60000 ಜನಸಂಖ್ಯೆಯ ನಾನಿರುವ ಊರಲ್ಲಿ ಎಲ್ಲ ಆಸ್ಪತ್ರೆಗಳನ್ನು ಜಾಲಾಡಿದರೂ ಒಟ್ಟೂ ಹತ್ತು ವೆಂಟಿಲೇಟರ್‌ಗಳು ಸಿಕ್ಕಾವು. ಬರೀ 2 ಪ್ರತಿಶತ ಜನರಿಗೆ ಸೋಂಕು ತಗಲಿದರೂ 1200 ಜನರಿಗೆ ಉಪಚಾರ ಬೇಕು. 240 ಹಾಸಿಗೆಗಳು ಬೇಕು. ಅವರಲ್ಲಿ 30 ಜನರಿಗೆ ವೆಂಟಿ ಲೇಟರ್ ಬೇಕಾದೀತು. ಎಲ್ಲಿಂದ ತರುವುದು? ಕೊನೆಗೆ ಯಾರಿಗೆ ವೆಂಟಿಲೇಟರ್ ಬೇಕೆಂಬುದನ್ನು ಕೋರ್ಟ್ ನಿರ್ಧಾರಿಸಬೇಕಾದೀತು!
ಎಂದಿನಂತೆ ಈಗಲೂ ನಾವು ನಮ್ಮ “ಚಲ್ತಾ ಹೈ’ ಎಂಬ ಅಪ್ಪಟ ಭಾರತೀಯ ಮನಸ್ಥಿತಿಯಲ್ಲಿದ್ದೇವೆ. ಆದರೆ ನಮಗರಿವಿಲ್ಲದೇ ನಿಧಾನವಾಗಿ ಯಮಧರ್ಮ ತನ್ನ ದೂತನನ್ನು ಬದಲಿಸಿ, “ಕೋವಿಡ್’ ಎಂಬ ಹೊಸ ದೂತನೊಂದಿಗೆ ನಮ್ಮನ್ನು ಸುತ್ತುವರಿ ಯುತ್ತಿದ್ದಾನೆ. ಹೊಸ ವರ್ಷದ ಮೊದಲ ವಾರ ಅಲ್ಲೆಲ್ಲೋ ಚೀನಾದಲ್ಲಿದೆ ಎಂದು ಸುಮ್ಮನೆ ನಮ್ಮ ಮೊಬೈಲ್‌ಗಳಲ್ಲಿ ಒಂದಿಷ್ಟು ಸತ್ಯ, ಒಂದಿಷ್ಟು ಸುಳ್ಳು ವಿಡಿಯೋಗಳನ್ನೋ, ಸುದ್ದಿಗಳನ್ನೋ ನೋಡುತ್ತಾ ನಮ್ಮ ಬೆರಗು ಮಿಶ್ರಿತ ಕುತೂಹಲಗಳನ್ನು ತಣಿಸುತ್ತ ಕಾಲ ಹಾಕುತ್ತಿರ ಬೇಕಾದರೆ ಆ ಕೊರೋನಾ ಎಂಬ “ಕಿರೀಟಧಾರಿ’ ತಣ್ಣಗೆ ನಮ್ಮ ತಲೆ ಏರಿದ್ದು ಗೊತ್ತಾಗಲೇ ಇಲ್ಲ.
