Advertisement
ಖಂಡಿತ ಇಲ್ಲ. ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸೆ ನಡೆಯುತ್ತಲೇ ಇದೆ. ಮನುಕುಲದ ಅಮಾನವೀಯ, ಪೈಶಾಚಿಕ ಕ್ರೂರ ಲಕ್ಷಣಗಳಲ್ಲೊಂದಾದ ಅತ್ಯಾಚಾರವೆಂಬ ಪೆಡಂಭೂತವು ಇಂದು ಮಹಿಳೆಯರಿಗೆ ಭಾರತದಲ್ಲಿ ರಕ್ಷಣೆಯೇ ಇಲ್ಲವೇ ಎಂಬ ಪ್ರಶ್ನೆಗಳನ್ನೆತ್ತಿ ನಿಲ್ಲಿಸಿದೆ. ಭಾವನಾತ್ಮಕ ಸಂಬಂಧಗಳಲ್ಲಿ, ಆಧ್ಯಾತ್ಮಿಕ ಹಿನ್ನೆಲೆಯ ಸಂಸ್ಕಾರದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿರುವ ದೇಶ ಭಾರತ. ಆದರೆ, ವಾಸ್ತವದಲ್ಲಿ ಆಕೆಗೆ ಅಂಥ ಸ್ಥಾನ ಲಭಿಸುತ್ತಿದೆಯೆ? ಆಕೆ ಗೌರವ ಪಡೆಯುತ್ತಿದ್ದಾಳೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿಲ್ಲ.
Related Articles
ಮಹಿಳೆಯರ ಮೇಲಿನ ದೌರ್ಜನ್ಯದಿಂದ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಬಾಲಕಿಯರು, ಯುವತಿಯರು, ಮಹಿಳೆಯರ ಬದುಕು ಅತಂತ್ರವಾಗಿದೆ. ಪರಂಪರಾಗತವಾಗಿ ಬೆಳೆದುಬಂದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಶತಶತಮಾನಗಳಿಂದ ಹೆಣ್ಣಿನ ಅಸ್ತಿತ್ವವನ್ನು ವಿರೋಧಿಸುತ್ತ ಬಂದಿರುವ ಸಾಮಾಜಿಕ ಸಂಸ್ಥೆಗಳು ಸಂಪ್ರದಾಯ, ಧಾರ್ಮಿಕ ಆಚರಣೆ, ಲಿಂಗ ಅಸಮಾನತೆಯ ಚೌಕಟ್ಟನ್ನು ಸೃಷ್ಟಿಸಿ- ಈ ಚೌಕಟ್ಟನ್ನು ಧಿಕ್ಕರಿಸಿ ಆಚೆ ಹೋಗಲು ಪ್ರಯತ್ನಿಸುವ ಹೆಣ್ಣನ್ನು ಮತ್ತೆ ಚೌಕಟ್ಟಿನೊಳಗೇ ತಳ್ಳುವ ಪ್ರಯತ್ನ ನಡೆಸುತ್ತಿದೆ. ಸ್ತ್ರೀಯರ ಮೇಲೆ ತನ್ನ ಅಧಿಕಾರ ಸ್ಥಾಪಿಸಿ, ಅವರ ಮೇಲೆ ಆಳ್ವಿಕೆ ನಡೆಸಬೇಕೆನ್ನುವ ಆಂತರಿಕ ಬಯಕೆಯಿಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವಂತಿದೆ. ಹೆಣ್ಣಿನ ಬಗ್ಗೆ ಗಂಡಸಿಗಿರುವ ಕೀಳು ಮನೋಭಾವ, ಮಾಧ್ಯಮಗಳು ಹೆಣ್ಣನ್ನು ನಿರೂಪಿಸುವ ರೀತಿ, ಗೌರವಯುತವಾಗಿಯೇನೂ ಕಾಣಿಸುವುದಿಲ್ಲ.
