ಕೋವಿಡ್ 19ನಿಂದಾಗಿ ಲಾಕ್‌ಡೌನ್ ಆದಾಗ, ನೆಮ್ಮದಿಯಿಂದ ಉಸಿರುಬಿಟ್ಟಿದ್ದು ನಿಜ. ಬೆಳಗ್ಗೆ ದಡಬಡಾಯಿಸಿ ಏಳಬೇಕಿಲ್ಲ. ಒಂದೇ ಉಸಿರಿನಲ್ಲಿ ಮನೆ ಕೆಲಸ ಮಾಡಿ, ಅಡುಗೆ- ತಿಂಡಿ ತಯಾರಿಸಿ, ಗಬಗಬನೆ ಒಂದಿಷ್ಟು ತಿಂದು ಓಡಬೇಕಿಲ್ಲ. ಬಸ್ಸಿಗಾಗಿ ಕಾಯುವ ಒತ್ತಡವಿಲ್ಲ. ಸಂಜೆ ಸೋತು ಸೊಪ್ಪಾಗಿ ಬಂದು, ರಾತ್ರಿ ಅಡುಗೆ ಮಾಡುವ ಕಷ್ಟವಿಲ್ಲ. ಇಷ್ಟ ಬಂದಾಗ ಏಳಬಹುದು, ಅಡುಗೆ- ತಿಂಡಿ ನಿಧಾನವಾದರೂ ಕೇಳುವವರಿಲ್ಲ.
ಓದಲು, ಬರೆಯಲು ಬೇಕಾದಷ್ಟು ಸಮಯವಿದೆ ಅಂತ, ಕೊರೊನಾ ಆತಂಕದ ನಡುವೆಯೂ ಒಳಗೊಳಗೇ ಖುಷಿಪಟ್ಟಿದ್ದೆ. ಅವತ್ತೂ ಎಂದಿನಂತೆ ಬೇಗ ಎದ್ದ ಯಜಮಾನರು ವಾಕಿಂಗ್ ಮುಗಿಸಿ, ಪೇಪರ್ ಓದಿ, ಕಾಫಿ ಕುಡಿದು, ತಿಂಡಿಗೋಸ್ಕರ ಹೊಂಚು ಹಾಕಿ ಕುಳಿತಿದ್ದರು. ಇನ್ನೂ ಮಲಗಿಯೇ ಇದ್ದ ನನ್ನನ್ನು ಏಳಿಸಲು ಮನಸ್ಸು ಬಾರದೆ, ಅರ್ಧ ಗಂಟೆಗೊಮ್ಮೆ ರೂಮಿಗೆ ಬಂದು, ಆರೂವರೆ ಆಯ್ತು, ಈಗ ಏಳು ಗಂಟೆ ಅಂತ ಬಹು ಮೆಲ್ಲಗೆ ಹೇಳುತ್ತಾ ಆಚೆ ಈಚೆ ಓಡಾಡುತ್ತಿರುವುದನ್ನು ನೋಡಲಾರದೆ, ಏಳಲೇಬೇಕಾಯಿತು.
ಪಾಪ, ರಾತ್ರಿ ಬೇಗ ಊಟ ಮುಗಿಸಿ ಮಲಗಿರುತ್ತಾರೆ. ಬೆಳಗ್ಗೆ ಬೇಗ ಅವರಿಗೆ ಹಸಿವಾಗುತ್ತದೆ ಅಂತ, ನಿಧಾನವಾಗಿ ಏಳ್ಳೋಣ ಅಂದುಕೊಂಡ ನಿರ್ಧಾರವನ್ನು ಬದಲಿಸಿದೆ. ಈಗ ಎಲ್ಲರಿಗೂ, ದಿನವೂ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಆಗುತ್ತಿದೆ. ಮೊದಲಾದರೆ ಬೆಳಗ್ಗೆ, ರಾತ್ರಿ ಮಾತ್ರ ಅಡುಗೆ ಮಾಡುತ್ತಿದ್ದೆ. ಈಗ ಮೂರು ಹೊತ್ತು ಅಡುಗೆ. ಅಷ್ಟೇ ಅಲ್ಲ, ನಾನು ಮನೆಯಲ್ಲಿಯೇ ಇದ್ದೀನಿ ಅಂತ, ಮಗಳಿಂದ ಒಂದೊಂದೇ ತಿಂಡಿ- ತಿನಿಸಿನ ಬೇಡಿಕೆ.
