ಹುಣಸೂರು: ಮದ್ಯಪಾನ ವ್ಯಸನ ಇಡೀ ಕುಟುಂಬವನ್ನು ಸಂಕಷ್ಟದ ಸ್ಥಿತಿಗೆ ತಲುಪಿಸುವ ದುಶ್ಚಟವಾಗಿದ್ದು, ಈ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಪ್ರೌಢಶಾಲೆ ಮುಖ್ಯಶಿಕ್ಷಕ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸ್ವಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಡಿತದಿಂದ ಕುಟುಂಬ ಬೀದಿಪಾಲಗಲಿದೆ. ಜೊತೆಗೆ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕುಡಿತವನ್ನು ಬಿಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರ ನಡೆಸಿ ಕುಟುಂಬಗಳಲ್ಲಿ ಆಶಾ ಕಿರಣ ಮೂಡಿಸುತ್ತಿದೆ.
ಜೊತೆಗೆ ಶಾಲಾ ಕಾಲೇಜು ಮಕ್ಕಳಲ್ಲೂ ಮಾದಕ ವಸ್ತುಗಳಿಂದ ದೂರವಿರುವ ಹಾಗೂ ಅವುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಸ್ವಸ್ಥ ಸಂಕಲ್ಪ ಕಾರ್ಯಕ್ರಮ ರೂಪಿಸಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ತಾಲೂಕು ಪಂಚಾಯ್ತಿ ಸದಸ್ಯೆ ಪುಷ್ಪ³ಲತಾ ಮಾತನಾಡಿ, ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಉತ್ತಮ ಬದುಕು ರೂಪಿಸಿಕೊಳ್ಳಲು ಪೂರಕವಾಗಿದೆ ಎಂದರು.
ಧರ್ಮಸ್ಥಳ ಜನಜಾಗೃತಿ ವೇದಿಕೆಯ ಸಂಪನ್ಮೂಲ ವ್ಯಕ್ತಿ ನಂದಕುಮಾರ್, ವಿದ್ಯಾರ್ಥಿಗಳಿಗೆ ಸ್ವಸ್ಥ ಸಮಾಜ ನಿರ್ಮಾಣದ ಸಂಕಲ್ಪ ಪ್ರತಿಜ್ಞೆ ಬೋಧಿಸಿದರು. ಈ ವೇಳೆ ಯೋಜನೆಯ ವಲಯ ಮೇಲ್ವಿಚಾರಕಿ ಸರೋಜ, ಸೇವಾ ಪ್ರತಿನಿಧಿ ರವಿ, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.