ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ಬರುವ ತಂಬಾಕು ನಾಡಿನ ನಿಪ್ಪಾಣಿ ವಿಧಾನಸಭೆ ಮತಕ್ಷೇತ್ರದಲ್ಲಿ ರಾಜಕೀಯ ರಂಗೇರುತ್ತಿದೆ. ನಿಪ್ಪಾಣಿ ಕ್ಷೇತ್ರ ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಮರಾಠಿ ಭಾಷಿಕರು ಹೆಚ್ಚಾಗಿ ಇರುವುದರಿಂದ ಸ್ಥಳೀಯ ವಿಷಯಕ್ಕಿಂತ ರಾಷ್ಟ್ರೀಯ ವಿಷಯಗಳೇ ಹೆಚ್ಚು ಇಲ್ಲಿ ಮಾರ್ದನಿಸುತ್ತಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಮತ್ತು ಬಿಜೆಪಿ ಶಶಿಕಲಾ ಜೊಲ್ಲೆ ಇಬ್ಬರ ಪ್ರತಿಷ್ಠೆಯೂ ಜೋರಾಗಿದೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಿಗಿಂತ ನಿಪ್ಪಾಣಿ ಮತಕ್ಷೇತ್ರದಲ್ಲಿ ಮಾತ್ರ ರಾಜಕೀಯ ಚುಟುವಟಿಕೆ ಗರಿಗೆದರಿವೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪತ್ನಿ ಶಶಿಕಲಾ ಜೊಲ್ಲೆಯವರು ನಿಪ್ಪಾಣಿ ಶಾಸಕಿಯಾಗಿರುವುದರಿಂದ ಇಲ್ಲಿಯ ರಾಜಕೀಯ ಬಿರುಸು ಹೆಚ್ಚಿದೆ. ನಿಪ್ಪಾಣಿ ಭಾಗದಲ್ಲಿ ಕಮಲಕ್ಕೆ ಮುನ್ನಡೆ ಕೊಟ್ಟು ಪತಿ ಅಣ್ಣಾಸಾಹೇಬರನ್ನು ದೆಹಲಿಯತ್ತ ಕಳಿಸುವತ್ತ ಟೊಂಕ ಕಟ್ಟಿ ಕ್ಷೇತ್ರದ ತುಂಬೆಲ್ಲ ಕಾರ್ಯಕರ್ತರ ಜೊತೆ ಓಡಾಟ ನಡೆಸಿದ್ದಾರೆ ಮತ್ತು ನಿಪ್ಪಾಣಿ ಭಾಗದಲ್ಲಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆನ್ನುವ ಕೂಗು ಜೋರಾಗಿದೆ. ಆದರೆ ಕಾಂಗ್ರೆಸ್ ಕೂಡ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ, ಬಿಜೆಪಿ ಸರಿ ಸಮನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕನಿಷ್ಟ ಆದಾಯ ಭದ್ರತೆಯಲ್ಲಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 6000 ರೂ ನೇರವಾಗಿ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ನ್ಯಾಯದ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ನಿಪ್ಪಾಣಿ ಭಾಗದಲ್ಲಿ ಕಾಂಗ್ರೆಸ್‌ನಲ್ಲಿ ಮೂರು ಜನ ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ವೀರಕುಮಾರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಗೆ ಮತಗಳ ಮುನ್ನಡೆ ಕೊಡಲು ಶತಾಯಗತಾಯ ಪ್ರಯತ್ನ ಆರಂಭಿಸಿದ್ದಾರೆ.
ನಿಪ್ಪಾಣಿ ಕ್ಷೇತ್ರ ಹೆಚ್ಚಾಗಿ ತಂಬಾಕು ಬೆಳೆಯುವ ಪ್ರದೇಶವಾಗಿದೆ. ಹತ್ತಾರು ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆದು ಆಗರ್ಭ ಶ್ರೀಮಂತರಾಗಿರುವ ಉದಾಹರಣೆ ಈ ಭಾಗದಲ್ಲಿದ್ದಾರೆ. ತಂಬಾಕಿಗೆ ಗುಣಮಟ್ಟದ ದರ ಸಿಗಬೇಕೆಂದು ಬೃಹತ್ ರೈತ ಚಳುವಳಿ ನಡೆದು ರೈತರು ತಾತ್ಮರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಬಾಕು ಬೆಳೆಯನ್ನು ಸರ್ಕಾರ ನಿಷೇಧಿಸಿದೆ. ಇದರಿಂದ ತಂಬಾಕು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಕೆಲವೊಂದು ಕಡೆ ತಂಬಾಕು ಬೆಳೆದರೂ ಸಿಗಬೇಕಾದ ದರ ಸಿಗುತ್ತಿಲ್ಲ ಎಂಬುದು ರೈತರ ನೋವಿನ ಮಾತು. ಇನ್ನೂ ನಿಪ್ಪಾಣಿ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚಿನ ರೈತರು ಕಬ್ಬು ಬೆಳೆ ಬೆಳೆಯುತ್ತಾರೆ. ಆದರೆ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಸಿಗುತ್ತಿಲ್ಲವೆಂದು
ರೈತರ ಆಗ್ರಹವಾದರೆ ಗಡಿ ಭಾಗದ ಜನ ಹೆಚ್ಚಾಗಿ ಉದ್ಯೋಗ ಅರಸಿಕೊಂಡು ನೆರೆಯ ಮಹಾರಷ್ಟ್ರದ ಎಂಐಡಿಸಿ ಕಡೆ ಮುಖ ಮಾಡುತ್ತಾರೆ.
ಅದೇ ಎಂಐಡಿಸಿ ಹಾಗೇ ಕೆಐಡಿಸಿ ಸ್ಥಾಪನೆ ಮಾಡಿ ಉದ್ಯೋಗ ಕೊಡಬೇಕೆನ್ನುವುದು ಇಲ್ಲಿಯ ಜನರ ಒತ್ತಾಯವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಎರಡು ಪಕ್ಷಗಳಿಂದ ಪ್ರಬಲ ಪೈಪೋಟಿ ಇದೆ. ಮರಾಠಿ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮನ ಗೆಲ್ಲುವುದಕ್ಕೆ ಎರಡು ಪಕ್ಷದ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಹಳೆಯ ಸದಲಗಾ ಕ್ಷೇತ್ರದಲ್ಲಿ ಬರುವ 13 ಹಳ್ಳಿಗಳು ಇಂದು ನಿಪ್ಪಾಣಿ
ಕ್ಷೇತ್ರದಲ್ಲಿ ವೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ನಿಪ್ಪಾಣಿ ನಗರದಲ್ಲಿಯೂ ಪ್ರಭಾವ ಜೋರಾಗಿದೆ. ಜೊಲ್ಲೆ ಕುಟುಂಬದ ಪ್ರಭಾವ ಕೂಡಾ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವುದರಿಂದ ಮತಗಳ ಮುನ್ನಡೆ ಕಾಯ್ದುಕೊಳ್ಳಲು ತೀವ್ರ ಕಸರತ್ತು ನಡೆಸಿದ್ದಾರೆ.