Advertisement

ಅಕ್ರಮ ಚಟುವಟಿಕೆಯಿಂದ ದೂರವಿರಿ: ಸಿಪಿಐ ಪಾಳಾ

02:41 PM May 14, 2022 | Team Udayavani |

ಅಫಜಲಪುರ: ಅಕ್ರಮ ಮದ್ಯ ಮಾರಾಟ, ಗಾಂಜಾ ಸೇವನೆ-ಮಾರಾಟ, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ನೀಡಿ, ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಜಗದೇವಪ್ಪ ಪಾಳಾ ಹೇಳಿದರು.

Advertisement

ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದ ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರೆಂದರೆ ಭಯ ಬೇಡ. ನಾವು ನಿಮ್ಮ ರಕ್ಷಣೆಗೆ ಇರುವ ಸೇವಕರು.ನೀವು ಕಾನೂನು ಗೌರವಿಸುವುದರ ಜತೆಗೆ ಅವುಗಳನ್ನು ಪಾಲಿಸಿದರೆ ನಮಗೆ ಹೆದರುವ ಅಗತ್ಯವೇ ಇಲ್ಲ ಎಂದರು.

ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದರೇ ಘನತೆ, ಗೌರವ, ಮರ್ಯಾದೆ ಹಾಳಾಗುತ್ತದೆ ಎನ್ನುವ ಕೀಳರಿಮೆ ಬಿಡಿ. ನೊಂದವರು, ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಒದಗಿಸಲು ಪೊಲೀಸ್‌ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಯುವ ಜನತೆ ಹೆಚ್ಚಿನ ಮಟ್ಟದಲ್ಲಿ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ವಾಹನ ಚಾಲಕರು ಹೆಲ್ಮೆಟ್‌, ಇನ್ಸೂರೆನ್ಸ್‌, ಲೈಸೆನ್ಸ್‌ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾವಣೆ ಮಾಡಲು ನೀಡಬಾರದು. ಅಪಘಾತ ಸಂಭವಿಸಿದರೆ ಅದಕ್ಕೆ ವಾಹನ ಮಾಲೀಕರು ನೇರ ಹೊಣೆಗಾರರು ಎಂದು ಎಚ್ಚರಿಸಿದರು.

ಕಡ್ಡಾಯವಾಗಿ ವಾಹನಗಳಿಗೆ ಇನ್ಸುರೆನ್ಸ್‌ ಮಾಡಿಸಿ. ಒಂದು ವೇಳೆ ದುರ್ಘ‌ಟನೆ ನಡೆದು ಜೀವ ಹಾನಿಯಾದರೆ 5ರಿಂದ 25 ಲಕ್ಷ ರೂ. ವರೆಗೆ ಪರಿಹಾರ ಬರುತ್ತದೆ. ಬಂದಿರುವ ಹಣದಿಂದ ದುರ್ಘ‌ಟನೆ ಸಂಭವಿಸಿದವರ ಕುಟುಂಬಕ್ಕೆ ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಮಟ್ಟದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿವೆ. ಇಂತಹವುಗಳನ್ನು ತಡೆಯಿರಿ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ವಿಠೊಬಾ ಹಿರೆಕುರುಬರ, ಸದಸ್ಯ ಉಸ್ಮಾನ್‌ ಚೌಧರಿ, ಮಲ್ಲಯ್ಯ ಹಿರೇಮಠ, ಗಜಾನನ ನರಗೋ, ಉಮೇಶ ಭಿರನಳ್ಳಿ, ಶಿವಾಜಿ ಮಾಶಾಳ, ಸುಭಾಷ ಸುಲ್ತಾನಪುರ, ವಿಠೊಬಾ ಬಂಕಲಗಿ, ಅರ್ಜುನ್‌ ಸೊನ್ನ, ಆನಂದ ನಾವಿ ಹಾಗೂ ಪೊಲೀಸ್‌ ಸಿಬ್ಬಂದಿ ಸಂತೋಷ ಮಲಘಾಣ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next