Advertisement

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ

02:14 PM Jun 01, 2018 | |

ತಿ.ನರಸೀಪುರ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎ.ನಾಗಿರೆಡ್ಡಿ ಹೇಳಿದರು. 

Advertisement

ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ,  ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ತಂಬಾಕು ವಿರೋಧಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ವಯಸ್ಸಿನಲ್ಲೇ ತಂಬಾಕು ಚಟಕ್ಕೆ ಬೀಳುತ್ತಿದ್ದು, ಅಂಗಡಿ ಮಾಲಿಕರು 18 ವರ್ಷದೊಳಗಿನವರು ತಂಬಾಕು ಪದಾರ್ಥಗಳನ್ನು ಕೇಳಿದರೆ ನೀಡಬಾರದು. ಶಾಲಾ ಕಾಲೇಜುಗಳ ಮುಂಭಾಗದಲ್ಲಿ ಹಾಗೂ ಆಸುಪಾಸಿನಲ್ಲಿ ತಂಬಾಕು ನಿಷೇಧದ ಸೂಚನೆ ಅಳವಡಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರೇ ಹೆಚ್ಚಿನ ರೀತಿಯಲ್ಲಿ ತಂಬಾಕು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವ್ಯಸನಮುಕ್ತ ಜೀವನ ನಡೆಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಿಯಾ ಭಾನು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿದರೆ ಅದು ಎಲ್ಲ ಕಡೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಡಿ ಶಾಲಾ ಕಾಲೇಜುಗಳಲ್ಲಿ ಇಂತಹ  ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಂಬಾಕು ಬಳಕೆಯಿಂದ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು  ಬೀರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಲಕಾಡು ಆರೋಗ್ಯ ಕೇಂದ್ರದ ಡಾ. ಕಮಲಮ್ಮ, ವಕೀಲ ಶಂಭುಲಿಂಗಸ್ವಾಮಿ, ಬಿಇಒ ಗಂಗಾಧರ್‌, ವಕೀಲರ ಸಂಘದ ಅಧ್ಯಕ್ಷ ಜಿ. ರವಿಶಂಕರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಪ್ರಾಂಶುಪಾಲ ಮೋಹನ್‌ ಕುಮಾರ್‌, ಡಾ. ಮಂಗಳಮೂರ್ತಿ, ಸೋಮಣ್ಣ, ವಕೀಲರಾದ ನಂಜಪ್ಪ, ಶಾಂತನಾಗರಾಜು, ಸಿದ್ದರಾಜು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next