ವುಹಾನಿನ “ಹಸಿ ಹಸಿ’ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಣಿಗಳ ಅಂತರಂಗದಲ್ಲಿ ಅಡಗಿದ್ದ ವೈರಸ್, ಮನುಷ್ಯನ ಹಸಿವಿಗೋ, ಬಾಯಿ ಚಪಲಕ್ಕೋ ಅವನ ಅಂತರಾಳದಲ್ಲಿ ಸೇರಿ, ತನ್ನ ಸಂತತಿ ಬೆಳೆಸಿ, ವಿಜೃಂಭಿಸಿ, ಅಂತಾರಾಷ್ಟ್ರೀಯ ವಿಮಾನಗಳ ಕ್ಯಾಬಿನ್, ಕಾಕ್‌ಪಿಟ್ಟುಗಳಲ್ಲಿ ಪವಡಿಸಿ ದೂರ ದೇಶಗಳನ್ನು ತಲುಪಿದ್ದಾಯಿತು. ವಿಶ್ವ ಪರ್ಯಟನೆ ಮಾಡುತ್ತಾ ನಮ್ಮ ಪಡಸಾಲೆಗೂ ಅದರ ಪ್ರವೇಶ ವಾಗಿಯೇ ಬಿಟ್ಟಿತು. ಉತ್ತರ ದಿಕ್ಕಿನ ಉರಿ ನಮ್ಮ ಒಲೆಯಲ್ಲೂ ಹತ್ತಿ ಕೊಂಡು ಉರಿಯ ತೊಡಗಿತು. ಯಮಧರ್ಮ ತನ್ನ ಮಾರ್ಚ್ ತಿಂಗಳ ಟಾರ್ಗೆಟೆ ಹೊಂಚು ಹಾಕತೊಡಗಿದ್ದಾನೆ. ನಾವೀಗ ಎಚ್ಚರ ಗೊಳ್ಳದಿದ್ದರೆ ಎಂದೂ ಸುಧಾರಿಸಲು ಸಾಧ್ಯವಾಗದ ಹೊಡೆತ ಖಂಡಿತ. ನಮ್ಮ ಎಂದಿನ ಉಡಾಫೆ ಧೋರಣೆಯನ್ನು ಒಂದಿಷ್ಟು ದಿನ ಕಟ್ಟಿಟ್ಟರೆ ಒಳ್ಳೆಯದು. “ಕೋವಿಡ್’ ಜೊತೆಗೇನೇ ಸುಮ್ಮನೆ ಒಂದು ಸುತ್ತು ಹಾಕಿಬಿಟ್ಟರೆ ಸಾಕು ನಮಗೆ ಅರ್ಥವಾಗಿಬಿಡುತ್ತದೆ, ಮಾಡುವುದೇನೆಂದು. ಅಂಕಿ ಅಂಶಗಳನ್ನು ಸದ್ಯಕ್ಕೆ ಬದಿಗಿಡೋಣ. ಯಾಕೆಂದರೆ ಅದಾಗಲೇ ಸಾವಿರ ಪುಟ ತುಂಬುವಷ್ಟು ಅಂಕಿ ಅಂಶಗಳು ಹರಿಡಾಡಿವೆ. ಅದು 2019ರ ಕೊನೆಯ ವಾರ. ವುಹಾನಿನಲ್ಲಿ ಈ ರೋಗ ಅದೇ ತಾನೇ ಉದಯಿಸಿದಾಗ ಅಲ್ಲಿಯ ವೈದ್ಯನೊಬ್ಬ ಎಚ್ಚರಿಸಿದ್ದ. ಹೊಸದೊಂದು ರೋಗ ಉದ್ಭವವಾದ ಬಗ್ಗೆ. ಆದರೇನು, ಆಳುವವರಿಗೆ ಅದು ಉದಾಸೀನ ಮತ್ತೆ ಅಪರಾಧ. ಕಮ್ಯೂನಿಷ್ಟ ದೇಶದಲ್ಲಿ ವೈದ್ಯನಿಗೆ ಬಂಧನದ ಉಡುಗೊರೆ..! ಆದರೆ ನೋಡ ನೋಡುವುದರಲ್ಲಿ ಕೋವಿಡ್ ಬೆಳೆದು ರಕ್ತ ಬೀಜಾಸುರನಾಗಿ ಬಿಟ್ಟಿತ್ತು. ಆಳುವವರು ಎಚ್ಚರಗೊಂಡು ಕಣ್ಣುಜ್ಜುವು ದರೊಳಗೆ ಪ್ರಾಂತ್ಯದ ತುಂಬೆಲ್ಲ ಕಾರ್ಮೋಡ. ಸತ್ತವರೆಷ್ಟೋ ಉಳಿದವರೆಷ್ಟೋ, ಉಕ್ಕಿನ ಕೋಟೆಯಿಂದ ನಿಜ ಸುದ್ದಿ ಬರಲೇ ಇಲ್ಲ. ಅದಕ್ಕೇ ನೂರೆಂಟು ಕಥೆಗಳು ಹರಿಡಾಡಿಬಿಟ್ಟವು. ನಾವು ಕಥೆ ಕೇಳುತ್ತಾ ಮೈ ಮರೆತಿರ ಬೇಕಾದರೆ ಅದು ಎಲ್ಲ ದೇಶಗಳಲ್ಲಿ ಪಸರಿಸಿಬಿಟ್ಟಿತ್ತು. ನೋವಿನ ಸಂಗತಿ ಎಂದರೆ ಮೊದಲು ಈ ರೋಗ ಕಂಡು ಹಿಡಿದ ವೈದ್ಯನೇ ಈ ರೋಗಕ್ಕೆ ಬಲಿಯಾದುದು. ಅಲ್ಲಿ ಆಸ್ಪತ್ರೆಗಳನ್ನೇನೋ ಕಟ್ಟಿ ನಿಲ್ಲಿಸಿದರು. ಆದರೆ ಜೀವಹಾನಿ ನಿಲ್ಲಿಸಲಾಗಲಿಲ್ಲ. ರೋಗಿ ಜೊತೆಗೆ ಆರೋಗ್ಯ ಸಿಬ್ಬಂದಿಗೂ ಸಮಾಧಿ. ಬಹುಶಃ ಮಾನವ ಇತಿಹಾಸದಲ್ಲಿಯೇ ಆರೋಗ್ಯ ಸಿಬ್ಬಂದಿ ಇಷ್ಟೊಂದು ಪ್ರಮಾಣದ ರೋಗ, ನೋವು, ಸಾವು ಪಡೆದದ್ದಿಲ್ಲ.
