ್ ಆರಂಭಿಸಬೇಕು ಎನ್ನುವ ಉದ್ದೇಶದಿಂದ ನಗರ ವಿಭಾಗ ಸ್ಥಾಪನೆಗೆ ವಿಳಂಬ ಮಾಡಲಾಗಿದ್ದು, ಪರಿಣಾಮ ಹಣಕಾಸು ಇಲಾಖೆ ಅನುದಾನ ಪಾವತಿಗೆ ಕೊಕ್ಕೆ ಹಾಕಲಾಗಿದೆ ಎನ್ನಲಾಗಿದೆ.
ಪ್ರತ್ಯೇಕ ನಗರ ವಿಭಾಗ ಆರಂಭದ ಹೊರತಾಗಿ ಸರಕಾರದ ಪ್ರೋತ್ಸಾಹ ಧನ ಬರುವುದಿಲ್ಲ ಎಂದು ಮನವರಿಕೆಯಾದ ನಂತರವಷ್ಟೇ ನೂತನ ನಗರ ವಿಭಾಗಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾರ್ಚ್ ಮೊದಲ ವಾರದಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ವಿಶೇಷಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳ ನೇಮಕ ಕೂಡ ಆಗಿದೆ. ಈ ಬೆಳವಣಿಗೆ ನಂತರ ಸಂಸ್ಥೆ ಅಧಿಕಾರಿಗಳು ಸರಕಾರಕ್ಕೆ ದಾಖಲೆಗಳನ್ನು ಸಲ್ಲಿಸುವ ಕಸರತ್ತು ನಡೆಸಿರುವಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಈ ಅನುದಾನ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
Advertisement
ಬಿಆರ್‌ಟಿಎಸ್ ಸೇವೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಆರಂಭಿಕ ಹಂತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ದರದಲ್ಲಿ ಐಷಾರಾಮಿ ಬಸ್ ಸೇವೆ ನೀಡಬೇಕು ಎನ್ನುವುದು ಸರಕಾರದ ಚಿಂತನೆಯಾಗಿತ್ತು. ಇದರಿಂದ ಬಿಆರ್‌ಟಿಎಸ್ ಸಂಸ್ಥೆಗೆ ಆಗುವ ನಷ್ಟವನ್ನು ಹಾಗೂ ಯೋಜನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು 5 ಕೋಟಿ ರೂ. ಅನುದಾನ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಯಿತು. ಆದರೆ ಈ ತೀರ್ಮಾನ ಕೈಗೊಂಡು ಈಗಾಗಲೇ ಐದು ತಿಂಗಳು ಗತಿಸಿದರೂ ಒಂದು ತಿಂಗಳ ಕಂತು ಕೂಡ ವಾಯವ್ಯ ಸಾರಿಗೆ ಸಂಸ್ಥೆಗೆ ಬಂದಿಲ್ಲ.
Related Articles
Advertisement
ತಮ್ಮ ಪಾಲಿನ ಹಣ ಪಡೆಯಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಣದಿಂದ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯಸೇರಿದಂತೆ ಇತರೆ ಅವಶ್ಯಕತೆ ಪೂರೈಸಲು ಅನುಕೂಲವಾಗುತ್ತದೆ ಎನ್ನುವುದು ಸಂಸ್ಥೆಯ ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಟಾರ ಅವರು ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.
• ಆರಂಭಿಕ ನಿರ್ವಹಣೆ ಅನುದಾನ ಮರೀಚಿಕೆ
•ಭರವಸೆಯಾಗೇ ಉಳಿದ ಮಾಸಿಕ 5 ಕೋಟಿ ನೆರವು
• ಐದು ತಿಂಗಳಾದ್ರೂ ಬಂದೇ ಇಲ್ಲ ಕವಡೆ ಕಾಸು
• 35 ಕೋಟಿ ರೂ. ಬಾಕಿಗಾಗಿ ಕಾದಿರುವ ಸಂಸ್ಥೆ
• ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದ ಅನುದಾನ
ಗಾಯದ ಮೇಲೆ ಬರೆ
ಸರಕಾರ ಪ್ರತಿ ತಿಂಗಳು 5 ಕೋಟಿ ರೂ. ನೀಡಲಿದೆ ಎನ್ನುವ ಭರವಸೆ ಹಾಗೂ ಎರಡು ಸಂಸ್ಥೆಗಳಿಗೆ ಒಬ್ಬರೇ ವ್ಯವಸ್ಥಾಪಕ ನಿರ್ದೇಶಕರು ಇರುವ ಕಾರಣಕ್ಕೆ ಖರ್ಚುವೆಚ್ಚಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಆದರೆ ಸರಕಾರದಿಂದ ಬರಬೇಕಾಗಿದ್ದ 35 ಕೋಟಿ ಸಕಾಲಕ್ಕೆ ಬಾರದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಆರ್‌ಟಿಎಸ್ ಬಸ್‌ಗಳ ಕಾರ್ಯಾಚರಣೆ, ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗಾಗಿ ಪ್ರತಿ ತಿಂಗಳು 2 ಕೋಟಿ ರೂ. ವಾಯವ್ಯ ಸಾರಿಗೆ ಸಂಸ್ಥೆಯಿಂದ ಪಾವತಿ ಮಾಡಲಾಗುತ್ತಿದೆ. ಡೀಸೆಲ್ಗಾಗಿಯೇ ಪ್ರತಿ ತಿಂಗಳು 1 ಕೋಟಿ ರೂ. ಖರ್ಚಾಗುತ್ತಿದೆ.
ಬಿಆರ್‌ಟಿಎಸ್ ಹೆಚ್ಚುವರಿ ಭಾರ
ಪ್ರತಿ ತಿಂಗಳು ಕನಿಷ್ಠ 2 ಕೋಟಿ ಬಿಆರ್‌ಟಿಎಸ್ ನಿರ್ವಹಣೆಗೆ ಮೀಸಲಿಡುತ್ತಿರುವ ಪರಿಣಾಮ ನಿವೃತ್ತ ಸಿಬ್ಬಂದಿಗೆ ಆರ್ಥಿಕ ಸೌಲಭ್ಯ, ಅಪಘಾತ ಪರಿಹಾರ ವಿತರಣೆ, ಬಿಡಿಭಾಗ ಪೂರೈಕೆದಾರರಿಗೆ ಪಾವತಿ, ಇಂಧನ ಬಾಕಿ ಸೇರಿದಂತೆ ಇತರೆ ಅವಶ್ಯಕತೆಗಳಿಗೆ ಕೈ ಹಿಡಿಯುತ್ತಿದೆ. ಈಗಾಗಲೇ ಸಂಸ್ಥೆ ಸಾಕಷ್ಟು ನಷ್ಟದಲ್ಲಿರುವುದರಿಂದ ಬಿಆರ್‌ಟಿಎಸ್ ನಿರ್ವಹಣೆ ಹೆಚ್ಚುವರಿ ಭಾರವಾಗಿ ಪರಿಣಮಿಸಿದ್ದು, ಅಗತ್ಯ ಕಾರ್ಯಗಳಿಗೆ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂಬುದು ಹಿರಿಯ ಅಧಿಕಾರಿಗಳ ಅಳಲಾಗಿದೆ.
•ಹೇಮರಡ್ಡಿ ಸೈದಾಪುರ