ಧಾರವಾಡ: ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಹಾಗೂ ಹತ್ಯೆ ಖಂಡಿಸಿ ಮಂಗಳೂರು ಚಲೋ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಸಮೀಪದ ನರೇಂದ್ರ ಬಳಿ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಧಾರವಾಡ-71 ವಿಧಾನಸಭಾ ಕ್ಷೇತ್ರದ ವತಿಯಿಂದ ಮಂಗಳೂರು ಚಲೋಗೆ ತೆರಳುತ್ತಿದ್ದ ಕಾರ್ಯಕರ್ತರನ್ನುಬೈಪಾಸ್ ರಸ್ತೆಯಲ್ಲಿನ ಟೋಲ್ ಬಳಿ ಪೊಲೀಸರು ತಡೆದರು. ಪೊಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ರಸ್ತೆಯಲ್ಲೇ ಕುಳಿತು ಸರ್ಕಾರ ಮತ್ತು ಪೊಲೀಸರ ವರ್ತನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಖಂಡ ಅಮೃತ ದೇಸಾಯಿ ಮಾತನಾಡಿ, ಬಿಜೆಪಿ-ಸಂಘ ಪರಿವಾರದವರ ಹತ್ಯೆ-ಹಲ್ಲೆಯನ್ನು ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಇದನ್ನು ಖಂಡಿಸಲು ಬಿಜೆಪಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಆದರೆ ಸರ್ಕಾರ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ. ಇಂತಹ ದೌರ್ಜನ್ಯಕ್ಕೆ ಮಣಿಯುವುದಿಲ್ಲ.
ಸೆ.7ರಂದು ಮಂಗಳೂರಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಶ್ಚಿತ ಎಂದರು. ಮುಖಂಡರಾದ ತವನಪ್ಪ ಅಷ್ಟಗಿ, ಪ್ರೇಮಾ ಕೊಮಾರದೇಸಾಯಿ, ನಾಗರಾಜ ಗಾಣಿಗೇರ, ಶಶಿಮೌಳಿ ಕುಲಕರ್ಣಿ, ಈರಯ್ಯ ಚಿಕ್ಕಮಠ, ನಾಗನನೌಡ ಪಾಟೀಲ, ಶಂಕರ ಕೊಮಾರದೇಸಾಯಿ, ರುದ್ರಪ್ಪ ಅರವಾಳ, ಕಲ್ಲನಗೌಡ ಗುರನಗೌಡ್ರ, ವಿನಯ ನಡುವಿನಮನಿ, ಮತ್ತಿತರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ ನಾಯಕ, ಟಿ.ವೆಂಕಟಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಗಳಾದ ಸಂಗಮೇಶ ಪಾಲಭಾವಿ, ಸುಮಾ ನಾಯಕ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಕೊಂಡಿದ್ದರು.