ಮುಂದೆ ಒಂದೊಂದು ದೇಶದ್ದೂ ಒಂದೊಂದು ಮನೋಭಾವ. ಒಂದು ಭಾಗದಲ್ಲಿ ಬುದ್ಧಿ ಕಲಿತ ಚೀನಾ ತನ್ನುಳಿದ ಭಾಗದ ಜನರನ್ನು ರಕ್ಷಿಸಲು ಸೈನ್ಯವನ್ನೇ ಕರೆ ತಂದು ನಿಲ್ಲಿಸಿಬಿಟ್ಟಿತು. ಜನರಿಗೆಲ್ಲ ಗೃಹ ಬಂಧನ. ಹೊರ ಬಂದರೆ ಶಿಕ್ಷೆ. ಏನಾಶ್ಚರ್ಯ. ಕಾಳಿYಚ್ಚಿನಂತೆ ಹಬ್ಬ ತೊಡಗಿದ್ದ ಕೋರೋನಾಕ್ಕೆ ಕೈಕಾಲು ಕಟ್ಟಿಬಿಟ್ಟರು. ಒಂದಿಷ್ಟು ಸಮಾಧಾನ. ಅಲ್ಲಿ ಹರಡುವ ಪ್ರಮಾಣ ತಗ್ಗಿಬಿಟ್ಟಿತ್ತು. ಒಂದಿಷ್ಟು ತಹ ಬಂದಿಗೆ ಬಂದುಬಿಟ್ಟಿತ್ತು. ಆದರೆ ಜೈತ್ರಯಾತ್ರೆಯ ಹುರುಪಿನಲ್ಲಿದ್ದ ವೈರಸ್ ದಕ್ಷಿಣ ಕೊರಿಯಾ ಹಾಗೂ ಇಟಲಿಯಲ್ಲಿ ಹೊಸ ಗೂಡು ಕಟ್ಟಿ ಬಿಟ್ಟಿತು. ಇಟಲಿಯ ತುಂಬೆಲ್ಲ ಜನ. ಮೇಲೆ ಅಲಕ್ಷ್ಯ. ಇದೇನು ಮಾಡೀತೆಂಬ ಉಡಾಫೆ. ನೋಡ ನೋಡುವುದರಲ್ಲಿ ಇಡೀ ಇಟಲಿ ಯನ್ನು ಆವರಿಸಿಬಿಟ್ಟಿತ್ತು, ಕೋವಿಡ್-19 ಎಂಬ ಭೀಕರ ರೋಗ. ದಕ್ಷಿಣ ಕೊರಿಯಾದ್ದೊಂದು ವಿಚಿತ್ರ ಕಥೆ. ಬರೀ 30 ಕೇಸುಗಳಾದಾಗ ಅದನ್ನು ನಿಯಂತ್ರಿಸುವಲ್ಲಿ ಸಫಲ. ಆದರೆ 31ನೆಯವಳು ಮಾಡಿದ ಅನಾಹುತ ಈಗ ಜಗದ್ವಿಖ್ಯಾತ. ಅವಳನ್ನು ಹೊರಬಿಟ್ಟು ಪರಿತಪಿಸಿ ಬಿಟ್ಟಿತು, ಇಡೀ ದೇಶ. ಅವಳು ಊರೆಲ್ಲ ಸುತ್ತಾಡಿ ಸಾವಿರಾರು ಜನರಿ ಗೆ ಕೋರೋನಾ ಪ್ರಸಾದ ಹಂಚಿಬಿಟ್ಟಿದ್ದಳು. ಆದರೆ ಬದಿಯಲ್ಲೇ ಇದ್ದ ಸಿಂಗಪುರ, ಜಪಾನ್, ಥಾಯ್‌ಲ್ಯಾಂಡ್, ಹಾಂಗ್‌ಕಾಂಗ್‌ರೋಗ ನಿಯಂತ್ರಿಸುವಲ್ಲಿ ಸಫಲ. 2003ರಲ್ಲಿ SAARS ಎಂಬ ಇನ್ನೊಂದು ಕೊರೊನಾ ವೈರಸ್ ರೋಗ ಬಂದಾಗ ಪಾಠ ಕಲಿತಿದ್ದರಲ್ಲ.
