ಹೊನ್ನಾಳಿ: ನ್ಯಾಮತಿ ತಾಲೂಕಿನ ಸುಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ಶುಕ್ರವಾರ ಬೆಳಿಗ್ಗೆ ಭೋಗ್(ಹೋಮ) ಕೈಂಕರ್ಯದೊಂದಿಗೆ ಸಂತ ಸೇವಾಲಾಲ್ ಅವರ 280ನೇ ಜಯಂತ್ಯುತ್ಸವಕ್ಕೆ ಅದ್ದೂರಿ ತೆರೆ ಎಳೆಯಲಾಯಿತು.
ಬೆಂಗಳೂರಿನ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ-ನಿರ್ವಹಣಾ ಪ್ರತಿಷ್ಠಾನ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಮತ್ತು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ 280ನೇ ಜಯಂತ್ಯುತ್ಸವ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.
ಸಂತ ಸೇವಾಲಾಲ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ, ಮಾಜಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಬೆಳಗ್ಗೆ ಭೋಗ್ ಕಾರ್ಯಕ್ರಮ ನಡೆಯಿತು.
ಸಂತ ಸೇವಾಲಾಲ್‌ರ ಜಯಂತ್ಯುತ್ಸವದ ಅತಿ ಮುಖ್ಯವಾದ ಈ ಭೋಗ್(ಹೋಮ) ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಬಂದಂತಹ ಬಂಜಾರಾ ಸಮಾಜದ ಭಕ್ತರು ಪಾಲ್ಗೊಂಡು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.
ಎರಡು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ, ವೇದಿಕೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದು ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಭಕ್ತಿ ಸಲ್ಲಿಸಿ ಸಂತ ಸೇವಾಲಾಲ್ ಮಹಾರಾಜ್ ಕಿ ಜೈ ಎಂದು ಘೋಷಣೆ ಕೂಗುತ್ತ ಭಾಯಘಡ್‌ದಿಂದ ತಮ್ಮ ತಮ್ಮ ಊರುಗಳಿಗೆ
ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಊಟ, ವಸತಿ ಇತರ ಮೂಲ ಸೌಲಭ್ಯಗಳನ್ನು ಭಕ್ತರಿಗೆ ಜಿಲ್ಲೆ ಹಾಗೂ ತಾಲೂಕು ಆಡಳಿತಗಳು ಅಚ್ಚುಕಟ್ಟಾಗಿ ನಿರ್ವಹಿಸಿದವು.