ಹಾನಗಲ್ಲ: ಮದ್ಯಪಾನ, ತಂಬಾಕು ಅಥವಾ ಸಿಗರೇಟ್ ವ್ಯಸನದಿಂದ ಮನುಷ್ಯ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತಾನೆ. ಆದ್ದರಿಂದ, ಯಾವುದೇ ರೀತಿಯ ವ್ಯಸನವನ್ನು ಮೈಗೆ ಅಂಟಿಸಿಕೊಳ್ಳದಂತೆ ಬದುಕು ನಡೆಸುವುದನ್ನು ಕಲಿತುಕೊಳ್ಳಬೇಕೆಂದು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಸದಾಶಿವಪ್ಪ ಹೇಳಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಂಬಾಕು ಮುಕ್ತ ದಿನದ ಅಂಗವಾಗಿ ನಡೆದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಸೇವನೆ ಹಾಗೂ ಮಧ್ಯಪಾನ ಮಾರಣಾಂತಿಕ ಕಾಯಿಲೆಗಳನ್ನು ತರುತ್ತವೆ. ಇಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕೆಂದರು.
ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಪ್ರಸನ್ನಕುಮಾರ ಹಾಗೂ ಯಲ್ಲಪ್ಪ ಮತ್ತಿತರರು ಜನಜಾಗೃತಿ ಜಾಥಾ ನಡೆಸುವುದರ ಜೊತೆಗೆ ತಂಬಾಕು ಸೇವನೆ ಮತ್ತು ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಕುರಿತು ಬೀದಿ, ಬೀದಿಗಳಲ್ಲಿ ಯಮ-ಕಿಂಕರರ ವೇಷದೊಂದಿಗೆ ಮನಮೋಹಕ ರೂಪಕಗಳನ್ನು ಮನಸ್ಸಿಗೆ ಮುಟ್ಟುವ ಹಾಗೆ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಚಾಲಕರಾದ ಡಾ.ವಿಶ್ವನಾಥ ಬೊಂದಾಡೆ, ಡಾ.ಪ್ರಕಾಶ ಹುಲ್ಲೂರ, ರೆಡ್ ರಿಬ್ಬನ್ ಸಂಚಾಲಕ ಆರ್.ದಿನೇಶ ಹಾಗೂ ಪ್ರೊ.ಎಂ.ಬಿ.ನಾಯ್ಕ, ಪ್ರೊ.ರಾಘವೇಂದ್ರ. ಮಾಡಳ್ಳಿ, ಪ್ರೊ.ಜಿ.ವಿ.ಪ್ರಕಾಶ್, ಡಾ.ಬಿ.ಎಸ್.ರುದ್ರೇಶ್, ಪ್ರೊ.ಜಿ.ಟಿ.ಜೀತೇಂದ್ರ, ಮಹೇಶ ಅಕ್ಕಿವಳ್ಳಿ, ಎಂ.ಎಂ.ನಿಂಗೋಜಿ, ಎಸ್.ಸಿ.ವಿರಕ್ತಮಠ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.