ಈಗ ಚಿತ್ರಣ ಸ್ಪಷ್ಟ. ರೋಗ ಬಂದರೆ ಗುಣಪಡಿಸುವ ಕರಾರುವಾಕ್ ಔಷಧಿಗಳಿಲ್ಲ. ರೋಗ ಬರದಂತೆ ಮಾಡಲು ವ್ಯಾಕ್ಸಿನ್ ಸದ್ಯಕ್ಕೆ ಇಲ್ಲ. ಪ್ರಯತ್ನಗಳೇನೋ ಅವಿರತ ಸಾಗಿವೆ. ಜರ್ಮನಿಯ ಒಂದು ಸಂಸ್ಥೆ ಒಂದಿಷ್ಟು ಆಶಾಭಾವನೆ ತೋರಿಸಿದೆ. ಅಮೆರಿಕ ಅದಾಗಲೇ ಅದನ್ನು ಸಾರಾಸಗಟು ಕೊಂಡುಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಮಾನವತೆ ಮಾರಾಟಗೊಳ್ಳಲಿದೆ. ಆದರೆ ಅದು ಯಾವಾಗ ದೊರಕೀತೋ ಗೊತ್ತಿಲ್ಲ. ಒಂದು ಆಶಾದಾಯಕ ಸಂಗತಿಯೆಂದರೆ ಕೇಸುಗಳ ಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ. ಆದರೆ ವೈರಸ್ ಮುನ್ನುಗ್ಗುವ ವೇಗ ಮಾತ್ರ ಹೆದರಿಕೆ ಬರು ವಷ್ಟು. ಹೀಗಾಗಿ ನಾವು ಗುರುತಿಸಲ್ಪಟ್ಟ ಒಂದು ರೋಗಿಯ ಹಿಂದೆ ಇನ್ನೂ ಗುರುತಿಸಲ್ಪಡದ ಸುಮಾರು 3 ರೋಗಿಗಳಿದ್ದಾರೆ. ಅವರನ್ನು ಗುರುತಿ ಸುವುದಕ್ಕೂ ಮೊದಲು ಪ್ರತಿಯೊಬ್ಬರೂ 3 ಜನರಿಗೆ ರೋಗ ಹಚ್ಚಲಿ ದ್ದಾರೆ, ಅನ್ನುವುದು ನೆನೆದಾಗ ರೋಗದ ಗಂಭೀರತೆ ಅರ್ಥ ವಾಗು ತ್ತದೆ. ಅದೊಂದು ಸರಪಳಿ ಕ್ರಿಯೆ, ಥೇಟ್ ಅಣು ಬಾಂಬಿನಂತೆ.