ಅದಕ್ಕೆ ಪತಿರಾಯರಿಂದಲೂ ಒತ್ತಾಸೆ. ಹಾಗಾಗಿ, ಈ ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಹೊತ್ತು ಕಳೆದಿದ್ದು ಅಡುಗೆ ಮನೆಯಲ್ಲಿಯೇ. ನಡುವೆ ಒಂದಿಷ್ಟು ಓದು ಮತ್ತು ಬರಹ. ಸಂಜೆ ಹಳೆಯ ಹಾಡು ಕೇಳುತ್ತಾ ಸಿಟ್ ಔಟ್‌ನಲ್ಲಿಯೇ ಅರ್ಧ, ಮುಕ್ಕಾಲು ಗಂಟೆ ವಾಕಿಂಗ್. ರಾತ್ರಿಗೆ ಪ್ರತಿನಿತ್ಯ ರೊಟ್ಟಿಯ ಸಮಾರಾಧನೆ ಇರಲೇಬೇಕು, ಮಲೆನಾಡಿನ ಪತಿ ಮಹಾಶಯರಿಗೆ. ಇನ್ನು ರಜೆ ಅಂತ ಅನ್ನಿಸುವುದು ಹೇಗೆ? ಹೊರಗಿನ ಕೆಲಸಕ್ಕೆ ರಜೆ ಅಷ್ಟೇ.
ಮನೆಕೆಲಸಕ್ಕೆ ವರ್ ಟೈಂ ಕೆಲಸ. ಅದೆಷ್ಟೋ ವರ್ಷಗಳ ನಂತರ, ಸಂಪೂರ್ಣ ಗೃಹಿಣಿ ಪಾತ್ರ ನಿರ್ವಹಿಸಿದ ನೆಮ್ಮದಿ. ಹೀಗೆ ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಹೋಗದೇ ಉಳಿದದ್ದು, ಜೀವನದಲ್ಲಿ ಇದೇ ಮೊದಲು. ಶಾಪಿಂಗ್, ಸಿನಿಮಾ, ಹೋಟೆಲ…, ಪ್ರವಾಸ, ಮದುವೆ, ಗೃಹಪ್ರವೇಶ, ನಾಮಕರಣ ಮುಂತಾದವಕ್ಕೆ ಹಾಜರಾಗದೆ ಇರಲು ಸಾಧ್ಯವೇ?
ಬಂಧು ಬಳಗ, ಸ್ನೇಹಿತರ, ಆತ್ಮೀಯರ ಮನೆಗಳಿಗೆ ಹೋಗದೆ, ಅವರು ನಮ್ಮ ಮನೆಗೆ ಬಾರದೆ ಬದುಕಲು ಸಾಧ್ಯವೇ ಅನ್ನೋ ಭ್ರಮೆಯಲ್ಲಿ ಇದ್ದದ್ದು ನಿಜ. ಆದರೆ ಸಂದರ್ಭ, ಸನ್ನಿವೇಶ, ಏನೆಲ್ಲವನ್ನೂ ಸಾಧ್ಯವಾಗಿಸಿದೆ. ಮನೆಯಲ್ಲಿಯೇ ಇರುವುದಕ್ಕೆ ಮನಸ್ಸು ಒಗ್ಗಿ ಹೋಗಿದೆ. ಅದು ಬೇಕು ಇದು ಬೇಕು ಅನ್ನುತ್ತಿದ್ದವರೆಲ್ಲರೂ, ಈಗ ಏನಿದೆಯೋ, ಎಷ್ಟಿದೆಯೋ ಅಷ್ಟಕ್ಕೇ ಹೊಂದಿಕೊಳ್ಳುತ್ತಿದ್ದಾರೆ. ಇದೇ ಅಲ್ಲವೇ ಬದುಕು. ಅದಕ್ಕೇ ಇರಬೇಕು ಡಿವಿಜಿ ಹೇಳಿದ್ದು-
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೋ ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ನಿನ್ನೊಡಲೆ ಚಿತೆ ಜಗದ ತಂಟೆಗಳೆ ಸವುದೆಯುರಿ ಮಣ್ಣೆ ತರ್ಪಣ ನಿನಗೆ- ಮಂಕುತಿಮ್ಮ
* ಎನ್.ಶೈಲಜಾ ಹಾಸನ