Advertisement
ಮೈ ಪ್ರದರ್ಶನ ಮಾಡುವ ಉಡುಗೆ-ತೊಡುಗೆಗಳು ಅತ್ಯಾಚಾರಕ್ಕೆ ಕಾರಣ ಎನ್ನುವುದೊಂದು ಕ್ಷುಲ್ಲಕ ವಾದ. ಆದರೆ, ಎಳೆಯ ಮಕ್ಕಳ ಮೇಲೆಯೂ ಅತ್ಯಾಚಾರ ನಡೆದ ಪ್ರಕರಣಗಳನ್ನು ಗಮನಿಸಿದಾಗ, ಈ ವಾದದಲ್ಲಿ ಹುರುಳಿಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.
ಹಾಗಾದರೆ, ಹೆಣ್ಣನ್ನು ಅಗೌರವಯುತವಾಗಿ ನಡೆಸಿಕೊಳ್ಳ ದಂತೆ ಬಿಗಿ ಹಾಗೂ ಕಠಿಣ ಕಾನೂನು ಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲವೆ? ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸುವುದು, ಕಾನೂನಿನ ಅರಿವು ಮೂಡಿಸುವುದು, ಮಹಿಳೆ ಮತ್ತು ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯ, ಮಾನಸಿಕ ಹಿಂಸೆ ಮತ್ತು ಅತ್ಯಾಚಾರಗಳಂತಹ ಘಟನೆಗಳ ಕುರಿತು ತಿಳಿ ಹೇಳಿ, ಅವರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು. ಸ್ವಾವಲಂಬನೆ ಜೊತೆಗೆ ಸಶಕ್ತ ಮಹಿಳೆಯರನ್ನಾಗಿ ಮಾಡುವ ಕ್ರಮಗಳನ್ನು ಕೈಗೊಳ್ಳುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಯಾವುದೇ ಸಮಸ್ಯೆಗಳನ್ನು “ಮಹಿಳೆಯರ ಸಮಸ್ಯೆ’ ಎಂದು ಪರಿಗಣಿಸದೇ ಅದು ಈ ಸಮಾಜದ ಸಮಸ್ಯೆ ಎಂದು ಪರಿಗಣಿಸಿ, ಸಹೃದಯ ಪುರುಷರು ಹೋರಾಟಗಳೊಡನೆ ಕೈ ಜೋಡಿಸಬೇಕು.
ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಮಾನತೆಯ ಕುರಿತು ಅರಿವು ಮೂಡಿಸಿದಲ್ಲಿ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರುವುದು ಸಾಧ್ಯ. ದೇಶಾದ್ಯಂತ ಮಹಿಳೆಯರು ಸಂಘಟಿತರಾಗಿ ಒಂದು ಸಮರ್ಥವಾದ ನೆಟ್‌ವರ್ಕ್ ರೂಪಿಸಿಕೊಂಡು ಸಮಸ್ಯೆಗೆ ಮುಖಾಮುಖೀಯಾಗಬೇಕು.
ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರದ ನೀತಿ- ನಿಯಮಗಳ ನಿರೂಪಣೆಯಲ್ಲಿ, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಬಾಲ್ಯವಿವಾಹ, ಹೆಣ್ಣುಭ್ರೂಣಹತ್ಯೆ, ವರದಕ್ಷಿಣೆ ಪದ್ಧತಿ, ಅತ್ಯಾಚಾರ, ಹೆಣ್ಣುಮಕ್ಕಳ ಸಾಗಾಣಿಕೆ ಮತ್ತು ಮಾರಾಟ, ವೇಶ್ಯಾವಾಟಿಕೆ ಮುಂತಾದ ತೀವ್ರಗತಿಯ ಸಮಸ್ಯೆಗಳ ಬಗ್ಗೆ ಸರಕಾರ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು.
ಒಟ್ಟಿನಲ್ಲಿ ಈ ರೀತಿಯ ದೌರ್ಜನ್ಯಗಳು ಅಂತ್ಯಗೊಳ್ಳಬೇಕಾದರೆ ಹೆಣ್ಣಿನ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕಾಗಿದೆ. ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ಅವಿರತವಾಗಿ ನಡೆಯಬೇಕಿದೆ.
ಸೌಮ್ಯಾ ಪ್ರಕಾಶ ತದಡಿಕರ