ಭಾರತ ಈಗಿನ್ನೂ 2ನೆಯ ಹಂತದಲ್ಲಿದೆ. 3ನೆಯ ಹಂತ ತಲುಪುವುದಿಲ್ಲ, ಎಂಬ ಆಶಾಭಾವನೆಯೇನೋ ಇದೆ. ಆದರೆ ಭರವಸೆ ಇಲ್ಲ. 3ನೆಯ ಹಂತ ತಲುಪಿದರೆ ನೋಡ ನೋಡು ವುದರಲ್ಲಿ 4ನೆಯ ಹಂತ ಬಂದೇ ಬಿಡುತ್ತದೆ. ಆಗ ನೋಡಿ ಎಲ್ಲ ಅಯೋಮಯ. 20% ರೋಗಿಗಳಿಗೆ ಆಸ್ಪತ್ರೆ ಬೇಕು. 5% ಜನರನ್ನು ತೀವ್ರ ನಿಗಾ ಘಟಕ ದಲ್ಲಿ ಡಬೇಕು. 2.5% ಜನರಿಗೆ ವೆಂಟಿಲೆಟರ್ ಬೇಕು. ಉದಾ ಹರಣೆಗೆ ಸುಮಾರು 60000 ಜನಸಂಖ್ಯೆಯ ನಾನಿರುವ ಊರಲ್ಲಿ ಎಲ್ಲ ಆಸ್ಪತ್ರೆ ಗಳನ್ನು ಜಾಲಾಡಿದರೂ ಒಟ್ಟೂ ಹತ್ತು ವೆಂಟಿಲೇಟರ್‌ಗಳು ಸಿಕ್ಕಾವು. ಬರೀ ಎರಡು ಪ್ರತಿಶತ ಜನರಿಗೆ ಸೋಂಕು ತಗಲಿದರೂ 1200 ಜನರಿಗೆ ಉಪಚಾರ ಬೇಕಾಗುತ್ತದೆ. 240 ಹಾಸಿಗೆಗಳು ಬೇಕು. ಅವರಲ್ಲಿ 30 ಜನರಿಗೆ ವೆಂಟಿಲೇಟರ್ ಬೇಕಾದೀತು. ಎಲ್ಲಿಂದ ತರುವುದು? ಕೊನೆಗೆ ಯಾರಿಗೆ ವೆಂಟಿಲೇಟರ್ ಕೊಡುವುದು ಎಂಬುದನ್ನು ಕೋರ್ಟ್ ನಿರ್ಧ ರಿ ಸಬೇಕಾದೀತು! 1200 ಜನರನ್ನು ಉಪಚರಿಸಲು ಕನಿಷ್ಟ 120 ಜನ ಸಿಬ್ಬಂದಿ ಬೇಕು. ಅದೂ ಅವರು 24 ಗಂಟೆ ಕರ್ತವ್ಯದ ಮೇಲಿರಬೇಕು. ಇಲ್ಲವೇ ಎಂಟು ಗಂಟೆ ಕರ್ತವ್ಯ ಮಾಡಿದರೆ 360 ಜನ ಬೇಕು. ಎಲ್ಲಿದ್ದಾರೆ ಅಷ್ಟು ಜನ? ಅವರಿಗೆ ದಿನಕ್ಕೆ 360 ಮಾಸ್ಕ್ಗಳು. ಅದೂ ಸಾದಾ ಮಾಸ್ಕ್ ಗಳಲ್ಲ. N 95ದಂಥವೇ ಬೇಕು. ರೋಗಿಗಳಿಗೆ ಸಾವಿರಾರು ಮಾಸ್ಕ್ಗಳು ಬೇಕು. ಎಲ್ಲಿವೆ ಅಷ್ಟು ಮಾಸ್ಕ್ಗಳು? ಅಮೆರಿಕದಂಥ ಅಮೆರಿಕಾದಲ್ಲೇ ತಮ್ಮ ಆರೋಗ್ಯ ಸಿಬ್ಬಂದಿಗೆ ಅವಶ್ಯವಿರುವುದರ 1% ದಷ್ಟು ಮಾತ್ರವೇ ಮಾಸ್ಕ್ಗಳಿವೆಯಂತೆ. ಸಿಂಗಾಪುರ ಮಾತ್ರವೇ ತಮಗೆ ಬೇಕಾದಷ್ಟು ಮಾಸ್ಕ್ ಗಳನ್ನು ಹೊಂದಿದೆ ಯಂತೆ. ನಮ್ಮ ದೇಶದ ಪರಿಸ್ಥಿತಿ ಗೊತ್ತಿಲ್ಲ. ದಾರಿ ತೋಚದ ಸ್ಥಿತಿ.
ಹಾಗಾದರೆ ಮಾಡುವುದೇನೀಗ? ಸದ್ಯಕ್ಕೆ Social Distancing ಎಂಬ ಮುಂಜಾಗ್ರತೆ ಬಿಟ್ಟರೆ ನಮ್ಮಲ್ಲಿ ಬೇರಾವುದೇ ಅಸ್ತ್ರವಿಲ್ಲ. ಅಂದರೆ ಒಬ್ಬರಿಂದ ಇನ್ನೊಬ್ಬರು ದೂರವಿರುವುದು. ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕರಾರುವಾಕ್ಕಾಗಿ ಮಾಡುವ ಜಾಣತನ ಅಥವಾ ಮನಸ್ಸು ನಮ್ಮಲ್ಲಿಲ್ಲ. ಮಾಸ್ಕ್ ಬೇಕೆಂದರೂ ಸಿಗುವುದು ಸುಲಭ ವಿಲ್ಲ. ಮತ್ತೆ ನಮ್ಮವರ ಅಲಕ್ಷ್ಯ, ಕಾನೂನು ಪಾಲಿಸದ ಧೋರಣೆ ಸರ್ವ ವೇದ್ಯ. ದಿನಕ್ಕೆ ಸುಮಾರು 500 ಜನ ರಸ್ತೆ ಅಪಘಾತದಲ್ಲಿ ಸಾಯು ತ್ತಿರುವುದು ಗೊತ್ತಿದ್ದೂ ಹೆಲ್ಮೆಟ್ ಧರಿಸದ, ಸೀಟ್ ಬೆಲ್ಟ್ ಹಾಕದ ವೀರ ಮನಸ್ಥಿತಿ ನಮ್ಮದು… “ಅಪಘಾತ ಬೇರೆಯವರಿಗೆ ಸಂಭವಿಸುತ್ತದೆ, ನಮ ಗಲ್ಲ’ ಎಂದು ದೃಢವಾಗಿ ನಂಬಿದವರು ನಾವು..ರಸ್ತೆ ನಿಯಮಗಳನ್ನು ಪಾಲಿ ಸದೆ, ಎಡಕ್ಕೋ ಬಲಕ್ಕೋ ನುಗ್ಗಿ ಕೈ ಮಾಡಿದ ಪೊಲೀಸನೆಡೆಗೆ ದುರು ಗುಟ್ಟಿ ನೋಡುತ್ತಾ ಸಾಗುವ ರೂಢಿ ಬೆಳೆಸಿಕೊಂಡವರು. ಆದರೆ ಇಲ್ಲಿ ನೆನಪಿರಲಿ, ಕೊರೊನಾ ಏನಾದರೂ ನಮ್ಮ ದೇಶವನ್ನು ಆವರಿಸಿ ಕೊಂಡರೆ ಅಸ್ಪತ್ರೆ ಬಿಡಿ ಸ್ಮಶಾನದಲ್ಲೂ ಜಾಗ ಸಿಗುವುದಿಲ್ಲ…
ನಾನು ಹೆದರಿಸುತ್ತಿಲ್ಲ. ಅಲಕ್ಷ ಮಾಡಿದರೆ ಏನಾದೀತು, ಎನ್ನುವುದನ್ನು ಹೇಳುತ್ತಿದ್ದೇನೆ. ಒಂದಿಷ್ಟು ಜನರಿಗೆ ಇದು ಅತಿಶಯ ಕ್ರಿಯೆ ಅನಿಸೀತು. ಆದರೆ ರೋಗ ಉಲ್ಬಣಿಸಿದ ಮೇಲೆ ದಾರಿ ಯಾವುದಯ್ಯ ಅನ್ನುವುದಕ್ಕಿಂತ ಅಷ್ಟಿಷ್ಟು ಅತಿಶಯಗಳಿರಲಿ ಬಿಡಿ. ಅದಕ್ಕೇ ಮನೆಯಲ್ಲಿರಿ..ಸುರಕ್ಷಿತವಾಗಿರಿ….!!
ಜಾತ್ರೆಗಳು, ದೇವರುಗಳು, ಪಾದಯಾತ್ರೆ, ಪ್ರವಾಸಗಳು, ಮಾಲ್‌ಗಳು, ರೆಸಾರ್ಟ್‌ಗಳು, ಸೀಮಂತ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು, ಸಾಮಾಜಿಕ ಕೊಡುಕೊಳ್ಳುವಿಕೆಗಳು ಮುಂದಿನ ವರ್ಷವೂ ದೊರೆತಾವು….!
ಈಗ ಎಚ್ಚರಗೊಳ್ಳ ದಿದ್ದರೆ ಸುಧಾರಿಸಲು ಸಾಧ್ಯವಾಗದ ಹೊಡೆತ ಖಂಡಿತ. ನಮ್ಮ ಎಂದಿನ ಉಡಾಫೆ ಧೋರಣೆಯನ್ನು ಸ್ವಲ್ಪ ದಿನ ಕಟ್ಟಿಟ್ಟರೆ ಒಳ್ಳೆಯದು.
ಜಾತ್ರೆಗಳು, ಪ್ರವಾಸಗಳು, ಮಾಲ್‌ಗಳು,ಸೀಮಂತ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು ಮುಂದಿನ ವರ್ಷವೂ ದೊರೆತಾವು…
– ಡಾ.ಶಿವಾನಂದ ಕುಬಸದ